ಮತ್ತೊಂದು ನ್ಯೂಸ್ ಚಾನೆಲ್‍ಗೆ ಬೀಗ- ಬೀದಿಗೆ ಬಿದ್ದವರನ್ನು ಕೇಳೋರ್ಯಾರು? 

 Lock to Another Kannada  News Channel

12-01-2019

ಪತ್ರಿಕೋದ್ಯಮದಲ್ಲಿ ಒಮ್ಮೆ ಕೈಸುಟ್ಟುಕೊಂಡರೂ ಬುದ್ಧಿಕಲಿಯದೆ ನ್ಯೂಸ್ ಚಾನೆಲ್ ಆರಂಭಿಸಿ ಯಶಸ್ವಿಯಾಗುವ ಕನಸಿನೊಂದಿಗೆ  ರಾಜಕಾರಣಿ ಹಾಗೂ ಉದ್ಯಮಿ ಕೆ.ಪಿ.ನಂಜುಂಡಿ ಆರಂಭಿಸಿದ್ದ ಸುದ್ದಿವಾಹಿನಿ ಟಿವಿ1 ಗುರುವಾರ ದಿಢೀರ ತನ್ನ ಪ್ರಸಾರ ನಿಲ್ಲಿಸಿದೆ. ಕೆ.ಪಿ.ನಂಜುಂಡಿಯವರ ಈ ನಿರ್ಧಾರದೊಂದಿಗೆ ಅಂದಾಜು 150ಕ್ಕೂ ಹೆಚ್ಚು ಪತ್ರಕರ್ತರು ಬೀದಿಗೆ ಬಿದ್ದಿದ್ದಾರೆ. 
ಈ ಹಿಂದೆ ವಿಶ್ವೇಶ್ವರ್ ಭಟ್ ರೊಂದಿಗೆ ವಿಶ್ವವಾಣಿ ಪತ್ರಿಕೆ ಆರಂಭಿಸಿ ಅವರನ್ನು ನಡುನೀರಿನಲ್ಲಿ ಕೈಬಿಟ್ಟು ಎದ್ದು ಬಂದ  ಕೆ.ಪಿ.ನಂಜುಂಡಿ, ಯಶ್ವಂತಪುರ ಸನಿಹದ ಮತ್ತಿಕೆರೆಯ ತಮ್ಮ ಸ್ವಂತ ಕಚೇರಿಯಲ್ಲಿ ಕಳೆದ ಒಂದು ವರ್ಷದಿಂದ ಟಿವಿ1 ಎಂಬ ವಾಹಿನಿ ಆರಂಭಿಸಿದ್ದರು. ಪಾಸ್‍ಪೋರ್ಟ್ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಪತ್ರಕರ್ತ ಶಿವಪ್ರಸಾದ್ ನೇತೃತ್ವದಲ್ಲಿ ಟಿವಿ1 ಅದ್ದೂರಿಯಾಗಿಯೇ ಆರಂಭ ಕಂಡಿತ್ತು. ಆದರೆ ಆರಂಭವಾದ ಕೆಲವೆ ತಿಂಗಳಿನಲ್ಲಿ ಸಾಮಾನ್ಯವಾಗಿ ಎಲ್ಲ ವಾಹಿನಿಗಳಲ್ಲಿ ಕಾಣಿಸಿಕೊಳ್ಳುವಂತೆ ಇಲ್ಲಿಯೂ ಸಂಬಳದ ಸಮಸ್ಯೆ ಎದುರಾಗಿತ್ತು. 

ಒಮ್ಮೆ ಇದೇ ವಿಚಾರಕ್ಕೆ ಟಿವಿ1 ಕಚೇರಿಯಲ್ಲಿ ಸಿಬ್ಬಂದಿಗಳು ಜಗಳವಾಡಿಕೊಂಡು ಹೊರಬಿದ್ದಿದ್ದು ಈ ವಿಡಿಯೋ ಕೂಡ ಸಖತ್ ವೈರಲ್ ಆಗಿ ಸಂಚಲನ ಮೂಡಿಸಿತ್ತು. ಈ ಮಧ್ಯೆ ನಂಜುಂಡಿಯವರ ಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲಿ ಈ ವಾಹಿನಿ ಕಚೇರಿಯ ಮೇಲೂ ರೇಡ್ ಮಾಡಲಾಗಿತ್ತು. ಆದರೂ ಕುಂಟುತ್ತಾ ಸಾಗುತ್ತಿದ್ದ ವಾಹಿನಿ ಗುರುವಾರ ರಾತ್ರಿಯಿಂದ ದೀಢೀರ ಪ್ರಸಾರ ನಿಲ್ಲಿಸಿದೆ. ಇದರಿಂದ ಅದನ್ನೆ ನಂಬಿ ಬದುಕು ಕಟ್ಟಿಕೊಂಡವರು ಕಂಗಾಲಾಗಿದ್ದಾರೆ. 

ಮೂಲಗಳ ಪ್ರಕಾರ ವಾಹಿನಿಯಿಂದ ಯಾವುದೇ ಪೇಮೆಂಟ್ ಸರಿಯಾಗಿ ದೊರೆಯದ ಕಾರಣಕ್ಕೆ ಕೇಬಲ್‍ಗಳು ಚಾನೆಲ್ ಪ್ರಸಾರವನ್ನು ನಿಲ್ಲಿಸಿದ್ದಾರೆ. ಅಲ್ಲದೆ ನಂಜುಂಡಿಯವರು ರಾಜಕೀಯ ಕಾರ್ಯಸಾಧನೆಗಾಗಿ ಆರಂಭಿಸಿದ ಈ ವಾಹಿನಿ ಯಾವುದೇ ರೀತಿಯಲ್ಲೂ ಅವರ ಸಹಾಯಕ್ಕೆ ಬಂದಿಲ್ಲ. ಪ್ರತಿತಿಂಗಳು ಕೋಟ್ಯಾಂತರ ರೂಪಾಯಿ ವೆಚ್ಚಕ್ಕೆ ಕಾರಣವಾಗಿದ್ದ ಈ ವಾಹಿನಿ ನಡೆಸುವುದು ಕೆ.ಪಿ.ನಂಜುಂಡಿಯವರಿಗೆ ಕಷ್ಟವಾಗತೊಡಗಿತ್ತು. ಇದೆ ಕಾರಣಕ್ಕೆ ನಂಜುಂಡಿ ಈ ವಾಹಿನಿ ನಿಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಗುರುವಾರ ಕಚೇರಿಗೆ ಆಗಮಿಸಿದ ಕೆ.ಪಿ.ನಂಜುಂಡಿ, ತಾಂತ್ರಿಕ ಕಾರಣಕ್ಕಾಗಿ ಈ ವಾಹಿನಿಯ ಪ್ರಸಾರ ನಿಲ್ಲಿಸಲಾಗುತ್ತಿದೆ. ನೀವ್ಯಾರು ನಾಳೆಯಿಂದ ಕಚೇರಿಗೆ ಬರುವುದು ಬೇಡ. ಎಲ್ಲ ಸರಿಹೋದರೆ ಮತ್ತೆ ಕರೆಸಿಕೊಳ್ಳಲಾಗುತ್ತದೆ ಎಂಬ ಭರವಸೆ ನೀಡಿದ್ದಾರೆ.  

ಒಟ್ಟಿನಲ್ಲಿ ಕರ್ನಾಟಕದಲ್ಲಿ  ಮಾಲೀಕರುಗಳು ಟಿವಿ ಚಾನೆಲ್ ನಡೆಸುವ ಹೆಸರಿನಲ್ಲಿ ಬಡ ಪತ್ರಕರ್ತರನ್ನು ಶೋಷಿಸುತ್ತಿದ್ದಾರೆ.  ಕೆಲಸಕ್ಕೆ ಸೇರಿಕೊಳ್ಳುವಾಗ 2-3-4 ವರ್ಷದ ಬಾಂಡ್ ಪಡೆದುಕೊಳ್ಳಲಾಗುತ್ತದೆ. ಆದರೆ ಮಾಲೀಕರು ಮಾತ್ರ ಯಾವಾಗ ಬೇಕೋ ಅವಾಗ ಚಾನೆಲ್ ಮುಚ್ಚಿ ಮನೆಗೆ ಹೋಗುತ್ತಾರೆ. ಉದ್ಯೋಗಿಗಳ ಪಾಡು ಕೇಳೋರಿಲ್ಲ. ಇನ್ನು ಈ ವಾಹಿನಿಗಳಿಗೆ ಆರಂಭಿಸುವಾಗ ಯಾವುದೇ ನಿಯಮ-ನೀತಿಗಳಿಲ್ಲದೇ ಇರೋದರಿಂದ ಚಾನೆಲ್‍ಗಳು ಬಾಗಿಲು ಮುಚ್ಚಿದಾಗ ಉದ್ಯೋಗಿಗಳು ಯಾರನ್ನು ಪ್ರಶ್ನೆಮಾಡಬೇಕು, ಯಾರಿಂದ ನ್ಯಾಯ ಕೇಳಬೇಕು ಎಂಬುದೇ ಗೊತ್ತಾಗದಂತಹ ಸ್ಥಿತಿ ಎದುರಾಗುತ್ತದೆ ಅಂತಿದ್ದಾರೆ ಹೆಸರು ಹೇಳಲು ಇಚ್ಛಿಸದ ಯುವಪತ್ರಕರ್ತರೊಬ್ಬರು. 

ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಹಿರಿಯ ಪತ್ರಕರ್ತ ಶಶಿಧರ್ ಭಟ್ ನೇತ್ರತ್ವದ ಸುದ್ದಿ ಟಿವಿ ಹಾಗೂ ಡಾ.ನೌಹೇರಾ ಶೇಖ್ ಮಾಲಿಕತ್ವದ ಸ್ವರಾಜ್ ನ್ಯೂಸ್ ಕೂಡ ಬಾಗಿಲು ಮುಚ್ಚಿತ್ತು. ಇದೀಗ ಈ ಸಾಲಿಗೆ ಟಿವಿ1 ಕೂಡ ಸೇರ್ಪಡೆಯಾಗಿದ್ದು, ಉದ್ಯೋಗಿಗಳು ಬೀದಿಗೆ ಬಿದ್ದಿದ್ದಾರೆ. ಇನ್ನಾದರೂ ರಾಜ್ಯದಲ್ಲಿ ನಾಯಿಕೊಡೆಗಳಂತೆ ವಾಹಿನಿಗಳು ಹುಟ್ಟೋದನ್ನು ತಡೆಯಬೇಕಿದೆ ಅಂತಿದ್ದಾರೆ ಪ್ರಜ್ಞಾವಂತರು. 


ಸಂಬಂಧಿತ ಟ್ಯಾಗ್ಗಳು

#Kannada News Chanel #Lock #Tv1 #Journalist


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


tv channel reporters r doing unity like sangh like patrakartara sangha .
  • Chandrashekhar M S
  • Professional