ಕುಮಾರಸ್ವಾಮಿ ಮಾತನ್ನ ನಂಬೋದು ಹೇಗೆ?

How To Believe In Kumaraswamy

16-01-2019

ಅತಿ ಕಡಿಮೆ ಸ್ಥಾನಗಳನ್ನು ಪಡೆದೂ ರಾಜ್ಯದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅತ್ಯಂತ ಚತುರ ರಾಜಕಾರಣಿ ಅನ್ನೋದರಲ್ಲಿ ಎರಡನೇ ಮಾತಿಲ್ಲ. ಸಂದರ್ಭಕ್ಕೆ ತಕ್ಕಂತೆ ನಾಟಕ ಆಡೋದು, ಮಾತುಗಳನ್ನು ಬದಲಾಯಿಸೋದು ಎಲ್ಲವೂ ಕುಮಾರಸ್ವಾಮಿಯವರಿಗೆ ಕರಗತವಾಗಿರುವ ವಿದ್ಯೆ. ಇಂತಿಪ್ಪ ಕುಮಾರಸ್ವಾಮಿ ಇತ್ತೀಚಿಗೆ ಅರಳು-ಮರಳು ಬಂದಂತೆ ಆಡುತ್ತಿದ್ದು, ತಾವೇ ಮಾತನಾಡಿ, ವಿವಾದಗಳನ್ನು ಹುಟ್ಟುಹಾಕಿ ಬಳಿಕ ಅದನ್ನು ಮಾಧ್ಯಮಗಳ ತಲೆಗೆ ಒರೆಸಿ ಪರಾರಿಯಾಗುವ ಹೇಡಿ ತಂತ್ರ ಅನುಸರಿಸುತ್ತಿದ್ದಾರೆ.  

ಹೌದು ಕುಮಾರಸ್ವಾಮಿ ಮೈಕ್ ಹಿಡಿದಾಗ ಎದುರಿಗೆ ಸಿಕ್ಕವರನ್ನು ಮರುಳು ಮಾಡಲು ಹಾಗೂ ಚಪ್ಪಾಳೆ ಗಿಟ್ಟಿಸಲು ಏನು ಬೇಕಾದರೂ ಮಾತನಾಡುತ್ತಾರೆ. ಅಷ್ಟೇ ಏನು ಸರ್ಕಾರದಲ್ಲಿ ತನ್ನ ಪರಿಸ್ಥಿತಿ ಚೆನ್ನಾಗಿಲ್ಲ ಎನ್ನುತ್ತ ಕಣ್ಣೀರು ಹರಿಸಿಬಿಡುತ್ತಾರೆ. ಆದರೆ ಮಾರನೇ ದಿನ ತಾವಾಡಿದ ಮಾತುಗಳು ತಮ್ಮ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗಬಹುದು ಅನ್ನಿಸಿದರೇ ಸಾಕು, ಇದೆಲ್ಲ ಮಾಧ್ಯಮಗಳ ಸೃಷ್ಟಿ. ನಾನೇನೂ ಮಾತಾಡಲಿಲ್ಲ. ಆ ಅರ್ಥದಲ್ಲಿ ಹೇಳ್ಲಿಲ್ಲ. ನಾನು ಭಾವುಕನಾಗಿ ಮಾತಾನಾಡಿದೆ. ನೋವಿನಲ್ಲಿ ಮಾತನಾಡಿದೆ.  ಎನ್ನುವ ಮೂಲಕ ತಿಪ್ಪೆ ಸಾರಿಸುವ ಪ್ರಯತ್ನ ಮಾಡುತ್ತಾರೆ. 

ಈ ಹಿಂದೆ ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರದಲ್ಲಿ ನನ್ನ ಕೈಲಿ ಏನು ಇಲ್ಲ ಎಂದಿದ್ದ ಕುಮಾರಸ್ವಾಮಿ, ಕೊನೆಗೊಮ್ಮೆ ನಾನು ಇಲ್ಲಿ ಸ್ವತಂತ್ರವಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಮೊನ್ನೆ ಮೊನ್ನೆ ಜೆಡಿಎಸ್ ಶಾಸಕರ ಸಭೆಯಲ್ಲಿ ಮಾತನಾಡಿದ ಸಿಎಂ ಸಮ್ಮಿಶ್ರ ಸರ್ಕಾರದಲ್ಲಿ ನಾನು ತುಟಿಕಚ್ಚಿ ಹಿಡಿದು ಅಧಿಕಾರ ನಡೆಸುತ್ತಿದ್ದೇನೆ ಎಂದಿದ್ದರು. ಆದರೆ ಈ ವಿಚಾರ ಮಾಧ್ಯಮಗಳಲ್ಲಿ ಹೈಪ್ ಆಗುತ್ತಿದ್ದಂತೆ ವರಸೆ ಬದಲಾಯಿಸಿದ ಸಿಎಂ ನಾನು ಹೀಗೆಲ್ಲ ಹೇಳ್ಲೇ ಇಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ನಾಟಕ ಆರಂಭಿಸಿದರು. 


ಇದೀಗ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ ಜೊತೆ ಕಾಂಗ್ರೆಸ್ ಶಾಸಕರೂ ಇದ್ದಾರೆ ಎಂಬ ಸ್ಥಿತಿ ಎದುರಾಗಿರುವಾಗಲೂ ಮಾಧ್ಯಮಗಳ ಮೇಲೆ ವಾಗ್ದಾಳಿ ಮಾಡಿರುವ ಸಿಎಂ, ಇದೆಲ್ಲ ನ್ಯೂಸ್ ಚಾನೆಲ್‍ಗಳ ಸೃಷ್ಟಿ. ನಮ್ಮ ಸರ್ಕಾರ ಸುಭದ್ರವಾಗಿದೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದೂ ಆ ಹುದ್ದೆಯ ಘನತೆ ಕಾಪಾಡುವಲ್ಲಿ ವಿಫಲರಾಗಿದ್ದು, ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜಕೀಯ ಹಾಗೂ ಮಾಧ್ಯಮವನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ. ನಾನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ ಎಂಬ ಅನುಕಂಪದ ಕತೆ ಹೇಳಿ ಅಧಿಕಾರಕ್ಕೆ ಬಂದ ಸಿಎಂ ಕುಮಾರಸ್ವಾಮಿಗೆ ಮುಂದೊಂದು ದಿನ ತಮ್ಮ ಈ ಲಘು ಮಾತಿನ ಶೈಲಿಯೇ ಮುಳುವಾಗಲಿದೆ ಅನ್ನೋ ಮಾತು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 


ಸಂಬಂಧಿತ ಟ್ಯಾಗ್ಗಳು

# Kumaraswamy #How To Believe #Karnataka #Words


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ