ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ 

 Siddaganga Shree Health Condition is Serious

21-01-2019

ಬೆಳಗಿನ ಜಾವ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆತಂಕದ ವಾತಾವರಣ ಉಂಟಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಠದತ್ತ ಹರಿದುಬರುತ್ತಿದ್ದಾರೆ. ಸ್ವಾಮೀಜಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದ್ದು, ಕೃತಕ ಉಸಿರಾಟ ಆಳವಡಿಸಿ ಚಿಕಿತ್ಸೆ ಮುಂದುವರೆಸಿದ್ದೇವೆ. ಆದರೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ.ಪರಮೇಶ್ವರ್ ಹೇಳಿದ್ದಾರೆ.

 
ಇನ್ನು ಸ್ವಾಮೀಜಿಯವರ ಆರೋಗ್ಯ ಗಂಭೀರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ತಮ್ಮ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮಠಕ್ಕೆ ತೆರಳಿದ್ದಾರೆ. ಸ್ವಾಮೀಜಿಯವರಿಗೆ ಬೆಳಗಿನ ಜಾವ ಉಸಿರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಬಳಿಕ ಕೊಂಚ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದರೂ ಆತಂಕ ಹೆಚ್ಚುತ್ತಲೆ ಇದೆ. 

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ಹಿರಿಯ ಸಚಿವರು ಮಠಕ್ಕೆ ದೌಡಾಯಿಸಿದ್ದಾರೆ. ಸಧ್ಯ ಹಳೆ ಮಠದಲ್ಲೆ ಸ್ವಾಮೀಜಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, ಸ್ವಾಮೀಜಿಯನ್ನು ನೋಡಲು ಬಂದ ಭಕ್ತರಿಗೆ ಸರತಿ ಸಾಲಿನಲ್ಲಿ ಶ್ರೀಗಳ ದರ್ಶನದ ಅವಕಾಶ ಕಲ್ಪಿಸಲಾಗಿದೆ. 


ಮುಂಜಾಗ್ರತಾ ಕ್ರಮವಾಗಿ ಮಠದ ಸುತ್ತ ಪೊಲೀಸ್ ಬಿಗಿಭದ್ರತೆ ಹೆಚ್ಚಿಸಲಾಗಿದ್ದು, 20 ಸಾವಿರ ಪೊಲೀಸರನ್ನು ಭದ್ರತೆಗೆ ನೇಮಿಸಲಾಗಿದೆ. ಶ್ರೀಮಠದಲ್ಲಿ ಬೃಹತ್ ಸ್ಕ್ರೀನ್‍ಗಳನ್ನು ಕೂಡ ಅಳವಡಿಸಲಾಗುತ್ತಿದೆ. ಇನ್ನು ಡಿಜಿ ಐಜಿಪಿ ಸೇರಿದಂತೆ ಹಲವು ಜಿಲ್ಲೆಗಳ ಎಸ್‍ಪಿಗಳು ಭದ್ರತೆಗೆ ಆಗಮಿಸಿದ್ದು, ಯಾವುದೆ ಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗುವಂತೆ ಭದ್ರತೆ ವ್ಯವಸ್ಥೆ 
ಕಲ್ಪಿಸಲಾಗುತ್ತಿದೆ. ಮಠದಲ್ಲೆ ಪೊಲೀಸ್ ಕಂಟ್ರೋಲ್ ರೂಂ ಕೂಡ ಸಿದ್ದಪಡಿಸಲಾಗಿದೆ. ಇನ್ನು ಮಠದ ಮೂಲಗಳು ಸ್ವಾಮೀಜಿ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ ಎಂದಿದ್ದರೂ ರಾಜ್ಯದ ಜನರಲ್ಲಿ ಹಾಗೂ ಮಠದ ಭಕ್ತರಲ್ಲಿ ಆತಂಕ ಮನೆಮಾಡಿದ್ದು, ಶ್ರೀಗಳು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Siddaganga Shree # Serious #Health #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ