ಆಫರೇಶನ್ ಕಮಲಕ್ಕೆ ಬ್ರೇಕ್ ಹಾಕಲು ಡಿಕೆಶಿ ಮುಂಬೈಗೆ 

 D.K.Shivkumar  to Mumbai to break the Operation Kamal

14-01-2019

ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ದೆಹಲಿಯಲ್ಲಿ ಭಾರೀ ಕಸರತ್ತು ನಡೆಯುತ್ತಿರುವಂತೆಯೇ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಟ್ರಬಲ್ ಶೂಟರ್ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದ ನಾಯಕರು ಮಹತ್ವದ ಜವಾಬ್ದಾರಿ ನೀಡಿದ್ದಾರೆ.

ಇಂದು ಖಾಸಗಿ ಹೋಟೆಲ್‍ನಲ್ಲಿ ನಡೆದ "ಉಪಹಾರ ಕೂಟ" ಸಭೆಯಲ್ಲಿ ಆಪರೇಷನ್ ಕಮಲ ತಡೆಯಲು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದರು. ಯಾವೆಲ್ಲಾ ಶಾಸಕರು ಕಾಂಗ್ರೆಸ್ ಪಕ್ಷ ತೊರೆಯುವ ಸಾಧ್ಯತೆ ಇದೆ. ಅವರ ಅಹವಾಲುಗಳೇನು..?, ಪಕ್ಷದ ನಾಯಕತ್ವದ ಬಗ್ಗೆ ಅವರಿಗಿರುವ ಸಂಶಯಗಳೇನು..? ಪಕ್ಷ ತೊರೆಯುವ ಉದ್ದೇಶದ ಬಗ್ಗೆ ಮಾಹಿತಿ ಸಂಗ್ರಹಿಸುವುದು. ಅತೃಪ್ತ ಶಾಸಕರ ಮನವೊಲಿಸಿ ಪಕ್ಷದಲ್ಲಿ ಉಳಿಸಿಕೊಂಡರೆ ಯಾವೆಲ್ಲಾ ಸಮಸ್ಯೆಗಳು ಎದುರಾಗಬಹುದು ..? ಅವುಗಳನ್ನೆಲ್ಲಾ ಹೇಗೆ ನಿವಾರಿಸಬೇಕೆಂಬುದರ ಬಗ್ಗೆ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 ಬಿಜೆಪಿಯ ತಂತ್ರಕ್ಕೆ ಸೂಕ್ತ ಉತ್ತರ ನೀಡುವುದು, ಪಕ್ಷದ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗದಂತೆ ತಡೆಯುವುದು ಸೇರಿದಂತೆ ಮೈತ್ರಿ ಸರ್ಕಾರದ ರಕ್ಷಣೆಗೆ ಸಚಿವ ಡಿ.ಕೆ.ಶಿವಕುಮಾರ್  ಅವರಿಗೆ  ಸಂಪೂರ್ಣ ಜಬಾವ್ದಾರಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಂಬಂಧ ನಾಳೆ ಮುಂಬೈಗೆ ಸಚಿವ ಡಿ.ಕೆ.ಶಿವಕುಮಾರ್ ಪ್ರಯಾಣ ಬೆಳೆಸಲಿದ್ದು,  ಔರಂಗಾಬಾದ್ ನಲ್ಲಿ ನಡೆಯಲಿರುವ "ಮೈಕ್ರೋ ಇರಿಗೇಷನ್ ಇನ್ ಮಾಡರ್ನ್ ಅಗ್ರಿಕಲ್ಚರ್ " ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮುಂಬೈಯಲ್ಲಿ ವಾಸ್ತವ್ಯ ಹೂಡುವ ಮೂಲಕ ಕಾಂಗ್ರೆಸ್ ಶಾಸಕರ  ಹೋಟೆಲ್ ವಾಸ್ತವ್ಯ, ದೆಹಲಿಯಿಂದ ಮುಂಬೈಗೆ ಬಿಜೆಪಿ ಶಾಸಕರ ಸ್ಥಳಾಂತರ, ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲು ಪ್ರತಿತಂತ್ರ ಹೆಣೆಯಲಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ದೆಹಲಿ, ಮುಂಬೈಗೆ  ಕಾಂಗ್ರೆಸ್ ಶಾಸಕರು ತೆರಳಿರುವ  ಬಗ್ಗೆ  ಸೂಕ್ತ ಸಮಯ ಬಂದಾಗ, ಸೂಕ್ತ ಉತ್ತರವನ್ನು ನೀಡುತ್ತೇನೆ, ತಮಗೂ ರಾಜಕೀಯ ಗೊತ್ತಿದೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಅರಿವಿದೆ. ಹೀಗಾಗಿ ಆಪರೇಷನ್ ಕಮಲದ ಬಗ್ಗೆ ಸೂಕ್ತ ಸಂದರ್ಭ ಬಂದಾಗ ಮಾತನಾಡುತ್ತೇನೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.


ಸಂಬಂಧಿತ ಟ್ಯಾಗ್ಗಳು

#Operation Kamal # D.K.Shivkumar # Break # Mumbai


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ