ಕೈ ಮುರಿದು ಕಮಲ ಮುಡಿತಾರಾ ಸಿಎಂ?

Jds  Alliance with BJP?

08-01-2019

ಕಷ್ಟಪಟ್ಟು ಸಮ್ಮಿಶ್ರ ಸರ್ಕಾರ ರಚಿಸಿ ಅಧಿಕಾರ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್‍ನ ಡೊಂಬರಾಟಗಳಿಂದ ಹಾಗೂ ಆಂತರಿಕ ಕ್ಷೋಭೆಗಳಿಂದ ಬೇಸತ್ತು ಮೈತ್ರಿ ಮುರಿದುಕೊಳ್ಳಲು ಮುಂದಾಗಿದ್ದಾರಾ? ಸರ್ಕಾರವನ್ನು ಬಿಜೆಪಿ ಬೆಂಬಲದೊಂದಿಗೆ ಮುಂದುವರೆಸಿಕೊಂಡು ಹೋಗುವ ಮೂಲಕ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಕಸರತ್ತು ನಡೆಸಿದ್ದಾರಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿದೆ ಸಿಎಂ ಕುಮಾರಸ್ವಾಮಿ ನಡೆ. 

ಸಚಿವ ಸಂಪುಟ ವಿಸ್ತರಣೆ ವೇಳೆಯೂ ಕಾಂಗ್ರೆಸ್‍ನ ಅಸಮಾಧಾನಗಳನ್ನು ಕಣ್ಣಾರೆ ಕಂಡಿದ್ದ ಕುಮಾರಸ್ವಾಮಿ ಪ್ರತಿಕ್ಷಣ ಸರ್ಕಾರ ಬಿದ್ದುಹೋಗುತ್ತದೆ ಎಂದ ಅತೃಪ್ತ ಶಾಸಕರ ಬೆದರಿಕೆಯ ನಡುವೆಯೇ ಅಧಿಕಾರ ನಡೆಸಿದ್ದರು. ಈಗ ಮತ್ತೆ  ನಿಗಮ ಮಂಡಳಿ ನೇಮಕದ ವಿಚಾರದಲ್ಲೂ ಕಾಂಗ್ರೆಸ್‍ನ ಅತೃಪ್ತ ಶಾಸಕರು ಮತ್ತೆ ಸರ್ಕಾರವನ್ನು ಅಲುಗಾಡಿಸುವ ಆತಂಕ ಒಡ್ಡುತ್ತಿದ್ದಾರೆ. ಇದರಿಂದ ರೋಸಿಹೋಗಿರುವ ಕುಮಾರಸ್ವಾಮಿ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಶಾಶ್ವತವಾಗಿ ಮುರಿದುಕೊಂಡೆ ಮುಂದುವರೆಯುವ ಚಿಂತನೆ ನಡೆಸಿದ್ದಾರೆ ಎನ್ನಲಾಗ್ತಿದೆ. 

ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡರೇ, ಜೆಡಿಎಸ್‍ನ 37 ಶಾಸಕರೊಂದಿಗೆ ಕುಮಾರಸ್ವಾಮಿ ವಿಶ್ವಾಸಮತವನ್ನು ಸಾಬೀತುಪಡಿಸಬೇಕಾಗುತ್ತದೆ. ಇದಕ್ಕೆ ಬಿಜೆಪಿಯ ಬಾಹ್ಯಬೆಂಬಲದೊಂದಿಗೆ ಸರ್ಕಾರ ಮುಂದುವರೆಸುವ ಪ್ಲ್ಯಾನ್ ಮಾಡಿರುವ ಕುಮಾರಸ್ವಾಮಿ ಇದೇ ಕಾರಣಕ್ಕೆ ಧೈರ್ಯವಾಗಿ ಕುಮಾರಸ್ವಾಮಿ ಕಾಂಗ್ರೆಸ್ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡದೆ ಕಾಂಗ್ರೆಸ್‍ನಲ್ಲಿ ಅಸಮಾಧಾನ ಮೂಡಿಸುವ ಕೆಲಸ ಮಾಡಿದ್ದಾರೆ. ಇದಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್  ನಾಯಕರು ಅಸಮಾಧಾನಗೊಂಡಿದ್ದು, ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ನೀಡುವ ಸಿದ್ಧತೆ ನಡೆಸಿದ್ದಾರಂತೆ. 

ಕಾಂಗ್ರೆಸ್ ಹಿರಿಯ ಎಮ್‍ಎಲ್‍ಎ ಎಸ್.ಟಿ.ಸೋಮಶೇಖರ್, ಚಿಕ್ಕಬಳ್ಳಾಪುರದ ಸುಧಾಕರ್ ಹಾಗೂ ಅಲ್ಪಸಂಖ್ಯಾತ ಸಮುದಾಯದ ಎನ್.ಎ.ಹ್ಯಾರೀಸ್‍ರನ್ನು ನಿಗಮ ಮಂಡಳಿಯಿಂದ ಕೈಬಿಟ್ಟಿರೋದರಿಂದ ಆಂತರಿಕವಾಗಿ ಕಾಂಗ್ರೆಸ್ ಸಾಕಷ್ಟು ಆಂತರಿಕ ಕಲಹ ಎದುರಿಸುವಂತಾಗಿದೆ. ನಮ್ಮ ನೇಮಕ ಪಟ್ಟಿಯನ್ನು ಸಿಎಂ ಕೈಬಿಟ್ಟಿದ್ಯಾಕೆ ಎಂದು ಕಾಂಗ್ರೆಸ್ ನಾಯಕರು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಆದರೆ ಸಿಎಂ ಕಮಲದೊಂದಿಗೆ ತೆನೆ ಜೋಡಿಸುವ ಉದ್ದೇಶದಿಂದ ಹೀಗೆ ಜೇನುಗೂಡಿಗೆ ಕಲ್ಲೆಸೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಬಿಜೆಪಿ ಜೊತೆಗೆ ಸಾಗುವ ಇಂಗಿತವನ್ನು ಸಿಎಂಕುಮಾರಸ್ವಾಮಿ  ವ್ಯಕ್ತಪಡಿಸಿದರೇ ಕಾಂಗ್ರೆಸ್ ತಾನಾಗಿಯೆ ಜೆಡಿಎಸ್‍ನ ನಿಯಂತ್ರಣಕ್ಕೆ ಬರುತ್ತದೆ. ಈ ತಂತ್ರವನ್ನು ಕುಮಾರಸ್ವಾಮಿ ಬಳಸಿಕೊಳ್ಳುತ್ತಿರುವ ಸಾಧ್ಯತೆ ಕೂಡ ಇದೆ. 
ಇನ್ನು ಕೇಂದ್ರದಲ್ಲೂ ದೇವೆಗೌಡರು ರಾಹುಲ್ ಗಾಂಧಿಗೆ ಬೇಷರತ್ತು ಬೆಂಬಲ್ ನೀಡುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ. ಹೀಗಾಗಿ  ರಾಜ್ಯದಲ್ಲಿ ಬಿಜೆಪಿ ಕುಮಾರಸ್ವಾಮಿಗೆ ಬಾಹ್ಯ ಬೆಂಬಲ ನೀಡುವ ಮೂಲಕ ಕಾಂಗ್ರೆಸ್‍ನ್ನು ಬಗ್ಗುಬಡಿದಲ್ಲಿ ರಾಜ್ಯದಿಂದ ಲೋಕಸಭೆಗೆ ಇನ್ನಷ್ಟು ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳಬಹುದು ಎಂಬುದು ಕಮಲ ಪಾಳಯದ ಲೆಕ್ಕಾಚಾರ ಎನ್ನಲಾಗ್ತಿದೆ. ಒಟ್ಟಿನಲ್ಲಿ ರಾಜ್ಯದ ರಾಜಕಾರಣದಲ್ಲಿ ಸಮಗ್ರ ಬದಲಾವಣೆಯೊಂದು ಕಾದಿದೆ ಎಂಬ ಮುನ್ಸೂಚನೆ ಲಭ್ಯವಾಗುತ್ತಿದ್ದು, ಏನಾಗುತ್ತೆ ಅನ್ನೋದನ್ನು ಕಾದುನೋಡಬೇಕಿದೆ. 
 


ಸಂಬಂಧಿತ ಟ್ಯಾಗ್ಗಳು

#Karnataka #Congress #Kumarswamy #Jds


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ