ನಡೆದಾಡುವ ದೇವರ ಗುಡಿಯಲ್ಲಿ ನಿರಂತರ ಅನ್ನದಾಸೋಹ

 Distribution  prasad  continuous in the Siddaganga Math

22-01-2019

ಶತಮಾನದ ಸಂತ ಶ್ರೀಸಿದ್ಧಗಂಗಾಶ್ರೀಗಳು ನಿನ್ನೆ ಮಧ್ಯಾಹ್ನ 11.44 ರ ವೇಳೆಗೆ ಲಿಂಗೈಕ್ಯರಾಗಿದ್ದರೂ ಶ್ರೀಮಠದಲ್ಲಿ ಅನ್ನದಾಸೋಹ ನಿಂತಿಲ್ಲ. ಸಹಜವಾಗಿ ಯಾರಾದ್ರೂ ಸ್ವರ್ಗಸ್ಥರಾದಾಗ ಊಟೋಪಚಾರದ ವ್ಯವಸ್ಥೆಯನ್ನು ನಿಲ್ಲಿಸಲಾಗುತ್ತದೆ. ಆದರೆ ತ್ರಿವಿಧ ದಾಸೋಹಿ, ಕರ್ಮಯೋಗಿ ಶ್ರೀಶಿವಕುಮಾರಶ್ರೀಗಳು ಎಂದಿಗೂ ಯಾರು ಹಸಿವಿನಿಂದ ಇರಬಾರದು ಎಂದಿದ್ದರಿಂದ ಶ್ರೀಗಳ ಗೌರವಾರ್ಥವಾಗಿ ಶ್ರೀಗಳ ದರ್ಶನಕ್ಕೆ ಬಂದ ಎಲ್ಲರಿಗೂ ಪ್ರಸಾದ ಭೋಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 

ನಿನ್ನೆ ಮಧ್ಯಾಹ್ನ 11.44 ಕ್ಕೆ ಶ್ರೀಗಳು ನಿಧನರಾದರೂ ಕೂಡ ಶ್ರೀಗಳ ಆಶಯದಂತೆ ಶ್ರೀಮಠದ ಮಕ್ಕಳ ಊಟವಾದ ಬಳಿಕ ಅಂದ್ರೆ 2 ಗಂಟೆ ವೇಳೆಗೆ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಶ್ರೀಗಳ ನಿಧನದ ವಿಚಾರ ಘೋಷಣೆಯಾಗುತ್ತಿದ್ದಂತೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಜನರು ಸಿದ್ಧಗಂಗೆಗೆ ಹರಿದು ಬರುತ್ತಿದ್ದು, ಬಂದ ಎಲ್ಲ ಭಕ್ತರಿಗೂ ಪ್ರಸಾದ ಭೋಜನ ವಿತರಿಸಲಾಗುತ್ತಿದೆ. ಅನ್ನ ಸಾರು ಪಾಯಸ ರಾತ್ರಿ ವಿತರಿಸಲಾಗಿದ್ದು, ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು ಕೇಸರಿಬಾತು ವಿತರಿಸಲಾಗಿದೆ. ಇನ್ನು ಮಧ್ಯಾಹ್ನಕ್ಕೂ ಅನ್ನ ಸಾಂಬಾರ ವಿತರಣೆ ನಡೆದಿದೆ. ಅಹೋರಾತ್ರಿಯೂ ಪ್ರಸಾದ ವಿತರಣೆ ನಡೆಸಲಾಗಿದ್ದು, ಶ್ರೀಮಠದ ಸಿಬ್ಬಂದಿಗಳು, ಮಕ್ಕಳು ದಾಸೋಹದಲ್ಲಿ ನಿರತರಾಗಿದ್ದಾರೆ. 

ಕೇವಲ ಸಿದ್ಧಗಂಗಾ ಮಠದಲ್ಲಿ ಮಾತ್ರವಲ್ಲದೇ ತುಮಕೂರಿಗೆ ತೆರಳುವ ಮಾರ್ಗದ ಇಕ್ಕೆಲಗಳಲ್ಲಿ ಹಾಗೂ ತುಮಕೂರು  ನಗರದಾದ್ಯಂತೂ ಭಕ್ತರು ಶ್ರೀಗಳ ದರ್ಶನಕ್ಕೆ ಬರುವ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದಾರೆ. ಒಟ್ಟಿನಲ್ಲಿ ಸಿದ್ಧಗಂಗೆಯಲ್ಲಿ ಶ್ರೀಗಳು ಸ್ವರ್ಗಸ್ಥರಾದ ಕ್ಷಣದಲ್ಲೂ ಅನ್ನದಾಸೋಹ ನಿರಂತರವಾಗಿ ನಡೆದಿದ್ದು, ಶ್ರೀಗಳ ಆಶಯವನ್ನು ಕಾರ್ಯರೂಪಕ್ಕೆ ತರುವ ಕಾರ್ಯದಲ್ಲಿ ನಿರತವಾಗಿರುವ ಶ್ರೀಮಠದ ಆಡಳಿತಮಂಡಳಿ ಶ್ಲಾಘನೆಗೆ ಪಾತ್ರವಾಗಿದೆ. 
ಇದುವರೆಗೂ ಅಂದಾಜು 13 ಲಕ್ಷ ಜನರು ಶ್ರೀಗಳ ದರ್ಶನ ಪಡೆದಿದ್ದಾರೆ ಎನ್ನಲಾಗಿದ್ದು, ಸಂಜೆ ವೇಳೆಗೆ  ಈ ಸಂಖ್ಯೆ 20 ಲಕ್ಷ ದಾಟುವ ನೀರಿಕ್ಷೆ ಇದೆ. ರಾಜಕೀಯ ಮುಖಂಡರು, ಕೇಂದ್ರ ಸಚಿವರು, ಸಂತರು, ಸ್ವಾಮೀಜಿಗಳು, ಸಿನಿಮಾ ನಟರು ಹೀಗೆ ಎಲ್ಲ ರಂಗದ ಗಣ್ಯರು ಸಿದ್ಧಗಂಗೆಗೆ ಬಂದು ಶ್ರೀಗಳಿಗೆ ನಮಿಸಿ ಕೃತಾರ್ತರಾಗುತ್ತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Anna Dasoha #Continue #Siddaganga Math #Tumkuru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ