ಅಯೋಧ್ಯೆ ಪ್ರಕರಣ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಉದಯ ಲಲಿತ್ 

 Judge Uday Lalith, who retired from Ayodhya case proceedings

10-01-2019

ವಿವಾದಿತ ರಾಮಜನ್ಮಭೂಮಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜನವರಿ 29ಕ್ಕೆ ಮುಂದೂಡಿದೆ. ಅಯೋಧ್ಯೆಯ ವಿವಾದಿತ ಭೂಪ್ರದೇಶ ಹಂಚಿಕೆ ಪ್ರಕರಣದ ವಿಚಾರಣೆಯನ್ನು  ಸುಪ್ರೀಂಕೋರ್ಟ್‍ನ ಐವರು ನ್ಯಾಯಾಧೀಶರ ಪೀಠ ಕೈಗೆತ್ತಿಕೊಂಡಿತ್ತು. 

ಸಾಂವಿಧಾನಿಕ ಐವರು ನ್ಯಾಯಮೂರ್ತಿಗಳ ಪೈಕಿ ನ್ಯಾಯಮೂರ್ತಿ ಉದಯ್ ಲಲಿತ್ ವಿಚಾರಣೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ  ವಿಚಾರಣೆಯನ್ನು ನ್ಯಾಯಪೀಠ ಜನವರಿ 29 ಕ್ಕೆ ಮುಂದೂಡಿದೆ.  ಹೊಸಪೀಠವನ್ನು ರಚನೆ ಮಾಡಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ  ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ. 
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರ ಪರ  ನ್ಯಾಯಮೂರ್ತಿ ಉದಯ್ ಲಲಿತ್ 1994 ರಲ್ಲಿ ವಾದ ಮಂಡಿಸಿದ್ದರು.  ಈ ಹಿನ್ನೆಲೆಯಲ್ಲಿ ವಕೀಲರಾದ ರಾಜೀವ್ ಧವನ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. 

ವಿವಾದಿತ ರಾಮಮಂದಿರ ಭೂಪ್ರದೇಶವನ್ನು  ನಿರ್ಮೋಹಿ ಅಖಾಡ, ರಾಮಲಲ್ಲಾ ಮತ್ತು ಸುನ್ನಿವಕ್ಪ್ ಮಂಡಳಿಗೆ ಹಂಚಿಕೆ ಮಾಡಿ  2010 ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. 2018 ರ ಅಕ್ಟೋಬರ್ 29 ರಂದು  ಪ್ರಕರಣಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ  ಮುಂದಿನ ವಿಚಾರಣೆಯನ್ನು ಜನವರಿ 4 ಕ್ಕೆ ಮುಂದೂಡಿತ್ತು. 


ಜನವರಿ 4 ರಂದು ಮೇಲ್ಮನವಿ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಪೀಠ, ಪ್ರಕರಣವನ್ನು ಸಂವಿಧಾನದ ಹೊಸ ಪೀಠಕ್ಕೆ ವರ್ಗಾಯಿಸಿತ್ತು. ಇದೀಗ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್‍ನ ಪ್ರಮುಖ ವಿಚಾರವಾಗಿರುವ ಈ ರಾಮಮಂದಿರ ನಿರ್ಮಾಣ ವಿಚಾರದ ಕುರಿತು ನ್ಯಾಯಾಲಯ ನೀಡಲಿರುವ ತೀರ್ಪು ಅತ್ಯಂತ ಮಹತ್ವ ಪಡೆದುಕೊಂಡಿರುವ ಬೆನ್ನಲ್ಲೇ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮುಂದೂಡಿಕೆಯಾಗಿದೆ. ಜನವರಿ 29 ರಂದು ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. 
 


ಸಂಬಂಧಿತ ಟ್ಯಾಗ್ಗಳು

#Ayodhya case #Retired #Judge Uday Lalith #Case proceedings


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ