ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ

Resort politics in the state

14-01-2019

ಶತಾಯಗತಾಯ ದೋಸ್ತಿ ಸರ್ಕಾರವನ್ನು ಪತನಗೊಳಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ ತನ್ನ ಎಲ್ಲಾ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಹರಿಯಾಣದ ರೆಸಾರ್ಟ್‍ವೊಂದಕ್ಕೆ ಕರೆದೊಯ್ಯಲಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಆರಂಭವಾಗುವ ಲಕ್ಷಣಗಳು ಗೋಚರಿಸಿದೆ. ಹರಿಯಾಣ ಹೊರವಲಯದಲ್ಲಿರುವ ರೆಸಾರ್ಟ್‍ವೊಂದರಲ್ಲಿ ಬಿಜೆಪಿಯ 104 ಶಾಸಕರು ವಾಸ್ತವ್ಯ ಹೂಡಲಿದ್ದಾರೆ.

ಸದ್ಯಕ್ಕೆ ಈ ಎಲ್ಲಾ ಶಾಸಕರು ಕರ್ನಾಟಕ ಭವನದಲ್ಲಿ ಬೀಡುಬಿಟ್ಟಿದ್ದು, ಸಂಜೆ ಎಲ್ಲರನ್ನು ಹರಿಯಾಣದ ರೆಸಾರ್ಟ್‍ವೊಂದಕ್ಕೆ ಕರೆದೊಯ್ಯಲು ಸಿದ್ದತೆಗಳು ನಡೆದಿವೆ ಎಂದು ತಿಳಿದುಬಂದಿದೆ.ಶಾಸಕರೆಲ್ಲರೂ ರೆಸಾರ್ಟ್‍ಗೆ ಹೊರಡಲು ಸಿದ್ದರಾಗಬೇಕು. ಮುಂದೆ ನಡೆಯುವ ಬೆಳವಣಿಗೆಗಳನ್ನು ಅಲ್ಲಿಯೇ ತಿಳಿಸುತ್ತೇನೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಮನೋಹರ್ ಲಾಲ್ ಕಟ್ಟರ್ ಅಲ್ಲಿ ಮುಖ್ಯಮಂತ್ರಿಯಾಗಿರುವುದರಿಂದ ಶಾಸಕರೆಲ್ಲರಿಗೂ ರೆಸಾರ್ಟ್‍ನಲ್ಲಿ ಸೂಕ್ತವಾದ ಭದ್ರತೆ, ರಕ್ಷಣೆ ಸಿಗುತ್ತದೆ ಎಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಈ ಮೊದಲು ಶಾಸಕರನ್ನು ಮುಂಬೈ ರೆಸಾರ್ಟ್‍ಗೆ ಕರೆದೊಯ್ಯಲು ತೀರ್ಮಾನಿಸಲಾಗಿತ್ತು. ಆದರೆ ಹರಿಯಾಣ ಸುರಕ್ಷಿತ ಸ್ಥಳವೆಂಬ ಕಾರಣಕ್ಕಾಗಿ ನಿರ್ಧಾರವನ್ನು ಬದಲಾಯಿಸಲಾಗಿದೆ.

ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ಬಿಜೆಪಿ ಸಭೆ ನಿಗದಿಯಾಗಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಭೆಗೆ ಆಗಮಿಸಿ ಲೋಕಸಭೆ ಚುನಾವಣೆ ಕುರಿತಂತೆ ಸಿದ್ಧತೆಗಳ ಬಗ್ಗೆ ಮಾರ್ಗದರ್ಶನ ಮಾಡಲಿದ್ದರು. ಆದರೆ ಕೊನೆ ಕ್ಷಣದಲ್ಲಿ ಸಭೆಯನ್ನು ರದ್ದುಪಡಿಸಿ 1 ಗಂಟೆಗೆ ಮುಂದೂಡಲಾಯಿತು.ಸಭೆ ನಡೆಯುವ ಬಗ್ಗೆ ಬಿಜೆಪಿ ನಾಯಕರಲ್ಲಿ ಗೊಂದಲ ಉಂಟಾಗಿದೆ. ಶಾಸಕರನ್ನು ಮರೆಮಾಚುವ ಉದ್ದೇಶದಿಂದಲೇ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ


ಸಂಬಂಧಿತ ಟ್ಯಾಗ್ಗಳು

#Karnataka #politics #Resort #Bjp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ