ಜಾರ್ಜ್ ವಿರುದ್ಧ ನಡಿತಿದ್ಯಾ ಷಡ್ಯಂತ್ರ

Congress vs.  K J George ?

11-01-2019

ರಾಜ್ಯ ಕಾಂಗ್ರೆಸ್‍ನಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎನ್ನಿಸಿದರೂ ಆಂತರಿಕವಾಗಿ ಭಿನ್ನತೆ ಹಾಗೂ ಅಂತಃಕಲಹವಿದೆ. ಈ ಆಂತರಿಕ ಶೀತಲ ಸಮರದ ಮೂಲಕವೇ ಕಾಂಗ್ರೆಸ್‍ನ  ದೊಡ್ಡ ಶಕ್ತಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಬಲಹೀನಗೊಳಿಸುವ ಪ್ರಯತ್ನವೂ ನಡಿತಿದೆ. ಸಿದ್ಧರಾಮಯ್ಯನವರ ಬಲಗೈ ಹಾಗೂ ನಿಷ್ಠಾವಂತ ಬೆಂಬಲಿಗರಾದ ಕೆ.ಜೆ.ಜಾರ್ಜ್ ಅವರಿಂದ ಮಂತ್ರಿ ಪದವಿಗಳನ್ನು ಒಂದೊಂದಾಗಿ ಕಿತ್ತುಕೊಳ್ಳುವ ಮೂಲಕ ಸಿದ್ದು ಶಕ್ತಿಕುಗ್ಗಿಸಿ, ಜಾರ್ಜ್‍ರನ್ನು ಮೂಲೆಗುಂಪು ಮಾಡುವ ಕಾರ್ಯ ವ್ಯವಸ್ಥಿತವಾಗಿ ಆರಂಭವಾಗಿದೆ ಅಂತಿದ್ದಾರೆ ರಾಜಕೀಯ ವಿಶ್ಲೇಷಕರು. 

ಕೆ.ಜೆ.ಜಾರ್ಜ್ ಹಿರಿಯ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದವರು. ಸಚಿವ ಸಂಪುಟದಲ್ಲೇ ಪ್ರತಿಷ್ಠಿತ ಎನ್ನಿಸಿಕೊಳ್ಳುವ ಗೃಹ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇಂಥಹ ಜಾರ್ಜ್‍ರವರಿಂದ,  ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಸಮ್ಮಿಶ್ರ ಸರ್ಕಾರ ಒಂದೊಂದೆ ಖಾತೆಗಳನ್ನು ಹಿಂಪಡೆಯಲು ಆರಂಭಿಸಿದೆ. ಸಚಿವ ಸಂಪುಟ ರಚನೆ ವೇಳೆ ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿಬಿಟಿ ಹಾಗೂ ಬೃಹತ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಹೊಂದಿದ್ದ ಜಾರ್ಜ್ ಬಳಿ ಈಗ ಉಳಿದಿರುವುದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ.  ಉಳಿದ ಎರಡೂ ಇಲಾಖೆಯನ್ನು ಸರ್ಕಾರ ಹಿಂಪಡೆದುಕೊಂಡು ಅತೃಪ್ತರ ಮಡಿಲಿಗೆ ಹಾಕಿದೆ.
 
ಇದು ಕೇವಲ ಅತೃಪ್ತರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾತ್ರ ಅಲ್ಲ, ಜಾರ್ಜ್ ಅವರನ್ನು ರಾಜಕೀಯವಾಗಿ ಹಾಗೂ ಪಕ್ಷದಲ್ಲಿ ಮೂಲೆಗುಂಪು ಮಾಡುವ ಪ್ರಯತ್ನ ಎನ್ನುತ್ತಿವೆ ರಾಜಕೀಯ ಮೂಲಗಳು. ಸಿದ್ಧರಾಮಯ್ಯನವರಿಗೆ ಬೆನ್ನೆಲುಬಾಗಿ ನಿಂತಿರುವ ಜಾರ್ಜ್ ಎಲ್ಲ ಸಂದರ್ಭದಲ್ಲೂ ಅವರಿಗೆ ನಿಷ್ಠರಾಗಿದ್ದರು. ಹೀಗಾಗಿ ಜಾರ್ಜ್‍ರನ್ನು  ಪ್ರಮುಖ ಖಾತೆಗಳಿಂದ ಹೊರಹಾಕಿ,  ಆ ಮೂಲಕ ಸಿದ್ಧರಾಮಯ್ಯನವರಿಗೆ ಚುರುಕು ಮುಟ್ಟಿಸುವುದು ಸಿದ್ಧು ವಿರೋದಿ ಬಣದ ಸಂಚು ಎನ್ನಲಾಗುತ್ತಿದೆ.
 
ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲೇ ಕೆ.ಜೆ.ಜಾರ್ಜ್‍ರವರಿಗೆ ಅವಮಾನ ಮಾಡಲಾಗಿತ್ತು. ಈ ಹಿಂದಿನ ಸರ್ಕಾರದ ಅವಧಿಯಲ್ಲಿ  ಗೃಹಖಾತೆಯಂತಹ ಮಹತ್ವದ ಹಾಗೂ ಪ್ರಭಾವಿ ಖಾತೆ ನಿರ್ವಹಣೆ ಮಾಡಿದ ಜಾರ್ಜ್‍ರವರಿಗೆ ಈ ಬಾರಿ ಕೈಗಾರಿಕೆ, ಐಟಿ-ಬಿಟಿಯಂತಹ ಸಣ್ಣ ಖಾತೆಗಳನ್ನು ನೀಡುವ ಮೂಲಕ ಪರೋಕ್ಷವಾಗಿ ಪದಚ್ಯುತಿಗೊಳಿಸಿದಂತೆ ವರ್ತಿಸಿದ್ದರು. ಇದಕ್ಕೆ ಜಾರ್ಜ್ ತಲೆಕೆಡಿಸಿಕೊಂಡಿರಲಿಲ್ಲ. 


ಆದರೆ ಈ ಸಚಿವ ಸಂಪುಟದಲ್ಲಿ ನೇರವಾಗಿಯೇ ಅವರ ಮೇಲೆ ಷಡ್ಯಂತ ರೂಪಿಸಲಾಗುತ್ತಿದೆ ಎಂದರೆ ತಪ್ಪಿಲ್ಲ.  ಆದರೆ ಚುನಾವಣೆ ಸೇರಿದಂತೆ ಎಲ್ಲ ಸಂದರ್ಭದಲ್ಲೂ ಪಕ್ಷದ ಪರ ದುಡಿಯುವ ಹಾಗೂ ಆರ್ಥಿಕ ಸಹಾಯ ಒದಗಿಸುವ  ಜಾರ್ಜ್‍ರನ್ನು ಸಿದ್ದು ಆಪ್ತರು ಎಂಬ ಒಂದೇ ಕಾರಣಕ್ಕೆ ಹಣಿಯುವ ಪ್ರಯತ್ನ ನಡೆಯುತ್ತಿರೋದು ಮುಂದಿನ ದಿನಗಳಲ್ಲಿ ಎಷ್ಟರಮಟ್ಟಿಗೆ ಕಾಂಗ್ರೆಸ್‍ಗೆ ತಿರುಗೇಟಾಗಿ ಪರಿಣಮಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. 
 


ಸಂಬಂಧಿತ ಟ್ಯಾಗ್ಗಳು

#K J George #Siddaramayya #Congress #Internal Fight


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ