ಯಡಿಯೂರಪ್ಪನವರದ್ದು ಬಸ್ ಸ್ಟ್ಯಾಂಡ್ ಪ್ರೀತಿ- ಇಬ್ರಾಹಿಂ ಟೀಕೆ

C

16-01-2019

ಆಪರೇಷನ್ ಕಮಲ ಕಾರ್ಯಾಚರಣೆ ನಡೆಸುತ್ತಿರುವ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮೇಲ್ಮನೆ ಸದಸ್ಯ ಸಿ.ಎಂ. ಇಬ್ರಾಹಿಂ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರದ್ದು ಬಸ್ ನಿಲ್ದಾಣದ ಪ್ರೀತಿ. ಇಂತಹ ಪ್ರೀತಿಗೆ ಕಾಂಗ್ರೆಸ್ಸಿನ ಯಾವ ಶಾಸಕರೂ ಮರುಳಾಗುವುದಿಲ್ಲ ಎಂದು ವ್ಯಂಗ್ಯಮಾಡಿದ್ದಾರೆ.

ಆಪರೇಷನ್ ಕಮಲ ಕುರಿತು ನಗರದ ಕುಮಾರಕೃಪ ಅತಿಥಿ ಗೃಹದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಪ್ರೀತಿಗೆ ಮನಸೋತು ಯಾವುದೇ ಶಾಸಕರು ಪಕ್ಷ ತೊರೆಯವುದಿಲ್ಲ. ಈ ಬಾರಿ ಸಂಕ್ರಾಂತಿಯ ಹೊಸ ವರ್ಷ ರಾಜಕಾರಣಕ್ಕೆ ದೊಡ್ಡ ಕಳಂಕ ತಂದಿದೆ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳು 10-20  ಶಾಸಕರನ್ನು ಕರೆದುಕೊಂಡು ಹೋಗುವುದು ಸಹಜ. ಆದರೆ ಬಿಜೆಪಿಯವರು 104 ಶಾಸಕರನ್ನು ಕೂಡಿಹಾಕಿರುವುದು ರಾಜಕೀಯ ವಿಪರ್ಯಾಸ ಎಂದು ಅವರು ಕಿಡಿಕಾರಿದರು.

ಸಹಜ ಹೆರಿಗೆ ಮಾತನ್ನು ಉಲ್ಲೇಖಿಸಿದ ಸಿ.ಎಂ.ಇಬ್ರಾಹಿಂ, ಯಡಿಯೂರಪ್ಪ  ಜನರ ಮುಂದೆ ಹೋಗಿ ಪ್ರಜಾಪ್ರಭುತ್ವದಲ್ಲಿ ಗೆಲ್ಲುವ ಮೂಲಕ ಸರ್ಕಾರ ರಚಿಸಬೇಕೇ ಹೊರತು ಆಪರೇಷನ್ ಮಾಡಿ ಸರ್ಕಾರ ರಚಿಸಬೇಕಿಲ್ಲ. ಚುನಾವಣೆಯಲ್ಲಿ ಗೆದ್ದ ಶಾಸಕರನ್ನು ಕರೆದೊಯ್ದು ಸರ್ಕಾರ ರಚನೆ ಮಾಡುವುದು ತರವಲ್ಲ. ಪತಿವ್ರತೆಯರಂತಹ ನಮ್ಮ ನಿಷ್ಕಳಂಕ ಶಾಸಕರನ್ನು ಕರೆದುಕೊಂಡು ಹೋಗಿ ಯಡಿಯೂರಪ್ಪ ಸರ್ಕಾರ ರಚಿಸಲು ಮುಂದಾಗಬಾರದು ಎಂದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯ ಸರಿಯಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಈಗಷ್ಟೇ 6 ತಿಂಗಳು ಕಳೆದಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ನೋವಾಗುವ ಸನ್ನಿವೇಶ ಸೃಷ್ಟಿಯಾಗಿರುವುದು ತಮಗೂ ಸಹ ನೋವುಂಟು ಮಾಡಿದೆ ಎಂದು ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು.

ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಪರಾಭವಗೊಂಡಿದೆ. ಇದರಿಂದ ಪ್ರಧಾನಿ ಮೋದಿ ಅವರಿಗೆ ಹೆದರಿಕೆ ಶುರುವಾಗಿದ್ದು, ಬಿಜೆಪಿಯವರಿಗೆ ಸ್ವಪಕ್ಷದ ಶಾಸಕರ ಮೇಲೆಯೇ ನಂಬಿಕೆಯಿಲ್ಲದಂತಾಗಿದೆ. ಕಾಂಗ್ರೆಸ್ ಪಕ್ಷ ಭದ್ರವಾಗಿದ್ದು, ಶಿಸ್ತಿನಿಂದ ನಡೆಯುತ್ತಿದೆ. ಪ್ರಧಾನಿ ಮೋದಿಹೆಚ್.ಎ.ಎಲ್ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ. ಅದಾನಿ, ಅಂಬಾನಿ ಅಂತಹ ಶ್ರೀಮಂತರ ಅಭಿವೃದ್ಧಿಗಾಗಿ ಕೈ ಜೋಡಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.


ಸಂಬಂಧಿತ ಟ್ಯಾಗ್ಗಳು

# Yeddyurappa # Criticizes #C.M.Ibrahim #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ