ಮಂಡ್ಯದಲ್ಲಿ ನಿಖಿಲ್ ವರ್ಸಸ್ ಅಭಿಷೇಕ್

 Nikhil Versus Abhishek in Mandya

14-01-2019

ಲೋಕಸಭೆ ಚುನಾವಣೆ ವೇಳೆ ರಾಜ್ಯದ ದೃಷ್ಟಿ ಮಂಡ್ಯದತ್ತ ಕೇಂದ್ರಿಕೃತವಾಗುವ ಮುನ್ಸೂಚನೆ ದೊರೆತಿದೆ. ಹೌದು ಸಕ್ಕರೆ ನಾಡು ಮಂಡ್ಯ ಈ ಬಾರಿ ಪ್ರತಿಷ್ಠೆಯ ಕಣವಾಗುವ ಸಾಧ್ಯತೆ ಇದ್ದು, ಒಂದೆಡೆ ಮಾಜಿ ಪ್ರಧಾನಿ ದೇವೆಗೌಡರು ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಲು ಚಿಂತನೆ ನಡೆಸಿದ್ದರೇ, ಇನ್ನೊಂದೆಡೆ ಮಂಡ್ಯದ ಗಂಡು ದಿ.ಅಂಬರೀಶ್‍ಪುತ್ರ ಅಭಿಷೇಕ್‍ರನ್ನು ಕಣಕ್ಕಿಳಿಸಬೇಕೆಂಬ ಒತ್ತಾಯ ಮಂಡ್ಯದಿಂದಲೇ ಕೇಳಿ ಬಂದಿದೆ. ಯಾರು ಕಣಕ್ಕಿಳಿಯುತ್ತಾರೆ? ಅನ್ನೋದು ಸಧ್ಯದ ಕುತೂಹಲ. 

ಲೋಕಸಭ ಚುನಾವಣೆಗೆ ಮುನ್ಸೂಚನೆ  ದೊರೆತಾಗಿನಿಂದಲೇ ಈ ಬಾರಿ ದೇವೆಗೌಡರು ತಮ್ಮ ಇಬ್ಬರು ಮೊಮ್ಮಕ್ಕಳನ್ನು ರಾಜಕೀಯಕ್ಕೆ  ಕರೆತರಲು ಸಿದ್ಧತೆ ನಡೆಸಿದ್ದರು. ಒಂದೆಡೆ ಹಾಸನವನ್ನು ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟಿದ್ದ ದೊಡ್ಡಗೌಡರು, ನಿಖಿಲ್‍ಗೆ ಮಂಡ್ಯವನ್ನು ಮೀಸಲಾಗಿಡುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಎರಡೂ ಜೆಡಿಎಸ್‍ನ ಗಟ್ಟಿನೆಲ. ಮೊದಲ ಚುನಾವಣೆಯಲ್ಲಿ ಮೊಮ್ಮಕ್ಕಳಿಗೆ ಸೋಲಿನ ಅನುಭವವಾಗಬಾರದು ಎಂಬ ಕಾರಣಕ್ಕೆ ದೇವೆಗೌಡರು ಇಂತಹದೊಂದು ಪ್ಲ್ಯಾನ್ ಮಾಡಿದ್ದರು. ಎಲ್ಲ ಅವರು ಅಂದುಕೊಂಡಂತೆ ನಡೆದಿತ್ತು. ಆದರೆ ಈಗ ಅಂಬರೀಶ್ ನಿಧನದ ಬಳಿಕ ಅವರ ಉತ್ತರಾಧಿಕಾರಿಯಾಗಿರುವ ಅಭಿಷೇಕ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಬೇಕೆಂಬ ಒತ್ತಡ ಕೇಳಿಬರುತ್ತಿದ್ದು, ಗೌಡರ್ ಲೆಕ್ಕಾಚಾರ ತಪ್ಪಿದಂತಾಗಿದೆ.  ಕಾಂಗ್ರೆಸ್-ಜೆಡಿಎಸ್ ನಡುವೆ ಮತ್ತೊಮ್ಮೆ ಕದನ ಏರ್ಪಡುವ ಸ್ಪಷ್ಟ ಮುನ್ಸೂಚನೆ ಲಭ್ಯವಾಗುತ್ತಿದೆ. 

ಇತ್ತೀಚಿಗೆ ನಿಧನರಾದ ಅಂಬರೀಶ್ ಮಂಡ್ಯದ ಜನತೆಯ ಪಾಲಿಗೆ ದೈವದಂತಿದ್ದರು. ಹೀಗಾಗಿ ಈ ಅಂಬರೀಶ್ ಋಣ ತೀರಿಸಲು ಮುಂದಾಗಿರುವ ಮಂಡ್ಯ ಜನರು, ಅಂಬರೀಶ್ ಪುತ್ರ ಅಭಿಷೇಕ ರಾಜಕೀಯ ಪ್ರವೇಶಿಸಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.  ಈ ಬಗ್ಗೆ ಅಲ್ಲಿನ ಕಾಂಗ್ರೆಸ್ ಮುಖಂಡರು ಸುದ್ಧಿಗೋಷ್ಠಿ ಕೂಡ ನಡೆಸಿದ್ದು, ಅಭಿಷೇಕ್ ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಇದು ಕಾಂಗ್ರೆಸ್ ಪಾಲಿಗೆ ತಲೆನೋವಾಗುವ ಎಲ್ಲ ಸಾಧ್ಯತೆ ಇದೆ. ಒಂದೆಡೆ ಜೆಡಿಎಸ್‍ನ ಸ್ನೇಹ   ಇನ್ನೊಂದೆಡೆ ಕಾಂಗ್ರೆಸ್‍ನ ಕಾರ್ಯಕರ್ತರ ಒತ್ತಡ ಯಾವುದಕ್ಕೆ ಬೆಲೆ ಕೊಡಬೇಕೆಂದು ಕಾಂಗ್ರೆಸ್ ನಾಯಕರು ಪರದಾಡುತ್ತಿದ್ದಾರೆ. 

ಪ್ರಸಕ್ತ ಮಂಡ್ಯ ಸಂಪೂರ್ಣ ಜೆಡಿಎಸ್‍ಮಯವಾಗಿದೆ. ಶಾಸಕರು ಹಾಗೂ ಸಂಸದರು ಜೆಡಿಎಸ್‍ನವರೇ ಆಗಿರೋದರಿಂದ ನಿಖಿಲ್ ಹಾದಿ ಸುಗಮವಾಗಲಿದೆ ಎಂಬುದು ಸತ್ಯ. ಅದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಲ್ಲಿ ಈ ಚುನಾವಣೆ ಎದುರಿಸಬೇಕಿದೆ. ಮಂಡ್ಯದಿಂದ ದೇವೆಗೌಡರು ಸ್ಪರ್ಧಿಸುತ್ತಾರೆಎಂಬ ಕಾರಣಕ್ಕೆ ಮಂಡ್ಯವನ್ನು ಬಿಟ್ಟುಕೊಡಲು ಕೈಪಾಳಯ ಒಪ್ಪುವ ಸಾಧ್ಯತೆ ಇತ್ತು. ಆದರೆ ಈಗ ನಿಖಿಲ್‍ಗಾಗಿ ಈ ಕ್ಷೇತ್ರವನ್ನು ಬಿಟ್ಟುಕೊಡುವುದು, ಕಾಂಗ್ರೆಸ್ ಕಾರ್ಯಕರ್ತರ ವಿರೋಧಕ್ಕೆ ಕಾರಣವಾಗುವ ಸಾಧ್ಯತೆ ಇದೆ. 

ಅಲ್ಲದೇ ಒಂದು ಕ್ಷೇತ್ರವನ್ನು ಸಂಪೂರ್ಣವಾಗಿ ಜೆಡಿಎಸ್‍ಗೆ ಬಿಟ್ಟುಕೊಟ್ಟಂತಾಗುತ್ತದೆ. ಇದಕ್ಕೆ ಕಾಂಗ್ರೆಸ್ಸಿಗರು ವಿರೋದ ವ್ಯಕ್ತಪಡಿಸೋ ಸಾಧ್ಯತೆಗಳಿದ್ದು, ನಿಖಿಲ್ ಕಣಕ್ಕಿಳಿಸೋದಾದರೇ ಕಾಂಗ್ರೆಸ್‍ನಿಂದ ಅಭಿಷೇಕ ಕಣಕ್ಕಿಳಿಸುವಂತೆ ಒತ್ತಾಯಿಸುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ಅಡಕತ್ತರಿಯಲ್ಲಿ ಸಿಲುಕಿದಂತಾಗಿರೋದು ಸತ್ಯ. 
ಇನ್ನು ಅಭಿಷೇಕ, ಮಂಡ್ಯದಿಂದ ಕಣಕ್ಕಿಳಿಯೋ ಬಗ್ಗೆ ಇನ್ನು  ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಸುಮಲತಾ ಕೂಡ ಕಣಕ್ಕಿಳಿತಾರೆ ಅನ್ನೋ ಊಹಾಪೋಹವಿದ್ದು, ಆ ಬಗ್ಗೆ ಕೂಡ ಯಾವುದೇ ಸ್ಪಷ್ಟನೆ ದೊರೆತಿಲ್ಲ. ಒಟ್ಟಿನಲ್ಲಿ ಮಂಡ್ಯ ಲೋಕಸಭಾ ಚುನಾವಣೆಯ ಹೈಟೆನ್ಸನ್ ಕ್ಷೇತ್ರವಾಗುವ ಎಲ್ಲ ಸಾಧ್ಯತೆಗಳಿದ್ದು, ನಿಖಿಲ್ ವರ್ಸಸ್ ಅಭಿಷೇಕ ಎಂಬ ಸ್ಥಿತಿ ನಿರ್ಮಾಣವಾದರೆ ಮಾತ್ರ ಚುನಾವಣೆ ಮತ್ತಷ್ಟು ರಂಗೇರೋದು ಗ್ಯಾರಂಟಿ.  


ಸಂಬಂಧಿತ ಟ್ಯಾಗ್ಗಳು

#Lokshabha #Nikil kumarswamy #Mandya #Abishek Ambrish


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ