ಸಮ್ಮಿಶ್ರ ಸರ್ಕಾರದ ಎಮ್‍ಎಲ್‍ಎಗಳು ರೆಸಾರ್ಟ್‍ಗೆ !

 The Coalition Government

16-01-2019

ರಾಜ್ಯದಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕಾರಣ ಆರಂಭವಾಗಿದೆ. ಪಕ್ಷೇತರ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಹಿನ್ನೆಲೆಯಲ್ಲಿ ಹಾಗೂ ಕಾಂಗ್ರೆಸ್‍ನ ಕೆಲ ಶಾಸಕರು ಪಕ್ಷ ತೊರೆಯುವ ಮುನ್ಸೂಚನೆ ದೊರೆತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ತಮ್ಮ ಎಮ್‍ಎಲ್‍ಎಗಳನ್ನು ಉಳಿಸಿಕೊಳ್ಳಲು ರೆಸಾರ್ಟ್ ಮೊರೆ ಹೋಗಿದೆ. ಜೆಡಿಎಸ್-ಕಾಂಗ್ರೆಸ್‍ನ ಎಲ್ಲ ಎಮ್‍ಎಲ್‍ಎಗಳಿಗೆ ಇಂದು ಮಧ್ಯಾಹ್ನದ ವೇಳೆಗೆ ಬಿಡದಿ ಈಗಲ್ ಟನ್ ರೆಸಾರ್ಟ್ ಹಾಜರಾಗುವಂತೆ ಸೂಚಿಸಲಾಗಿದೆ. 

ಅತೃಪ್ತಿಯಿಂದ ಬಿಜೆಪಿಯತ್ತ ವಾಲುತ್ತಿರುವ ಶಾಸಕರನ್ನು ಉಳಿಸಿಕೊಳ್ಳುವುದಕ್ಕೂ ಮೊದಲು ಸಮ್ಮಿಶ್ರ ಸರ್ಕಾರ ಈಗಿರುವ ಶಾಸಕರನ್ನು ಕಾಪಾಡಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಎಲ್ಲ ಶಾಸಕರನ್ನು ತಮ್ಮ ಕಣ್ಣ ಮುಂದೆ ರೆಸಾರ್ಟ್‍ನಲ್ಲಿ ಉಳಿಸಿಕೊಂಡು ಬಳಿಕ ಬಂಡಾಯ ಎದ್ದಿರುವ ಶಾಸಕರನ್ನು ಮನವೊಲಿಸುವ ಪ್ರಯತ್ನವನ್ನು  ಸಮ್ಮಿಶ್ರ ಸರ್ಕಾರದ ನಾಯಕರು ಮಾಡಲಿದ್ದಾರೆ. 

ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗದ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಬಿಡದಿಯತ್ತ ತಮ್ಮ ಪ್ರಯಾಣ ಆರಂಭಿಸಿದ್ದಾರೆ. ಬಿಡದಿಗೆ ಬರುವ ಶಾಸಕರುಗಳು ಯಾವುದೇ ಕಾರಣಕ್ಕೂ ಬಿಜೆಪಿ ತೆಕ್ಕೆಗೆ ಬೀಳದಂತೆ ನೋಡಿಕೊಳ್ಳುವ ಹೊಣೆಯನ್ನು ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಹಿರಿಯ ನಾಯಕರಿಗೆ ನೀಡಲಾಗಿದೆ.  

ಇನ್ನು ಮುಂಬೈನಲ್ಲಿ ಬೀಡುಬಿಟ್ಟು ಸರ್ಕಾರವನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿರುವ ಕಾಂಗ್ರೆಸ್ ಶಾಸಕರನ್ನು ಮನವೊಲಿಸಿ ಕರೆತರುವ ಜವಾಬ್ದಾರಿಯನ್ನು ಹಿರಿಯ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಸಚಿವ ಜಮೀರ್ ಅಹ್ಮದ್‍ಗೆ ನೀಡಲಾಗಿದೆ. ಅವರಿಬ್ಬರೂ ನಿನ್ನೆಯೇ  ಮುಂಬೈಗೆ ತೆರಳಿದ್ದಾರೆ. ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುವ ಬದಲು ಸರ್ಕಾರ ಉಳಿಸಿಕೊಳ್ಳಲು ಬೇಕಾದ ಸರ್ಕಸ್‍ನಲ್ಲಿ ನಿರತವಾಗಿದ್ದು, ಈ ರಾಜಕೀಯ ಹೈಡ್ರಾಮಾ ಯಾವಾಗ ಕೊನೆಗಾಣುತ್ತೆ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Coalition Government #Eagleton resort #MLA #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ