ಸಂಜೆ ಸಿದ್ಧಗಂಗಾಶ್ರೀಗಳ ಅಂತ್ಯಸಂಸ್ಕಾರ

Today Evening Siddagangashree funeral

22-01-2019

ನಿನ್ನೆ ಶಿವೈಕ್ಯರಾದ ನಡೆದಾಡುವ ದೇವರು ಸಿದ್ಧಗಂಗಾಶ್ರೀಗಳ ಅಂತ್ಯಸಂಸ್ಕಾರ ಇಂದು ಸಂಜೆ 5 ಗಂಟೆ ವೇಳೆಗೆ ನಡೆಯಲಿದೆ. ಶ್ರೀಗಳು 37 ವರ್ಷಗಳ ಹಿಂದೆ ತಾವೆ ಸ್ವತಃ ಗುರುತಿಸಿ ಸಿದ್ಧಪಡಿಸಿಕೊಂಡಿರುವ ಸಮಾಧಿ ಸ್ಥಳದಲ್ಲೆ ಸಮಾಧಿಕಾರ್ಯ ನಡೆಯಲಿದ್ದು, ನಾಡಿನ ಹಲವು ಸಂತರ ಸಮ್ಮುಖದಲ್ಲಿ ಶ್ರೀಗಳ ಆಶಯದಂತೆ ಅಂತಿಮ ವಿಧಿವಿಧಾನಗಳು ನಡೆಯಲಿವೆ. 

1930 ರಲ್ಲಿ ಶ್ರೀಮಠದ ಉತ್ತರಾಧಿಕಾರಿಯಾಗಿ ಕಾರ್ಯ ಆರಂಭಿಸಿದ ಶ್ರೀಗಳು ತ್ರಿವಿಧ ದಾಸೋಹದ ಮೂಲಕವೇ ವಿಶ್ವವೆ ತಿರುಗಿನೋಡುವಂತ ಸಾಧನೆ ಮಾಡಿದವರು. 1988 ರಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಶಿಷ್ಯ ಸ್ವೀಕಾರ ಮಾಡಿದ ಶ್ರೀಗಳು ಅದೇ ಸಮಯದಲ್ಲಿ ತಮ್ಮ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು. ಅಷ್ಟೆ ಅಲ್ಲ ಅಲ್ಲಿ ಸಮಾಧಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ತಮ್ಮ ಪಾದ ಇಟ್ಟು ಅಳತೆಯನ್ನು ನೋಡಿದ್ದರು. 

ನಿನ್ನೆ ಮಧ್ಯಾಹ್ನ 11.44 ರ ವೇಳೆಗ ಶ್ರೀಗಳು ನಿಧನರಾದ ಬಳಿಕ ಇದೀಗ ಈ ಸಮಾಧಿ ಸ್ಥಳವನ್ನು ಶುದ್ಧಿಗೊಳಿಸಿ ಅಂತ್ಯಕ್ರಿಯೆಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶ್ರೀಗಳು ತಮ್ಮ ಕ್ರಿಯಾಕರ್ಮ ಹೇಗೆ ನಡೆಯಬೇಕೆಂದು ಉಯಿಲಿನಲ್ಲಿ ಉಲ್ಲೇಖಿಸಿದ್ದು, ಅವರ ಆಶಯದಂತೆ ಸಮಾಧಿಕಾರ್ಯ ನಡೆಯಲಿದೆ. ಸೂರ್ಯಾಸ್ಥದ ಒಳಗೆ ಸಮಾಧಿ ಕಾರ್ಯ ಮುಗಿಯಲಿದೆ.ಶ್ರೀಗಳ ಪಾರ್ಥೀವ ಶರೀರವನ್ನು ಮಧ್ಯಾಹ್ನ 3 ಗಂಟೆಗೆ ಗೋಸಲ ಮಂಟಪ ವೇದಿಕೆಯಿಂದ  ಕ್ರಿಯಾ ಸಮಾಧಿ ಭವನದ ತನಕ ಮೆರವಣಿಗೆಯಲ್ಲಿ ತರಲಾಗುತ್ತದೆ. ಬಳಿಕ ಗದ್ದುಗೆ ಶುದ್ಧೀಕರಣ, ಕಲಶಪೂಜೆ,ಹೊಸ್ತಿಲ ಪೂಜೆ,ಅಷ್ಟದಿಕ್ಪಾಲಕರ ಪೂಜೆ,ಸಪ್ತಋಷಿಗಳ ಪೂಜೆ ನೆರವೇರಿಸಲಾಗುತ್ತದೆ.

ಬಳಿಕ ಶ್ರೀಗಳು ತ್ರಿಕಾಲ ಪೂಜಿಸುತ್ತಿದ್ದ ಬೆಳ್ಳಿ ಇಷ್ಟಲಿಂಗಕ್ಕೆ ಪೂಜೆ ಅಭಿಷೇಕ ಮಾಡಿ, ರುದ್ರಪಠಿಸಲಾಗುತ್ತದೆ,  ಬಳಿಕ ರುದ್ರಾಕ್ಷಿ ಪೀಠದಲ್ಲಿ ಸಿದ್ಧಗಂಗಾಶ್ರೀಗಳ ಶರೀರವನ್ನು ಕೂರಿಸಿ ಮಂಗಲ ಸ್ನಾನ, ಅಭಿಷೇಕ ಪೂಜೆ ಸಲ್ಲಿಸಿ ಅಂತಿಮವಾಗಿ ಮರಳು,ಮಣ್ಣು,ಉಪ್ಪು ಮಿಶ್ರಿತ ಸಮಾಧಿಯಲ್ಲಿ ಶರೀರ ಕೂರಿಸಿ ಭಸ್ಮ,ವಿಭೂತಿ ಹಾಗೂ ಬಿಲ್ವಪತ್ರೆಯಿಂದ ತುಂಬಲಾಗುತ್ತದೆ. ಆದರೆ ಈ ಅಂತ್ಯಸಂಸ್ಕಾರದ ವಿಧಿಗಳು ಖಾಸಗಿಯಾಗಿ ನಡೆಯಲಿದ್ದು, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.  


ಸಂಬಂಧಿತ ಟ್ಯಾಗ್ಗಳು

#Siddaganga Shree #Evening #Funeral #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ