ಖರ್ಗೆ ಸೋಲಿಸಲು ಬಿಜೆಪಿ ರಣತಂತ್ರ

 BJP Tactics To Defeat Kharge

14-01-2019

ಹಿರಿಯ ಕಾಂಗ್ರೆಸ್ ಮುಖಂಡ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂಬರುವ ಚುನಾವಣೆಯಲ್ಲಿ ಮಣಿಸಲು ಬಿಜೆಪಿ ರಾಷ್ಟ್ರೀಯ ನಾಯಕರು ರಣತಂತ್ರ ರೂಪಿಸಿದ್ದು, ಅವರ ವಿರುದ್ಧ ಗುಲ್ಬರ್ಗಾ ಕ್ಷೇತ್ರದಲ್ಲಿ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನ ಪ್ರಭ ಅವರನ್ನು ಕಣಕ್ಕಿಳಿಸಲು ಕಾರ್ಯಯೋಜನೆ ಸಿದ್ಧಪಡಿಸಿದೆ.

ಮುಂಬರುವ ಲೋಕಸಭಾ ಚುನಾವಣೆಯ ನಂತರ ಮಲ್ಲಿಕಾರ್ಜುನ ಖರ್ಗೆ ಮಹಾಮೈತ್ರಿಕೂಟದ ಪ್ರಧಾನಿ ಇಲ್ಲವೆ ಪ್ರಮುಖ ಹುದ್ದೆಗೆ ತರಲು ಕಾಂಗ್ರೆಸ್ ಒಳ ವಲಯದಲ್ಲಿ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಅವರ ಗೆಲುವಿನ ನಾಗಾಲೋಟಕ್ಕೆ ತಡೆಯೊಡ್ಡಲು ಬಿಜೆಪಿ ನಾಯಕರು ವ್ಯೂಹ ರಚಿಸಿದ್ದಾರೆ.ಈ ಮೂಲಕ ಕಾಂಗ್ರೆಸ್ ನ ಹಿರಿಯ ಮತ್ತು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಭಾರಿ ಹಣಾಹಣಿ ನಡೆಸಲು ಬಿಜೆಪಿ ಮುಂದಾಗಿದ್ದು, ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಚುನಾವಣಾ ಕಾರ್ಯತಂತ್ರ ರೂಪುಗೊಂಡಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯ ಕರ್ನಾಟಕ ಘಟಕ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ ರತ್ನಪ್ರಭ ಅವರ ಹೆಸರನ್ನು ಬಿಜೆಪಿ ಕೇಂದ್ರ ಘಟಕಕ್ಕೆ ರವಾನಿಸಿದೆ.  ಆಡಳಿತ ಶಾಹಿ ವ್ಯವಸ್ಥೆಯಲ್ಲಿ ರತ್ನಪ್ರಭ ಅವರು ಪ್ರಮುಖ ಹೆಸರಾಗಿದ್ದು, ಜನ ಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. "1981ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿ ಹೈದರಾಬಾದ್ ಕರ್ನಾಟಕದ, ಅದರಲ್ಲೂ ಪ್ರಮುಖವಾಗಿ ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕೆಳಹಂತದ ಅಧಿಕಾರಿಗಳು ಮತ್ತು ಅವರ ಅಭಿಮಾನಿಗಳು ತಮ್ಮ ಮಕ್ಕಳಿಗೆ ರತ್ನಪ್ರಭ ಹೆಸರನ್ನು ನಾಮಕರಣ ಮಾಡುವಷ್ಟು ಅವರು ಜನಾನುರಾಗಿಯಾಗಿದ್ದಾರೆ. " ಎಂದು ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. 

ಕಾಂಗ್ರೆಸ್ ನ ಭದ್ರಕೋಟೆಯಾದ ಗುಲ್ಬರ್ಗಾದಲ್ಲಿ 1998 ರಲ್ಲಿ ಬಿಜೆಪಿಯ ಬಸವರಾಜ ಪಾಟೀಲ್ ಸೇಡಂ ಮತ್ತು 1996ರಲ್ಲಿ ಜೆಡಿಎಸ್ ನ ಖಮರುಲ್ ಇಸ್ಲಾಂ ಗೆಲುವು ಸಾಧಿಸಿದ್ದರು. 2009ರ ನಂತರ ಈ ಕ್ಷೇತ್ರವನ್ನು ಖರ್ಗೆ ನಿರಂತರವಾಗಿ ಪ್ರತಿನಿಧಿಸುತ್ತಿದ್ದಾರೆ. ಕಳೆದ 2009ಕ್ಕೂ ಮುಂಚೆ ಗುಲ್ಬರ್ಗಾ ಸಾಮಾನ್ಯ ಕ್ಷೇತ್ರವಾಗಿತ್ತು. ಕ್ಷೇತ್ರ ಪುನರ್ ವಿಂಗಡಣೆ ನಂತರ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ನೆಲೆ ಭದ್ರಪಡಿಸಿಕೊಂಡಿದೆ. 2019ರ ಲೋಕಸಭಾ ಚುನಾವಣೆಯ ನಂತರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ನಲ್ಲಿ ಅತಿ ದೊಡ್ಡ ಜವಾಬ್ದಾರಿ ನೀಡುವ ಮಾಹಿತಿ ಇದೆ. " ಖರ್ಗೆ ಅವರು ಕಾಂಗ್ರೆಸ್ ನ ದಲಿತ ಸಮುದಾಯದ ಪ್ರಧಾನ ಮುಖವಾಗಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿಶ್ವಾಸಗಳಿಸಿದ್ದಾರೆ. ಇದರ ಪರಿಣಾಮವೇ ಅವರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕತ್ವ ದೊರೆತಿದೆ. ಪಕ್ಷದ ಮತ್ತೋರ್ವ ನಂಬಿಕಸ್ತ ಕೆ.ವಿ. ಥಾಮಸ್ ಅವರ ಬದಲಿಗೆ ಖರ್ಗೆ ಅವರನ್ನೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರನ್ನಾಗಿಯೂ ಸಹ ನೇಮಿಸಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ" ಎಂದು ಇದೇ ಮೂಲಗಳು ಹೇಳಿವೆ. 
ಬರುವ ಲೋಕಸಭಾ ಚುನಾವಣೆಯ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಪಾತ್ರ ವಹಿಸಲಿದ್ದು, ಇದಕ್ಕಾಗಿ ಕಾಂಗ್ರೆಸ್ ಅಗತ್ಯ ಕಾರ್ಯತಂತ್ರ ರೂಪಿಸಿದೆ. " ಹೈಕಮಾಂಡ್ ಗೆ ನಿಕಟವರ್ತಿಯಾಗಿರುವ ಖರ್ಗೆ ಮನಮೋಹನ್ ಸಿಂಗ್ ಅವರಂತೆ ಪ್ರಧಾನಿ ಹುದ್ದೆ ಆಲಂಕರಿಸಲೂಬಹುದು ಎಂದು ಇದೇ ಮೂಲಗಳು ಹೇಳಿವೆ."
ಖರ್ಗೆ ಅವರಿಗೆ ಈ ಚುನಾವಣೆ ಹಿಂದೆಂದಿಗಿಂತಲೂ ಈ ಬಾರಿ ಅಗ್ನಿ ಪರೀಕ್ಷೆಯಾಗಿದ್ದು, ಅವರ ರಾಜಕೀಯ ಮಹತ್ವಾಕಾಂಕ್ಷೆಯೂ ಸಹ ಇದರಲ್ಲಿ ಅಡಗಿದೆ. ಕಾಂಗ್ರೆಸ್ 
ನಲ್ಲಿ ಈ ಹಿಂದೆ ಪ್ರಣಬ್ ಮುಖರ್ಜಿ ಮತ್ತು ಶರದ್ ಪವಾರ್ ಇದೇ ಉತ್ತುಂಗ ಪರಿಸ್ಥಿತಿಯಲ್ಲಿದ್ದರು. ನಂತರ ಬದಲಾದ ರಾಜಕಾರಣದಲ್ಲಿ ಅವರು ಹಿನ್ನೆಲೆಗೆ ಸರಿದರು. ಹೀಗಾಗಿ ಈ ಬಾರಿ ಖರ್ಗೆ ಪ್ರಧಾನ ಪಾತ್ರ ವಹಿಸಬೇಕಾಗಿದ್ದು, ಅದಕ್ಕಾಗಿ ಕಠಿಣ ಶ್ರಮಪಡಬೇಕಾಗಿದೆ.

" ಕಾಂಗ್ರೆಸ್ ನಲ್ಲಿ ಖರ್ಗೆ ದೊಡ್ಡ ಸ್ಥಾನಮಾನ ಹೊಂದಿದ್ದು, ಅದಕ್ಕಾಗಿ ಸಂತಸಪಡಬೇಕಾಗಿದೆ. ಹೀಗಾಗಿ ಚುನಾವಣೆಯಲ್ಲಿ ದೊಡ್ಡಮಟ್ಟದ ಬೆಳವಣಿಗೆ ಸಾಧಿಸಬೇಕಾಗಿದೆ. ಖರ್ಗೆ ರಾಜಕಾರಣದ ಅತ್ಯಂತ ನಿಕಟ ಪರಿವೀಕ್ಷಕರಾಗಿದ್ದು, ಎಲ್ಲಾ ಹಂತಗಳಲ್ಲಿ ನಮ್ರತೆಯನ್ನು ಕಾಯ್ದುಕೊಳ್ಳುವ ವ್ಯಕ್ತಿತ್ವದವರು. ಹಾಗಾಗಿ ಗುಲ್ಬರ್ಗಾದಲ್ಲಿ ಖರ್ಗೆ ಅವರಿಗೆ ಮತ್ತೊಮ್ಮೆ ಗೆಲುವು ಅನಿವಾರ್ಯವಾಗಿದೆ." ಎನ್ನುತ್ತವೆ ಇದೇ ಮೂಲಗಳು.
ಗುಲ್ಬರ್ಗಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಗುಲ್ಬರ್ಗಾ ಗ್ರಾಮೀಣ ಮತ್ತು ಚಿತ್ತಾಪುರ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರಗಳಾಗಿವೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅವರ ಪುತ್ರ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದು, ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Mallikrjun Karghe #Election #Bjp #Masterplan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ