ಅಭಿಮಾನವೋ ಅತಿರೇಕವೋ? 

 Outrageous Behavior by Fans of Film Actors

09-01-2019

ಚಿತ್ರನಟರ ಮೇಲಿನ ಅಭಿಮಾನವೆಂಬ ಹುಂಬತನದಿಂದ ಅದೇಷ್ಟೋ ಜನರು ಜೀವನ ಹಾಳುಮಾಡಿಕೊಂಡಿದ್ದಾರೆ. ಈಗ ಇಂತಹುದೇ ಘಟನೆಯೊಂದು ಮರುಕಳಿಸಿದ್ದು, ರಾಕಿಂಗ್ ಸ್ಟಾರ್ ಯಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ರವಿ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಾವು ಸಿನಿಮಾ ನಟ-ನಟಿಯರ ಅಭಿಮಾನವೆಂಬ ಹುಚ್ಚುಹೊಳೆಯಲ್ಲಿ ಮುಳುಗಿಹೋಗುತ್ತಿರುವ ಯುವಜನತೆಯ ತಿಕ್ಕಲುತನವನ್ನು ಪ್ರದರ್ಶಿಸುತ್ತಿದ್ದು, ಇದರೊಂದಿಗೆ ಮಾಧ್ಯಮಗಳು ಸಿನಿಮಾನಟರನ್ನು ದೇವರಂತೆ ವೈಭವಕರಿಸುತ್ತಿರುವುದರ ಫಲವಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ. 

ಚಿತ್ರರಂಗದ ಹಿರಿಯ ನಟ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು. ಅಭಿಮಾನಿಗಳಿಗಾಗಿ ಒಂದು ವಾಟ್ಸಪ್ ವಿಡಿಯೋ ರೆಕಾರ್ಡ್ ಮಾಡಿದ್ದ ಯಶ್, ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಅಭಿಮಾನಿಗಳು ಮನೆಯತ್ತ ಬಾರದಂತೆ ಮನವಿ ಮಾಡಿದ್ದರು. ಆದರೆ ಇದಕ್ಕೂ ಬಗ್ಗದ ಅಭಿಮಾನಿಗಳು ಮನೆಯ ಬಳಿಬಂದಿದ್ದರು. ಈ ವೇಳೆ ಹುಚ್ಚು ಅಭಿಮಾನಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ 70  ಶೇಕಡಾ  ಸುಟ್ಟುಗಾಯದಿಂದ ಬಳಲುತ್ತಿದ್ದ ಆತ ಸಾವನ್ನಪ್ಪಿದ್ದಾನೆ. ಇದರಿಂದ ಆತನನ್ನೆ ನಂಬಿದ್ದ ಕುಟುಂಬ ಅನಾಥವಾದಂತಾಗಿದೆ. 

ಹೀಗೆ ಅಭಿಮಾನದ ಹೆಸರಿನಲ್ಲಿ ಯುವಕ-ಯುವತಿಯರು ಎಲ್ಲೆ ಮೀರುತ್ತಿದ್ದು, ನಟ-ನಟಿಯರ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಈ ಹಿಂದೆಯೂ ಚಿತ್ರವೊಂದರ ರಿಲೀಸ್ ವೇಳೆ ಶ್ರೀಮುರುಳಿ ಮನೆ ಬಳಿ ಬಂದಿದ್ದ ಯುವತಿಯೊರ್ವಳು ಶ್ರೀಮುರುಳಿ ತನ್ನನ್ನು ಮದುವೆಯಾಗಬೇಕೆಂದು ಒತ್ತಾಯಿಸಿದ್ದಳು. ಅಷ್ಟೇ ಅಲ್ಲ ಮದುವೆಯಾಗಲು ನಿರಾಕರಿಸಿದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಳು. ಈ ರೀತಿಯ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ. 
ತಮ್ಮ ನೆಚ್ಚಿನ ನಟರ ಹುಟ್ಟುಹಬ್ಬ ಆಚರಿಸಲು ರಾಜ್ಯದ ಯಾವುದೋ ಮೂಲೆಯಿಂದ ಆಗಮಿಸುವ ಅಭಿಮಾನಿಗಳು, ಸ್ವತಃ ಕೇಕ್, ಗಿಫ್ಟ್ ಹೊತ್ತು ನಟರ-ನಟಿಯರ ಮನೆಮುಂದೆ ರಾತ್ರಿ ಜಮಾಯಿಸುತ್ತಾರೆ. ಬಳಿಕ ಕೇಕ್ ಕಟ್ ಮಾಡಿ, ಅವರೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಾರೆ.  ಕೇವಲ ಒಂದು ಸೆಲ್ಪಿಗಾಗಿ ಅಭಿಮಾನಿಗಳ ಇಷ್ಟೆಲ್ಲ ಸರ್ಕಸ್ ಮಾಡುತ್ತಾರೆ. ಸಿನಿಮಾ ಸ್ಟಾರ್‍ಗಳಿಗಾಗಿ ಇಷ್ಟೆಲ್ಲ ಕಷ್ಟ ಪಡುವ ಈ ಯುವಜನತೆ ಹೆತ್ತವರಿಗಾಗಿ, ಶಿಕ್ಷಣಕ್ಕಾಗಿ ಇಷ್ಟು ಕಷ್ಟಪಡಲು ಸಿದ್ಧರಾಗದೆ ಇರುವುದು ವಿಷಾದದ ಸಂಗತಿ. 

ಇನ್ನು ಮಾಧ್ಯಮಗಳು ಕೂಡ ನಟ ಅಭಿಮಾನಿಗಳನ್ನು, ಅವರ ಸಾಹಸಗಳನ್ನು ಅತಿರಂಜಿತವಾಗಿ ಬಿತ್ತರಿಸೋದರಿಂದ ಯುವಕರಲ್ಲಿ ಸಿನಿಮಾ ನಟ ಫ್ಯಾನ್ಸ್ ಎಂದ್ರೆ ತಾವೇನೋ ದೊಡ್ಡ ಸಾಧಕರು ಎಂಬಂತ ಭಾವನೆ ಬರುತ್ತಿದೆ. ಇದರಿಂದ ಕೂದಲು ಕತ್ತರಿಸಿಕೊಳ್ಳೋದು, ಟ್ಯಾಟೂ ಹಾಕಿಸಿಕೊಳ್ಳೋದು, ರಕ್ತದಲ್ಲಿ ಪತ್ರ ಬರೆಯೋದು, ಸ್ಟಂಟ್‍ಗಳನ್ನು ಮಾಡಲು ಯತ್ನಿಸಿ ಮೀಡಿಯಾಗಳ ಗಮನ ಸೆಳೆಯೋ ಪ್ರಯತ್ನವನ್ನು ಮಾಡುತ್ತಾರೆ. ಹೀಗಾಗಿ ಈ ಅಭಿಮಾನವೆಂಬ ಹುಚ್ಚಾಟಗಳನ್ನು ವೈಭವಿಕರಿಸೋದನ್ನು  ಬಿಟ್ಟು ಮೀಡಿಯಾಗಳು ಮನುಷ್ಯನ ಜೀವನ ಎಷ್ಟು ಮುಖ್ಯ ಎಂಬ ಅರಿವು ಮೂಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. 

ಇನ್ನು ನಿನ್ನೆಯ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ನಟ ಯಶ್, ಈ ರೀತಿ ಎಲ್ಲ ವರ್ತಿಸುವವರು ನನ್ನ ಅಭಿಮಾನಿಗಳಲ್ಲ. ನಾನು ಇನ್ನೊಮ್ಮೆ ಈ ರೀತಿ ವರ್ತಿಸುವವರನ್ನು ನೋಡೋಕೆ ಬರೋದಿಲ್ಲ. ಯಾರು ನನ್ನ ನಿಜವಾದ  ಅಭಿಮಾನಿಗಳಿದ್ದಿರೋ ನೀವೆಲ್ಲ ನಿಮ್ಮ ಹೆತ್ತವರನ್ನು ಚೆನ್ನಾಗಿ ನೋಡ್ಕೊಳ್ಳಿ ಕೈ ಮುಗಿದು  ಬೇಡ್ಕೋತಿನಿ ಎಂದಿದ್ದಾರೆ. ಅಭಿಮಾನ ಅನ್ನೋದು ಮನಸ್ಸಿನಲ್ಲಿರಬೇಕೆ ವಿನಃ ಹೀಗೆ ಹುಚ್ಚಾಟಗಳ ರೂಪ ಪಡೆದುಕೊಂಡು  ಬದುಕನ್ನೆ ಹಾಳುಮಾಡಿಕೊಳ್ಳುವ ಹಂತಕ್ಕೆ ಹೋಗಬಾರದು. ಇನ್ನಾದರೂ ಯುವಜನತೆಯ ನಟ-ನಟಿಯರ ಅಭಿಮಾನ ಪ್ರದರ್ಶಿಸುವ ಭರದಲ್ಲಿ ಅನಾಹುತಗಳಿಗೆ ಮುನ್ನುಡಿ ಬರೆಯುವ ಮೊದಲು ತಮ್ಮ ಜವಾಬ್ದಾರಿ ಅರಿತುಕೊಳ್ಳುವ ಮೂಲಕ ನಿಜಾರ್ಥದ  ಅಭಿಮಾನ ಅರಿತುಕೊಳ್ಳಬೇಕಿದೆ.


ಸಂಬಂಧಿತ ಟ್ಯಾಗ್ಗಳು

# Outrageous #Yesh #Film Actors #Suscide attempt


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ