ಚಕ್ರತೀರ್ಥ ವಿರುದ್ಧ ದ್ವಾರಕನಾಥರಿಂದ ದೂರು 

 Complaint by Dwarkanath Against Chakratirtha

17-01-2019

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಹವ್ಯಕ ಸಮ್ಮೇಳನದ ಕುರಿತು ಟೀಕೆ ಮಾಡಿ ವಿವಾದ ಸೃಷ್ಟಿಸಿದ್ದ ಚಿಂತಕ ಸಿ.ಎಸ್.ದ್ವಾರಕಾನಾಥ, ಬರಹಗಾರ ರೋಹಿತ್ ಚಕ್ರತೀರ್ಥ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಬರಹಗಳನ್ನು ಬರೆದಿರುವ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕೈಗೊಳ್ಳುವಂತೆ ದ್ವಾರಕಾನಾಥ್  ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ. 

ಡಿಸೆಂಬರ್ 28,29 ಹಾಗೂ 30 ಅಖಿಲ ಹವ್ಯಕ ಮಹಾಸಭಾ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ವಿಶ್ವಹವ್ಯಕ ಸಮ್ಮೇಳನ ಆಯೋಜಿಸಲಾಗಿತ್ತು. ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನದ ಕುರಿತ ವರದಿಯನ್ನು ಎಲ್ಲ ದಿನಪತ್ರಿಕೆಗಳು ಪ್ರಕಟಿಸಿದ್ದವು. ಆದರೆ ದಿನಪತ್ರಿಕೆಗಳ ವರದಿ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಸಿ.ಎಸ್.ದ್ವಾರಕಾನಾಥ್  ಜನಸಂಖ್ಯೆಯ ಕೇವಲ 3 ಶೇಕಡಾದಷ್ಟಿರುವ ಬ್ರಾಹ್ಮಣ ಕಾರ್ಯಕ್ರಮವೊಂದು ಯಾಕೆ ದಿನಪತ್ರಿಕೆಯ ಮೊದಲ ಪುಟದಲ್ಲೇ ವರದಿಯಾಗಬೇಕು ಎಂಬುದನ್ನು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ಇದಕ್ಕೆ ಬಹುತೇಕ ದಿನಪತ್ರಿಕೆಗಳ ಸಂಪಾದಕರು ಬ್ರಾಹ್ಮಣರಾಗಿರುವುದೇ ಕಾರಣ ಎಂದಿದ್ದರು. ದ್ವಾರಕಾನಾಥ್  ಈ ಟೀಕೆಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪತ್ರಿಕೆಗಳಲ್ಲಿ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. 

ಈ ಮಧ್ಯೆ ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್‍ರು ತಮ್ಮ ದಿನಪತ್ರಿಕೆಯಲ್ಲಿ ಅಂಕಣವೊಂದನ್ನು ಪ್ರಕಟಿಸಿದ್ದರು. ಅದರಲ್ಲಿ ವ್ಯಕ್ತಿಯೊಬ್ಬರು  ದ್ವಾರಕಾನಾಥ್  ಬರಹಕ್ಕೆ ಉತ್ತರ ನೀಡಿದ್ದರು. ಇದಕ್ಕೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ ವಿಡಿಯೋ ಮೂಲಕ ಮರು ಉತ್ತರವನ್ನು ನೀಡಿದ್ದರು. ಆದರೆ ಈ ವಿವಾದಕ್ಕೆ ಇಷ್ಟಕ್ಕೆ ಮುಗಿಯದೇ ಮತ್ತೆ ಮುಂದುವರಿದಿದ್ದು, ಸಾಕಷ್ಟು ಚಿಂತಕರು ದ್ವಾರಕಾನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 

ಇನ್ನು ಸಿ.ಎಸ್ ದ್ವಾರಕಾನಾಥ್  ಬರಹಕ್ಕೆ ಕಟುವಾಗಿ ಪ್ರತಿಕ್ರಿಯೆ ನೀಡುವ ಭರದಲ್ಲಿ ಬರಹಗಾರ ರೋಹಿತ್ ಚಕ್ರತೀರ್ಥ ತಮ್ಮ ಫೇಸ್ ಬುಕ್ ಪೇಜ್ ಹಾಗೂ ಬರಹಗಳಲ್ಲಿ ದ್ವಾರಕಾನಾಥ ವಿರುದ್ಧ ಅವಮಾನಕರ ಶಬ್ದಗಳನ್ನು ಬಳಸಿ ಸುದ್ದಿಯೊಂದನ್ನು ಬರೆದುಕೊಂಡಿದ್ದಾರೆ. ಇದರಲ್ಲಿ ದ್ವಾರಕಾನಾಥ ಕೆಲಸ ಕೊಡಿಸುವುದಾಗಿ ವಂಚಿಸಿದ್ದಾರೆ ಎಂದು ಕೂಡ ಹೀಯಾಳಿಸಿದ್ದಾರೆ. ಹೀಗಾಗಿ ರೋಹಿತ್ ಚಕ್ರತೀರ್ಥ ವಿರುದ್ಧ ದ್ವಾರಕಾನಾಥ್  ಸೈಬರ್ ಕ್ರೈಂಗೆ ದೂರು ನೀಡಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ದ್ವಾರಕಾನಾಥ ಹೇಳಿದ್ದಾರೆ. 
ಒಟ್ಟಿನಲ್ಲಿ ಹವ್ಯಕ ಸಮ್ಮೇಳನದ ವಿಚಾರದಲ್ಲಿ ಆರಂಭವಾದ ದ್ವಾರಕಾನಾಥ್ ಹಾಗೂ ಇತರರ ಬರಹ ಸಂಘರ್ಷ ಇದೀಗ ದೂರು ದಾಖಲಾಗೋ ಮೂಲಕ ಕೊನೆಯಾಗಿದ್ದು, ರೋಹಿತ್ ಚಕ್ರತೀರ್ಥ ಹಾಗೂ ದ್ವಾರಕನಾಥ ನಡುವಿನ ಈ ಗಲಾಟೆ ಎಲ್ಲಿಗೆ ಹೋಗಿ ಮುಟ್ಟುತ್ತೋ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

# Complaint #Against #Dwarkanath #Rohith Chakratirtha


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ