ಸಂಸತ್ತಿನಲ್ಲಿ ಜನರ ಧ್ವನಿಯಾಗಲು ಚುನಾವಣೆ ಸ್ಪರ್ಧೆ- ಪ್ರಕಾಶ್ ರೈ

Election Campaign to Make People Voice In Parliament - Prakash Rai

18-01-2019

ಪ್ರಸ್ತುತ ರಾಜಕಾರಣ ಅಯೋಮಯವಾಗಿದ್ದು, ಸರ್ಕಾರಕ್ಕೆ ಸಾಮಾನ್ಯ ಪ್ರಜೆಗಳ ಬಗ್ಗೆ ಎಳ್ಳಷ್ಟು ಕಾಳಜಿಯಿಲ್ಲ. ಆದ್ದರಿಂದ ನಾಗರಿಕರ ದನಿಯಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ. ಸೆಂಟ್ರಲ್ ಇದು ನನ್ನ ಕ್ಷೇತ್ರ. ಮಾರ್ತಾಸ್ ಆಸ್ಪತ್ರೆಯಲ್ಲಿ ಹುಟ್ಟಿದ್ದ ನಾನು ಶಿಕ್ಷಣವನ್ನು ಇಲ್ಲೇ ಪಡೆದಿದ್ದೇನೆ. 

ರಂಗಭೂಮಿಯಿಂದ ಹಿಡಿದು, ಸಿನಿಮಾ ಜಗತ್ತು ಪ್ರವೇಶಿಸಿದ್ದು, ಇದೇ ಪ್ರದೇಶದಿಂದಲೇ. ಇಲ್ಲಿ ಅನೇಕ ನೆನಪುಗಳಿವೆ. ಸುಮಾರು ಎರಡು ದಶಕಗಳಿಂದ ಇಲ್ಲಿಯ ಜನ ನನ್ನನ್ನು ಹತ್ತಿರದಿಂದ ಬಲ್ಲವರು. ಎಲ್ಲಾ ಜಾತಿ, ಧರ್ಮ ಹಾಗೂ ಬಹು ಭಾಷೆಯ ಜನರು ಇಲ್ಲಿ ಏಕತೆಯಿಂದ ವಾಸಿಸುತ್ತಾರೆ. ಸೆಂಟ್ರಲ್ ನನ್ನ ಮಿನಿ ಇಂಡಿಯಾ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು. ಇಲ್ಲಿಯವರೆಗೂ ಜನರ ಪರವಾಗಿ ಎಷ್ಟೇ ಪ್ರಶ್ನೆಗಳನ್ನು ಎತ್ತಿದರು, ಆ ಕೂಗು ಸರ್ಕಾರದ ಕಿವಿಗೆ ಬೀಳುತ್ತಿಲ್ಲ, ಹೀಗಾಗಿ ಸಂಸತ್ ನಲ್ಲಿ ಜನರ ದನಿಯಾಗಬೇಕೆಂದು ತೀರ್ಮಾನಿಸಿದ್ದೇನೆ. ಇನ್ನು 3 ತಿಂಗಳು ಚುನಾವಣೆಗೆ ಬಾಕಿ ಇವೆ. ಹೀಗಾಗಿ ನನಗೀಗ ಜವಾಬ್ದಾರಿ ಹೆಚ್ಚಾಗಿದ್ದು, ಅದಕ್ಕಾಗಿ ತಯಾರಾಗಬೇಕಿದೆ. ಜನರನ್ನು ಭೇಟಿಯಾಗಿ ಅವರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಭಾರತ ಏಕತೆಯ ರಾಷ್ಟ್ರ. ಇಲ್ಲಿ ಎಲ್ಲ ಸಮುದಾಯದವರಿಗೂ ಬದುಕಲು ಹಕ್ಕಿದೆ. ಆದರೆ ರಾಜಕೀಯ ಪಕ್ಷಗಳು ಕೋಮು ವಿರೋಧಿ ರಾಜಕಾರಣ ಮಾಡುತ್ತಿರುವುದು ಪ್ರಜಾಪ್ರಭುತ್ವದ ವಿರುದ್ದದ ನಡೆಯಾಗಿದೆ ಎಂದು ಆರೋಪಿಸಿದರು.ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಕೋಟಿಗಟ್ಟಲೇ ಹಣ ಸುರಿಯುವ ರಾಜಕೀಯ ಪಕ್ಷಗಳು, ಗೆದ್ದ ನಂತರ ಕೊಳಗೇರಿ ನಿವಾಸಿಗಳಿಗೆ ಆಗಲೀ, ಸಾಮಾನ್ಯ ಜನರಿಗಾಗಿ ಆಗಲೀ ಯಾವುದೇ ಅನುದಾನ ಬಿಡುಗಡೆ ಮಾಡುವುದಿಲ್ಲ. ಇಂದು ಸರ್ಕಾರಿ ಶಾಲೆಗಳ ಸ್ಥಿತಿ ಅತ್ಯಂತ ಶೋಷನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿನ ರಾಜಕಾರಣದಲ್ಲಿ ಒಬ್ಬರನ್ನೊಬ್ಬರು ಉಳಿಸಿಕೊಳ್ಳುವುದೇ ಆಗಿದೆ. ಜನರಿಗೆ ಭೇಟಿ ನೀಡಿ, ಅವರಿಗೆ ಏನೂ ಬೇಕಾಗಿದೆ ಎಂಬುದನ್ನು ಕೇಳುವ ಮನಸ್ಥಿತಿಯಲ್ಲಿ ಯಾರೂ ಇಲ್ಲ. ವಿರೋಧ ಪಕ್ಷವಾದ ಬಿಜೆಪಿ ನಾಯಕರು ಆಪರೇಶನ್ ಕಮಲ ಮಾಡುತ್ತೇನೆಂದು ಮುಂದಾಗುತ್ತಾರೆ. ನಾಚಿಕೆಯಾಗಬೇಕು ಅವರಿಗೆ. ಮೈತ್ರಿ ಸರ್ಕಾರಕ್ಕೂ, ಬಿಜೆಪಿ ನಾಯಕರಿಗೂ ಬುದ್ಧಿ ಇಲ್ಲ ಎಂದು ಕಿಡಿಕಾರಿದರು. ನನಗೀಗ ಜವಾಬ್ದಾರಿ ಹೆಚ್ಚಾಗಿದ್ದರಿಂದ ಮುಂದಿನ 6 ತಿಂಗಳು ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.


ಸಂಬಂಧಿತ ಟ್ಯಾಗ್ಗಳು

# Prakash Rai #Parliament #Election #People Voice


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ