ಅನಂತಕುಮಾರ ಹೆಗಡೆ ವಿರೋದಿಗಳು ಬಿಜೆಪಿಯಲ್ಲೇ ಇದ್ದಾರಾ? 

Are There Opponents of the Ananth kumar Hedge in the BJP?

18-01-2019

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಕೇಂದ್ರ ಸಚಿವ ಅನಂತಕುಮಾರ ಹೆಗಡೆಯನ್ನು  ರಾಜ್ಯ ರಾಜಕಾರಣದಿಂದ ದೂರ ಇಡುವ ಪ್ರಯತ್ನ ನಡೆತಿದೆ. ಇಂತಹದೊಂದು ಮಾತು ಕೇಳಿಬಂದಿದ್ದು ಮೊನ್ನೆ ದೆಹಲಿಯಲ್ಲಿ ನಡೆದ ಬಿಜೆಪಿ ಶಾಸಕರು ಹಾಗೂ ಸಂಸದರ ಸಭೆಯಲ್ಲಿ. ಇದೀಗ ಈ ಮಾತಿಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರೇ ಸ್ವತಃ ಪ್ರತಿಕ್ರಿಯೆ ನೀಡಿದ್ದು, ಇದು ಹೌದು ಎಂದು ಒಪ್ಪಿಕೊಂಡಿದ್ದಾರೆ. 

ತಮ್ಮ ವಿರುದ್ಧ ಷಡ್ಯಂತ್ರ ನಡಿತಿರೋದು ಹೌದು ಎಂದು ಅನಂತಕುಮಾರ್ ಹೆಗಡೆ ಒಪ್ಪಿಕೊಂಡಿದ್ದಾರೆ. ಆದರೆ ಅದು ಪಕ್ಷದಲ್ಲಿ ಅಲ್ಲ ಸಭೆಯಲ್ಲಿ ಇದ್ದ ಯಾರಿಂದಲೋ ಎಂಬುದನ್ನು ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಪ್ರತಿಬಾರಿಯೂ ಚುನಾವಣೆಗಳು ಆರಂಭವಾಗುತ್ತಿದ್ದಂತೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತದೆ. ನಾನು ಏನು ಮಾತಾಡಿದೆ ಮಾತನಾಡಲಿಲ್ಲ? ಏನು ಮಾಡಿದೆ? ಮಾಡಲಿಲ್ಲ ಎಂಬುದನ್ನು ದೊಡ್ಡ ವಿಷಯವಾಗಿಸುವ ಮೂಲಕ ನನ್ನನ್ನು ವಿವಾದದ ಕೇಂದ್ರಬಿಂದುವಾಗಿಸುವ ಪ್ರಯತ್ನಗಳು ನಡೆಯುತ್ತದೆ. ಈ ಬಾರಿಯೂ ಇದೆ ಪ್ರಯತ್ನ ಆರಂಭವಾಗಿದೆ ಎಂದು ಹೆಗಡೆ ಹೇಳಿಕೊಂಡಿದ್ದಾರೆ. 

ಮೊನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯವರಿಷ್ಠರಾದ ಯಡಿಯೂರಪ್ಪನವರೇ ನನ್ನನ್ನು ಕರೆದು ವೇದಿಕೆಯ ಮೇಲೆ ಕೂರಿಸಿದ್ದರು. ಆದರೆ ಸಭೆಯ ವೇಳೆ ಬಿಜೆಪಿಯ ಹಿರಿಯನಾಯಕರಾದ  ಗೋವಿಂದ್ ಕಾರಜೋಳ ಅವರು ಸಭೆಗೆ ಆಗಮಿಸಿದರು. ಅವರಿಗೆ ಆಸನವನ್ನು ಒದಗಿಸುವ ಉದ್ದೇಶದಿಂದ ನಾನು ವೇದಿಕೆಯಿಂದ ಇಳಿದು ಕೆಳಗೆ ಬಂದು ಕೂತಿದ್ದೇನೆ. ಆದರೆ  ಇದನ್ನೆ ನನ್ನ ವಿರುದ್ದ ಪ್ರಚಾರಕ್ಕೆ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಬಿಜೆಪಿಯವರು ಹೊರಗಿಟ್ಟಿದ್ದಾರೆ. ಬಿಎಸ್‍ವೈ ವೇದಿಕೆಯಿಂದ ಇಳಿಯುವಂತೆ ಸೂಚಿಸಿದರು ಎಂದೆಲ್ಲ ಬರೆಯುವ ಮೂಲಕ ಬಿಜೆಪಿಯಲ್ಲಿ ಒಡಕು ಮೂಡಿಸುವ ಪ್ರಯತ್ನ ನಡೆಯಿತು ಎಂದು  ಅನಂತಕುಮಾರ್ ಟ್ವಿಟರ್‍ನಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 
 
ಟ್ವಿಟರ್‍ನಲ್ಲಿ ಮಹತ್ವದ ವಿಚಾರವೊಂದನ್ನು ಪ್ರಸ್ತಾಪಿಸಿರುವ ಅನಂತಕುಮಾರ್ ಹೆಗಡೆ, ಸಭೆಯಲ್ಲಿ ಬಿಜೆಪಿ ನಾಯಕರನ್ನು ಹೊರತುಪಡಿಸಿ ಯಾವುದೆ ಮಾಧ್ಯಮದವರೂ ಇರಲಿಲ್ಲ. ಹೀಗಿದ್ದರೂ ಈ ವಿಚಾರ ನಿರ್ದಿಷ್ಟ ರೂಪದಲ್ಲೆ ಮಾಧ್ಯಮಗಳನ್ನು ತಲುಪಿದೆ.  ಅಂದ ಮೇಲೆ  ಇದು ಬಿಜೆಪಿಯ ಯಾವುದೋ ವಿಕೃತ ಸಂತೋಷಿಗಳೇ ಹಬ್ಬಿಸಿದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಅಲ್ಲದೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿರುವ  ಅನಂತಕುಮಾರ್,  ಇಂತಹ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಲೇ ಇರುತ್ತವೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದೇ, ಮೋದಿಯವರನ್ನು ಇನ್ನೊಮ್ಮೆ ಪ್ರಧಾನಿಯಾಗಿಸುವತ್ತ ನಾವೆಲ್ಲ ಗಮನ  ಹರಿಸೋಣ ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಹೆಗಡೆ  ವಿರೋದಿಗಳು ಪಕ್ಷದ ಹೊರಗೆ ಮಾತ್ರವಲ್ಲ, ಪಕ್ಷದ ಒಳಗೂ ಇದ್ದಾರೆ ಎಂಬುದು ಅವರ ಟ್ವಿಟರ್‍ನಿಂದಲೇ ಸಾಬೀತಾಗಿರೋದು ಮಾತ್ರ ಸುಳ್ಳಲ್ಲ. 


ಸಂಬಂಧಿತ ಟ್ಯಾಗ್ಗಳು

#Ananth kumar Hegde #Bjp # Opponents #Twitter


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ