ಕಾಂಗ್ರೆಸ್ ಪದಾಧಿಕಾರಿಯಾಗಿ ತೃತೀಯ ಲಿಂಗಿ ಅಪ್ಸರಾ

Transgender Apsara as Congress General Secretary

09-01-2019

ಎಲ್ಲೆಡೆ ತೃತೀಯ ಲಿಂಗಿಗಳನ್ನು ಅಸ್ಪ್ರಶ್ಯರಂತೆ ನೋಡಲಾಗುತ್ತಿದೆ ಎಂಬ ಕೂಗಿನ ನಡುವೆಯೇ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಒಂದು ಮಾದರಿ ಕಾರ್ಯದ ಮೂಲಕದ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ. ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಕಾಂಗ್ರೆಸ್ ಪಕ್ಷದ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತೆ ಹಾಗೂ ಮಂಗಳಮುಖಿ ಅಪ್ಸರಾ ರೆಡ್ಡಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

ಈ ನೇಮಕವನ್ನು ಸ್ವತಃ ರಾಹುಲ್ ಗಾಂಧಿ ಖಚಿತಪಡಿಸಿದ್ದು, ಅಪ್ಸರಾ ರೆಡ್ಡಿ ಅವರೊಂದಿಗೆ ಇರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿ ಜೀವನದಿಂದಲೂ ಹೋರಾಟಗಳಲ್ಲಿ ತೊಡಗಿಕೊಂಡಿರುವ ಅಪ್ಸರಾ ರೆಡ್ಡಿ ತಮಿಳುನಾಡಿನ ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರುಗಳಿಸಿದ್ದರು. ಬಳಿಕ ಬಿಜೆಪಿ ಸೇರ್ಪಡೆಗೊಂಡಿದ್ದ ಅಪ್ಸರಾ 2016 ರಲ್ಲಿ ಬಿಜೆಪಿಯಲ್ಲಿ ಸಮಾನತೆಯ ಕೊರತೆ ಎಂದು ಟೀಕಿಸಿ, ಎಐಎಡಿಎಂಕೆ ಸೇರಿ, ಪ್ರಮುಖ ವಕ್ತಾರರಾಗಿ ಕೆಲಸ ನಿರ್ವಹಿಸಿದ್ದರು. 

ಜಯಲಲಿತಾ ನಿಧನದ ಬಳಿಕ ಶಶಿಕಲಾ ನಟರಾಜ್‍ನ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಅಪ್ಸರಾ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಅವರನ್ನು ಮಹಿಳಾ ಪ್ರಧಾನ  ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳಲಾಗಿದ್ದು, ಮಂಗಳವಾರ ಈ ಆಯ್ಕೆಯನ್ನು ರಾಹುಲ್ ಗಾಂಧಿ ಪ್ರಕಟಿಸಿದ್ದಾರೆ. ಕಾಂಗ್ರೆಸ್‍ನ 134 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರಿಗೆ ಪಕ್ಷದ ಹುದ್ದೆಯಲ್ಲಿ ಸ್ಥಾನಮಾನ ನೀಡಲಾಗಿದ್ದು, ಕಾಂಗ್ರೆಸ್‍ನ ಕಾರ್ಯ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Transgender #General Secretary #Congres #Apsara Reddy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ