ಮತ್ತೆ ಚುನಾವಣೆ ಎದುರಿಸಲು ಸಿದ್ಧ- ಮಧುಬಂಗಾರಪ್ಪ

 Ready to Face Elections Again Madhu Bangarappa

14-01-2019

ಲೋಕಸಭಾ ಉಪ ಚುನಾವಣೆ ನಂತರ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದ ಮಾಜಿ ಶಾಸಕ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಪಕ್ಷದ ನಾಯಕತ್ವದ ಬಗ್ಗೆ ತಮಗೆ ಯಾವುದೇ ಅಸಮಾಧಾನ ಅಥವಾ ಸಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಮಧುಬಂಗಾರಪ್ಪ ಪಕ್ಷ ತೊರೆಯುತ್ತಾರೆ ಎಂಬ ಆರೋಪಗಳಿಗೆ ತೆರೆ ಬಿದ್ದಂತಾಗಿದೆ. 

ಪಕ್ಷ ಸಂಘಟನೆಯಿಂದ ಮಧು ದೂರ ಇರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಮನವೊಲಿಸುವುದಾಗಿ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಧುಬಂಗಾರಪ್ಪ, ದೇವೇಗೌಡರು ಪತ್ರ ಬರೆದು ಮನವೊಲಿಸುವಂತಹ ದೊಡ್ಡ ಸಮಸ್ಯೆ ಇಲ್ಲ. ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೆ ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಿ ಬಗೆಹರಿಸಿಕೊಳ್ಳುತ್ತೇನೆ. ಶೀಘ್ರದಲ್ಲಿ ಗೌಡರನ್ನು ಭೇಟಿಮಾಡುತ್ತೇನೆ ಎಂದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಸೋತ ನಂತರ ಮುಖ್ಯವಾಹಿನಿಗೆ ಬರುವುದು ಬೇಡ ಎಂದು ನಾನೇ ಸುಮ್ಮನಿದ್ದೆ. ಈಗಲೂ ಪಕ್ಷದಿಂದ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸಲು ಸಿದ್ಧವಾಗಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಷಯದಲ್ಲೂ ಎರಡೂ ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಮಾಡಿಕೊಂಡ ನಂತರ ತಮ್ಮ ಸ್ಪರ್ಧೆ ನಿರ್ಧಾರವಾಗಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿನ ತಮ್ಮ ಸೋಲು ಸೋಲಲ್ಲ. ನೈತಿಕ ಗೆಲವು ಎಂದು ಸ್ವತಃ ಕುಮಾರಸ್ವಾಮಿ ಅವರೇ ಹೇಳಿದ್ದರು. ಅವರ ಸ್ಪೂರ್ತಿಯಿಂದ ತಾವು ಮತ್ತೆ ಚುನಾವಣೆ ಎದುರಿಸಲು ಸಿದ್ದವಾಗಿರುವುದಾಗಿ ತಿಳಿಸಿದರು. 

ತಮ್ಮನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಸ್ವತಃ ಮುಖ್ಯಮಂತ್ರಿ ಆಸಕ್ತಿ ತೋರಿದ್ದರು. ಆದರೆ ನಾನೇ ಆ ಆಹ್ವಾನವನ್ನು ತಿರಸ್ಕರಿಸಿದೆ. ಆದರೆ ಈಗ ತಮಗೆ ಜವಾಬ್ದಾರಿ ಕೊಡುತ್ತಿದ್ದು, ಸಿದ್ದವಾಗುವಂತೆ ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದೊಳಗಿನ ಸಣ್ಣಪುಟ್ಟ ಸಮಸ್ಯೆಗಳನ್ನು ಪಕ್ಷದೊಳಗೆ ಚರ್ಚಿಸುತ್ತೇವೆ. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಅತ್ಯಂತ ಯಶಸ್ವಿಯಾಗಿ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಎರಡು ಸಂಸಾರಗಳನ್ನು ನಡೆಸುತ್ತಿದ್ದಾರೆ. ಅವರ ಪರಿಸ್ಥಿತಿಯೂ ತಮಗೆ ಅರ್ಥವಾಗುತ್ತದೆ.  ಸಂಸದೀಯ ಕಾರ್ಯದರ್ಶಿ ಅಥವಾ ರಾಜಕೀಯ ಕಾರ್ಯದರ್ಶಿ ಹುದ್ದೆಗಳ ಆಕಾಂಕ್ಷಿ ತಾವಲ್ಲ. ಪಕ್ಷಕ್ಕಾಗಿ ಯಾವುದೇ ತ್ಯಾಗ ಮಾಡಲು  ಸಿದ್ದನಿದ್ದೇನೆ ಎಂದು ಮಧು ಬಂಗಾರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.ಇತ್ತೀಚೆಗೆ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವಂತೆ ತಮಗೆ ಆಹ್ವಾನ ನೀಡಲಾಗಿತ್ತು. ಮೊನ್ನೆ ನಡೆದ ಮತ್ತೊಂದು ಸಭೆಯಲ್ಲಿ ತಾವು ಪಾಲ್ಗೊಂಡಿಲ್ಲ. ತಮಗೆ ಯಾರ ಮೇಲೂ ಸಿಟ್ಟಿಲ್ಲ. ಅಸಮಾಧಾನವೂ ಇಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.


ಸಂಬಂಧಿತ ಟ್ಯಾಗ್ಗಳು

#Madhu Bangarappa # Ready to Face #Again # Election


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ