ಕಾರವಾರದಲ್ಲಿ ಬೋಟು ಮುಳುಗಿ 8 ಸಾವು ಹಲವರು ಕಣ್ಮರೆ

 A boat drowned in the Arabian Sea 8 deaths

21-01-2019

ಜಾತ್ರೆಯಿಂದ ವಾಪಸ್ಸಾಗುತ್ತಿದ್ದ ಬೋಟು ಮುಳಗಿದ ಪರಿಣಾಮ ಎಂಟು ಮಂದಿ ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೂರ್ಮಗಡ ನಡುಗಡ್ಡೆ ಜಾತ್ರೆಗೆ ತೆರಳುವ ಸಲುವಾಗಿ ಬೋಟಿನಲ್ಲಿ 25ಕ್ಕೂ ಅಧಿಕ ಮಂದಿ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.

ಇದೇ ವೇಳೆ 10 ಮಂದಿ ರಕ್ಷಣೆ, 8 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮೊಕ್ಕಾಂ ಹೂಡಿದ್ದು, ಕೋಸ್ಟ್‌ಗಾರ್ಡ್ ಪೊಲೀಸರು, ಮೀನುಗಾರರಿಂದ ಶೋಧ ಕಾರ್ಯ ಮುಂದುವರೆದಿದೆ.

ದುರಂತದಲ್ಲಿ ಮೃತಪಟ್ಟ ಎಂಟು ಮೃತದೇಹಗಳನ್ನು ಈಗಾಗಲೇ ಹೊರತೆಗೆಯಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ. ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ಮೀನುಗಾರರು ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ನಕುಲ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೂರ್ಮಗಡ ಒಂದು ಅರಬ್ಬಿ ಸಮುದ್ರದ ದ್ವೀಪವಾಗಿದ್ದು, ಕಾರವಾರದಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿದೆ.

ಸಚಿವ ದೇಶಪಾಂಡೆ ದಿಗ್ಭ್ರಮೆ :  ಕಾರವಾರದ ಕೂರ್ಮಗಢ ದ್ವೀಪದ ಬಳಿ ದೋಣಿ ಮುಳುಗಿ, ಏಳು ಜನ ಸಾವಿಗೀಡಾಗಿರುವ ದುರಂತಕ್ಕೆ ಕಂದಾಯ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ದುರಂತದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿರುವ ಸಚಿವರು, ಅವಘಡದ ಸುದ್ದಿ ತಿಳಿದ ಕೂಡಲೇ ಸ್ಥಳದತ್ತ ಹೊರಟಿದ್ದಾರೆ.

“ಈ ಘಟನೆ ತುಂಬಾ ದುರದೃಷ್ಟಕರವಾದುದು. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಸರಕಾರದ ಕಡೆಯಿಂದ ಎಲ್ಲ ನೆರವನ್ನೂ ಒದಗಿಸಲಾಗುವುದು. ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೂ ಸೂಕ್ತ ನೆರವು ನೀಡಲಾಗುವುದು,’’ ಎಂದು ಸಚಿವರು ಹೇಳಿದ್ದಾರೆ.

“ದುರಂತದ ಸ್ಥಳದಲ್ಲಿ ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ಮೀನುಗಾರರು ಕೂಡಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಜಿಲ್ಲಾಧಿಕಾರಿ ಕೂಡ ಸ್ಥಳಕ್ಕೆ ತೆರಳಿದ್ದು ಕಾರ್ಯಾಚರಣೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ,’’ ಎಂದು ದೇಶಪಾಂಡೆ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Arabian Sea #Karwar # Boat drowned #8 Died


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ