ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಕಸರತ್ತು

 Kumaraswamy

15-01-2019

ಒಂದೆಡೆ ಇಬ್ಬರು ಪಕ್ಷೇತರ ಶಾಸಕರ ರಾಜೀನಾಮೆಯಿಂದ ಸರ್ಕಾರ ಅಲುಗಾಡಲು ಆರಂಭವಾಗಿದ್ದರೇ, ಇನ್ನೊಂದೆಡೆ ಶತಾಯ ಗತಾಯ ರಾಜ್ಯಸರ್ಕಾರವನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಸರ್ಕಸ್ ಆರಂಭಿಸಿದ್ದಾರೆ. ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಸರ್ಕಾರಕ್ಕೆ ಬೇಷರತ್ತಾಗಿ ನೀಡಿದ್ದ ಬೆಂಬಲವನ್ನು ವಾಪಸ ಪಡೆದಿದ್ದಾರೆ. ಇದರಿಂದ ಆತಂಕಕ್ಕಿಡಾಗಿರುವ ಸಿಎಂ ಕುಮಾರಸ್ವಾಮಿ ಉಳಿದ ಶಾಸಕರನ್ನು ಉಳಿಸಿಕೊಳ್ಳಲು ಹಾಗೂ ಸರ್ಕಾರವನ್ನು ಕಾಪಾಡಲು ಕಾಂಗ್ರೆಸ್‍ನ ಮೊರೆ ಹೋಗಿದ್ದಾರೆ. 

ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್‍ನ ಚುನಾವಣಾ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‍ರನ್ನು ತುರ್ತಾಗಿ ಭೇಟಿ ಮಾಡಿದ್ದು, ಇನ್ನಿತರ ಅತೃಪ್ತ ಶಾಸಕರು ಸರ್ಕಾರದಿಂದ ಹೊರ ಹೋಗುವುದನ್ನು ತಪ್ಪಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಕುಮಾರಸ್ವಾಮಿ ಹಾಗೂ ಕೆ.ಸಿ.ವೇಣುಗೋಪಾಲ್ ಪರಸ್ಪರ ಚರ್ಚಿಸಿ ಅತೃಪ್ತ ಶಾಸಕರಿಗೆ ಸೂಕ್ತಸ್ಥಾನಮಾನ ನೀಡಲು ಚಿಂತನೆ ನಡೆಸಿದ್ದು, ಈಗಿರುವ ಕೆಲ ಸಚಿವರು ಹಾಗೂ ನಿಗಮ ಮಂಡಳಿ ಅಧ್ಯಕ್ಷರಿಂದ ಅಧಿಕಾರ ಕಸಿದು ಅತೃಪ್ತರಿಗೆ ನೀಡಿ ಸಮಾಧಾನ ಪಡಿಸಲು ತಂತ್ರ ರೂಪಿಸಿದ್ದಾರೆ. ಇದರಿಂದ ಸರ್ಕಾರವನ್ನು ಉಳಿಸಿಕೊಳ್ಳಬಹುದೆಂಬ ಮುಂಧಾಲೋಚನೆ ಕುಮಾರಸ್ವಾಮಿಯವರದ್ದು. 

ಕೆ.ಸಿ.ವೇಣುಗೋಪಾಲ್ ನಿನ್ನೆ ತಡರಾತ್ರಿಯೇ ಬೆಂಗಳೂರಿಗೆ ಬಂದಿಳಿದಿದ್ದು, ಕಾಂಗ್ರೆಸ್‍ನ ಹಿರಿಯ ಮುಖಂಡರು ಹಾಗೂ ಸಚಿವರೊಂದಿಗೆ ಸಭೆ ನಡೆಸಿ ಸರ್ಕಾರವನ್ನು ಉಳಿಸಲು ಯಾವೆಲ್ಲ ತಂತ್ರ ಅನುಸರಿಸಬೇಕೆಂಬ ಅಂಶದ ಕುರಿತು ಚರ್ಚೆ ನಡೆಸಿದ್ದಾರೆ. ಇದೀಗ ಕುಮಾರಸ್ವಾಮಿಯೊಂದಿಗೂ ವೇಣುಗೋಪಾಲ್ ಸಭೆ ನಡೆಸಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್‍ನ ಕೆಲವರಿಂದ ರಾಜೀನಾಮೆ ಪಡೆದು ಅತೃಪ್ತರಿಗೆ ನೀಡುವ ಮೂಲಕ ಅವರನ್ನು ಬಿಜೆಪಿಯೊಂದಿಗೆ ಕೈಜೋಡಿಸದಂತೆ ತಡೆಯುವ ಪ್ರಯತ್ನ ನಡೆಸಲಿದ್ದಾರೆ ಎನ್ನಲಾಗುತ್ತಿದೆ. 

ಆದರೆ ಕೆಲ ಕಾಂಗ್ರೆಸ್ ಶಾಸಕರು ಈಗಾಗಲೇ ಬಿಜೆಪಿಯ ಸಂಪರ್ಕದಲ್ಲಿದ್ದು, ಅವರನ್ನು ಸರ್ಕಾರ ಹೇಗೆ ಉಳಿಸಿಕೊಳ್ಳುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಈ ಮಧ್ಯೆ ವೇಣುಗೋಪಾಲ್ ಸಂಜೆ ವೇಳೆಗೆ ಮಾಜಿ ಪ್ರಧಾನಿ ದೇವೆಗೌಡರನ್ನು ಕೂಡ ಭೇಟಿ ಮಾಡಲಿದ್ದು, ಬಿಜೆಪಿಯ ತಂತ್ರವನ್ನು ವಿಫಲಗೊಳಿಸಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಗೌಡರ್ ಸಲಹೆ ಪಡೆದುಕೊಳ್ಳಲಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ದೊಂಬರಾಟಗಳು ಆರಂಭವಾಗಿದ್ದು, ಸರ್ಕಾರ ಉರುಳುತ್ತಾ ಉಳಿಯುತ್ತಾ ಕಾದು ನೋಡಬೇಕಿದೆ. 
 


ಸಂಬಂಧಿತ ಟ್ಯಾಗ್ಗಳು

#Karnataka #Attempt to save #Kumarswamy #The government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ