ದೇವೆಗೌಡರ ಮಾತೂ ಕೇಳ್ತಿಲ್ಲವಂತೆ ಕುಮಾರಸ್ವಾಮಿ...!

Cm  Kumarswamy is not listening to Devegowda

08-01-2019

ಅಪ್ಪ-ಮಕ್ಕಳ ಪಕ್ಷ ಎಂದೇ ಕರೆಯಿಸಿಕೊಳ್ಳುವ ಜೆಡಿಎಸ್‍ನಲ್ಲಿ ಅಪ್ಪ ಹೇಳಿದಂತೆ ಮಕ್ಕಳು ಆಡಳಿತ ನಡೆಸುತ್ತಾರೆ ಎಂಬ ಮಾತಿದೆ. ಆದರೆ ಅದ್ಯಾಕೋ ಗೊತ್ತಿಲ್ಲ ಇತ್ತೀಚಿಗೆ  ಸಿಎಂ ಕುಮಾರಸ್ವಾಮಿಯವರು,  ಮಾಜಿ ಪ್ರಧಾನಿ ಹಾಗೂ ಚಾಣಾಕ್ಷ್ಯ ರಾಜಕಾರಣಿ ದೇವೆಗೌಡರ ಮಾತು ಕೇಳುತ್ತಿಲ್ಲ ಸಂಗತಿ ಬಯಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕುಮಾರಸ್ವಾಮಿಯವರು ಕೆಲವು ನಿಗಮ ಮಂಡಳಿಗಳ ನೇಮಕದಲ್ಲೂ ಕಾಂಗ್ರೆಸ್‍ಗೆ ಅಸಮಧಾನವಾಗುವಂತೆ ನಡೆದುಕೊಂಡಿದ್ದು, ದೊಡ್ಡಗೌಡರ ಮಾತಿಗೂ ಬಗ್ಗಿಲ್ಲ ಎನ್ನಲಾಗುತ್ತಿದೆ. 

ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಕುಮಾರಸ್ವಾಮಿಯವರ ಬೆನ್ನೆಲುಬಾಗಿ ನಿಂತಿರುವ ದೇವೆಗೌಡರು, ಎಲ್ಲ ಪ್ರಮುಖ ಸಂದರ್ಭದಲ್ಲೂ ಮಗನಿಗೆ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಆದರೆ ಇತ್ತೀಚಿಗೆ ಕುಮಾರಸ್ವಾಮಿ, ತಂದೆಯ ಮಾತು ಕೇಳುತ್ತಿಲ್ಲವಂತೆ. ರಾಜ್ಯ ರಾಜಕಾರಣವನ್ನು ನಾನೇ ಸರಿತೂಗಿಸಿಕೊಂಡು ಹೋಗ್ತಿನಿ ಅನ್ನೋ ಅರ್ಥದಲ್ಲಿ ಮಾತಾಡ್ತಿದ್ದಾರಂತೆ. 

ರಾಜ್ಯದಲ್ಲಿ ನಿಗಮ ಮಂಡಳಿ ನೇಮಕದ ಅವಾಂತರದ ವೇಳೆ ಅಪ್ಪ-ಮಗನ ನಡುವಿನ ಈ ಅಸಮಧಾನದ ಅಂಶ 
ಬಹಿರಂಗವಾದಂತಿದೆ. ಕಾಂಗ್ರೆಸ್ ನಿಗಮ ಮಂಡಳಿಗೆ ಅರ್ಹ ಶಾಸಕರನ್ನು ನೇಮಕ ಮಾಡಿ ಪಟ್ಟಿಯನ್ನು ಅನುಮೋದನೆಗಾಗಿ  ಸಿಎಂಗೆ ನೀಡಿತ್ತು. ಆದರೆ ಈ ಪಟ್ಟಿಯಲ್ಲಿ ಹಲವರ ನೇಮಕವನ್ನು ಸಿಎಂ ಕುಮಾರಸ್ವಾಮಿ ತಡೆ ಹಿಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕರಿಗೆ ಅಸಮಧಾನವಾಗಿದೆ. ಇದನ್ನು ಗಮನಿಸಿದ ದೇವೆಗೌಡರು ಮಗನಿಗೆ ಬುದ್ಧಿ ಹೇಳಲು ಮುಂದಾಗಿದ್ದರು. ಆದರೆ ಹಳೆ ಸೇಡು ತೀರಿಸಿಕೊಳ್ಳಲು ನೇಮಕ ತಡೆಹಿಡಿದಿರುವಂತೆ ವರ್ತಿಸುತ್ತಿರುವ  ಕುಮಾರಸ್ವಾಮಿ ದೇವೆಗೌಡರ ಮಾತಿಗೂ ಕ್ಯಾರೇ ಇಲ್ಲದಂತೆ ವರ್ತಿಸಿರುವುದು ತೋರಿಬಂದಿದೆ.  

ಆಪ್ತರ ಪ್ರಕಾರ ಸಿಎಂ ಕಾಂಗ್ರೆಸ್‍ನ ಕೆಲ ಶಾಸಕರಿಗೆ ಪಾಠ ಕಲಿಸಲು ಮುಂದಾಗಿದ್ದು, ಅದಕ್ಕಾಗಿಯೇ ಅವರ ನೇಮಕವನ್ನು ಕೈಬಿಟ್ಟಿದ್ದಾರಂತೆ. ಇದರಿಂದ ಕೈಪಾಳಯ ಅಸಮಧಾನದ ಅಗ್ನಿಯಲ್ಲಿ ಬೆಂದು ಹೋಗುತ್ತಿದೆ. ಇದನ್ನು ಗಮನಿಸಿದ ದೊಡ್ಡ ಗೌಡರು ಮಗನಿಗೆ ರಾಜಕೀಯ ಪಾಠ ಮಾಡಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಹೀಗಾದರೆ ಮೈತ್ರಿ ಹಾಗೂ ಸೀಟು ಹಂಚಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ. ಆದರೆ ಇದಕ್ಕೆಲ್ಲಾ ಕೇರ್ ಮಾಡದ ಸಿಎಂ ಕುಮಾರಸ್ವಾಮಿ ದೇವೆಗೌಡರಿಗೆ ನೀವು ರಾಷ್ಟ್ರ ರಾಜಕಾರಣ ನೋಡಿಕೊಳ್ಳಿ. ನನಗೆ ರಾಜ್ಯ ರಾಜಕಾರಣ ಬಿಟ್ಟುಕೊಡಿ ಕಾಂಗ್ರೆಸ್ ಪಾಠ ಕಲಿಸೋಣ ಎಂದಿದ್ದಾರಂತೆ. 

ಇದಕ್ಕಾಗಿಯೇ ರಾಷ್ಟ್ರ ರಾಜಕಾರಣದ ಕಡೆ ಹೆಚ್ಚು ಗಮನ ನೀಡುತ್ತಿರುವ ದೇವೆಗೌಡರು, ರಾಜ್ಯ ರಾಜಕಾರಣವನ್ನು ಕುಮಾರಸ್ವಾಮಿಯವರಿಗೆ ಸಂಪೂರ್ಣವಾಗಿ ಬಿಟ್ಟುಕೊಟ್ಟಿದ್ದಾರಂತೆ. ಹಾಗಂತ ದೇವೆಗೌಡರು ಸಂಪೂರ್ಣವಾಗಿ ಮಗನಿಗೇ ರಾಜ್ಯ ರಾಜಕಾರಣವನ್ನು ಬಿಟ್ಟುಕೊಡ್ತಾರೆ ಅನ್ನೋ ಹಾಗಿಲ್ಲ. ಯಾಕೆಂದ್ರೆ ಇನ್ನೇನು ಲೋಕಸಭಾ ಸೀಟು ಹಂಚಿಕೆ ಬಾಕಿ ಇದ್ದು, ಆ ವೇಳೆಯಲ್ಲಂತೂ ದೇವೆಗೌಡರು ಪ್ರಮುಖ ಪಾತ್ರವಹಿಸೋದರಲ್ಲಿ ಅನುಮಾನವಿಲ್ಲ. ಆದರೆ ರಾಜ್ಯ ಸರ್ಕಾರ ಮುನ್ನಡೆಸುವ ವಿಚಾರದಲ್ಲಿ ಮಾತ್ರ ಕುಮಾರಸ್ವಾಮಿಯವರು ಯಾರ ಮಾತು ಕೇಳದೆ ತಮ್ಮ ಮನಸ್ಸಿಗೆ ಬಂದಂತೆ ಅಧಿಕಾರ ನಡೆಸ್ತಿದ್ದಾರೆ ಅನ್ನೋದು ಜೆಡಿಎಸ್ ಕಾರ್ಯಕರ್ತರೇ ಹೇಳ್ತಿರೋ ಮಾತು.


ಸಂಬಂಧಿತ ಟ್ಯಾಗ್ಗಳು

#Kumarswamy # Not listening #Devegwoda #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ