ಜಾಹೀರಾತುಗಳಲ್ಲಿ ಕಳಪೆ ಧ್ವನಿ

 Bad Sound In The Advertisements

08-01-2019

ಜಾಗತೀಕರಣದ ಭರಾಟೆಯಲ್ಲಿ ಸಿಲುಕಿದ ಇದು ಜಾಹೀರಾತು ಯುಗ. ನಿಮ್ಮ ಪ್ರೊಡಕ್ಟ್ ಎಷ್ಟೇ ಚೆನ್ನಾಗಿರಲಿ. ಆದರೆ ಬಣ್ಣ-ಬಣ್ಣದ ಜಾಹೀರಾತುಗಳಿಲ್ಲದೇ ಯಾರೂ ಆ ಪ್ರೊಡಕ್ಟ್ ಖರೀದಿಸುವುದಿಲ್ಲ. ಹೀಗಾಗಿ ಇಂದು ಜಾಹೀರಾತು ಕೂಡ ಉದ್ಯಮವಾಗಿ ಬದಲಾಗಿದೆ. ಆದರೆ ಹೀಗೆ ಆ್ಯಡ್ ಸಿದ್ದಪಡಿಸುವ ಕಂಪನಿಗಳು, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಬಗ್ಗೆ ಒಂದು ಬಗೆಯ ಅಸಡ್ಡೆ ಬೆಳೆಸಿಕೊಂಡಂತಿದೆ. ಯಾಕೆಂದ್ರೆ ಹಿಂದಿ-ಇಂಗ್ಲೀಷ್‍ನಲ್ಲಿ ಸುಂದರವಾಗಿ ಮೂಡಿಬರುವ ಜಾಹೀರಾತುಗಳು ಕನ್ನಡದಲ್ಲಿ ಕೇಳಲಾಗದಷ್ಟು ಕೆಟ್ಟದಾಗಿ ಮೂಡಿಬರುತ್ತಿದೆ. ಇದಕ್ಕೆ ಮುಖ್ಯಕಾರಣ  ಆ್ಯಡ್ ಕಂಪನಿಗಳ ನಿರ್ಲಕ್ಷ್ಯ. 

ಆಹಾರ ಪದಾರ್ಥದಿಂದ ಆರಂಭಿಸಿ ತಾಯ್ತನದ ತನಕ, ಪಾದರಕ್ಷೆಯಿಂದ ಆರಂಭಿಸಿ, ಕಾಂಡೋಮ್ ತನಕ ಎಲ್ಲವೂ ಮಾರಾಟವಾಗುವುದು ಅದರ ಮೇಲೆ ಚಿತ್ರಿತವಾಗು ಜಾಹೀರಾತಿನ ಆಕರ್ಷಣೆಯ ಆಧಾರದ ಮೇಲೆ. ನೀವು ತೆರೆಯ ಮೇಲೆ ತೋರಿಸುವ ಜಾಹೀರಾತುಗಳು ಎಷ್ಟು ಆಕರ್ಷಕವಾಗಿರುತ್ತದೆಯೋ ಅಷ್ಟು ಜನರು ನಿಮ್ಮ ಪ್ರೊಡಕ್ಟ್‍ಗಾಗಿ ಮುಗಿಬೀಳುತ್ತಾರೆ. ಆದರೆ ಹಿಂದಿಯಲ್ಲಿ ಸುಂದರವಾಗಿ ಮೂಡಿ ಬರುವ ಜಾಹೀರಾತುಗಳು ಕನ್ನಡದಲ್ಲಿ ಅತಿ ಕಳಪೆಯಾಗಿ ಮೂಡಿಬರುತ್ತಿದೆ. ಇದಕ್ಕೆ ಕಾರಣ ಗುಣಮಟ್ಟದ ವಾಯ್ಸ್ ಓವರ್ ಕೊರತೆ, ಸ್ಪಷ್ಟ ಭಾಷೆಯ ಉಚ್ಛಾರಣೆ ಇಲ್ಲದೆ ಇರೋದು. 

ಹಿಂದಿಯಲ್ಲಿ ಮೊದಲು ಜಾಹೀರಾತು ಚಿತ್ರಿಸುವ  ಆ್ಯಡ್ ಕಂಪನಿಗಳು ಕನ್ನಡಕ್ಕೆ ಅದೇ ದೃಶ್ಯಾವಳಿಯನ್ನು ಬಳಸಿ ಕೇವಲ ಭಾಷೆಯನ್ನು ಮಾತ್ರ ಬದಲಾಯಿಸುತ್ತವೆ. ಹೀಗೆ ಕನ್ನಡದಲ್ಲಿ ಮೂಡಿಬರಬೇಕಾದ ಜಾಹೀರಾತುಗಳಿಗೆ ವಾಯ್ಸ್‍ಓವರ್ ಕೊಡಿಸಲು ಕಂಪನಿಗಳು ಅಗತ್ಯ ಹಣ ನೀಡಿದ್ದರೂ  ಆ್ಯಡ್ ಕಂಪನಿಗಳು 500, ಸಾವಿರ ರೂಪಾಯಿ ಎಸೆದು ಕೀಳುಮಟ್ಟದ ವಾಯ್ಸ್ ಓವರ್ ಕೊಡಿಸಿ ಜಾಹೀರಾತು ನಿರ್ಮಿಸಿ ಕೈತೊಳೆದುಕೊಳ್ಳುತ್ತವೆ. ಅಲ್ಲದೆ ದಿನವೊಂದಕ್ಕೆ 2 ಸಾವಿರ ಕೊಟ್ಟು ಹತ್ತಾರು ವಾಯ್ಸ್ ಓವರ್ ಮಾಡಿಸಿಕೊಳ್ಳುವ ಈ ಕಂಪನಿಗಳಿಂದ ವಾಯ್ಸ್ ಓವರ್‍ಕೂಡ ಗುಣಮಟ್ಟ ಕಳೆದುಕೊಂಡಿರುತ್ತದೆ. ಹೀಗಾಗಿ ಹೆಣ್ಣು ಧ್ವನಿಯಂತೆ ಕೇಳಬೇಕಾದ ವಾಯ್ಸ್‍ಓವರ್ ಕರ್ಕಷವಾಗಿ ಕೇಳಿಸುತ್ತದೆ. 
ಮೂಗಿನಲ್ಲಿ ಮಾತನಾಡಿಸಿದಂತೆ ಕೇಳಿಸುವ ಧ್ವನಿ, ಯಥಾವತ್ತು ಟ್ರಾನ್ಸಲೇಟ್ ಮಾಡಿ ಸಿದ್ದಪಡಿಸಲಾದ ಜಾಹೀರಾತಿನ ಸಾಹಿತ್ಯದಿಂದ ಜನರು ಜಾಹೀರಾತನ್ನು ನೋಡೋದಿಕ್ಕೆ ಇಷ್ಟಪಡದಂತಾಗಿದೆ. ಕನ್ನಡದಲ್ಲೂ ಒಳ್ಳೊಳ್ಳೆಯ ಹಿನ್ನೆಲೆಧ್ವನಿ ಕಲಾವಿದರಿದ್ದಾರೆ. ಆದರೆ ಹೆಚ್ಚಿನ ಪೇಮೆಂಟ್ ನೀಡುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಾಲೇಜು ಸ್ಟೂಡೆಂಟ್‍ಗಳು, ಗೃಹಿಣಿಯರು ಹೀಗೆ ವೃತ್ತಿಪರರಲ್ಲದ ಜನರಿಂದ ವಾಯ್ಸ್ ಓವರ್ ಕೊಡಿಸುವ  ಆ್ಯಡ್ ಕಂಪನಿಗಳು, ಕನ್ನಡ ಭಾಷೆ, ಅದರ ಶ್ರೀಮಂತಿಕೆ ಹಾಗೂ ಸೌಂದರ್ಯಕ್ಕೆ ಧಕ್ಕೆ ತರುತ್ತಿವೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಜನರು ಜಾಹೀರಾತುಗಳೆಂದರೆ ಮೂಗುಮುರಿಯುವಂತಾಗಿದೆ.


ಸಂಬಂಧಿತ ಟ್ಯಾಗ್ಗಳು

#Advertisements #Kannada # Bad voice #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ