ಅಂಬರೀಶ್ ಉತ್ತರಾಧಿಕಾರಿ ಯಾರು?

Who is the successor to Ambarish?

08-01-2019

ಮಂಡ್ಯದ ಗಂಡು ಅಂಬರೀಶ್ ಶಾಸಕರು, ಮಾಜಿ ಸಚಿವರು, ನಟ ಮಾತ್ರ ಆಗಿರಲಿಲ್ಲ. ಚಿತ್ರರಂಗದ ಸಂಕಷ್ಟಗಳಿಗೆ ಸ್ಪಂದಿಸುವ ಹಾಗೂ ಜಗಳ, ವೈಮನಸ್ಸು ಅಸಮಧಾನಗಳನ್ನು ತಣಿಸುವ ಮನೆಯ ಹಿರಿಯಣ್ಣನಂತಿದ್ದರು. ಈಗ ಅಂಬರೀಶ್ ನಿಧನದಿಂದ ಚಿತ್ರರಂಗಕ್ಕೆ ದಿಕ್ಕು ತೋಚದಂತಾಗಿದ್ದು, ಅಂಬರೀಶ್ ಉತ್ತರಾಧಿಕಾರಿಯಾಗಿ ನಮ್ಮನ್ನು  ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಕಾಡತೊಡಗಿದೆ. 

ಅಂಬರೀಶ್ ಮಾತು ಒರಟಾದ್ರೂ ಮನಸ್ಸು ಸಿಹಿಯಾಗಿತ್ತು. ಹೀಗಾಗಿ ಡಾ.ರಾಜ್, ವಿಷ್ಣುವರ್ಧನ್ ಬಳಿಕ ಅವರು ಚಿತ್ರರಂಗದ ಹಿರಿ-ಕಿರಿಯರ ಪಾಲಿಗೆ ಆಪ್ತ ಬಂಧುವಿನಂತಿದ್ದರು.  ನಟ-ನಟಿಯರಿಗೆ, ಪೋಷಕ ಕಲಾವಿದರಿಗೆ ಯಾರಿಗೆ ಏನೇ ಕಷ್ಟವಿದ್ದರೂ ಸಹಾಯಹಸ್ತ ಚಾಚುತ್ತಿದ್ದರು. ಒಮ್ಮೊಮ್ಮೆ ಗದರಿದರೂ ಕಷ್ಟಕ್ಕೆ  ಇಲ್ಲ ಎನ್ನದ ಅವರಿಂದ ಅದೇಷ್ಟೋ ಕಲಾವಿದರು ಸಹಾಯ ಪಡೆದಿದ್ದಾರೆ. 

ಇನ್ನು ಸುದೀಪ್, ದರ್ಶನರಂತಹ ನಟರು ವೈವಾಹಿಕ ಬದುಕಿನ ಸಂಘರ್ಷಗಳನ್ನು ಎದುರಿಸುವ ಸಂದರ್ಭದಲ್ಲೂ ಜೊತೆ ನಿಂತಿದ್ದ ಅಂಬರೀಶ್.  ಇಬ್ಬರು ನಟರಿಗೂ ಬುದ್ಧಿ ಮಾತು ಹೇಳಿದ್ದರು. ಇದರ ಫಲವಾಗಿಯೇ ಸುದೀಪ್ ಮತ್ತು ದರ್ಶನ ಇಬ್ಬರೂ ವಿಚ್ಛೇಧನ ಕೈಬಿಟ್ಟು ಪತ್ನಿಯೊಂದಿಗೆ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಕೇವಲ ವೈಯಕ್ತಿಕವಾಗಿ ಮಾತ್ರವಲ್ಲ, ಚಿತ್ರಗಳ ಟೈಟಲ್, ಲಿರಿಕ್ಸ್, ಸಾಹಿತ್ಯ, ನಟರುಗಳ ನಡುವೆ ಗಲಾಟೆ ಹೀಗೆ ಏನೇ ಆದರೂ ಚಿತ್ರರಂಗವನ್ನು ಮುನ್ನಡೆಸುವ ಕೆಲಸವನ್ನು ಅಂಬಿ ನಿರ್ವಹಿಸುತ್ತ ಬಂದಿದ್ದರು. 


ಇತ್ತೀಚಿಗೆ ಸದ್ದು ಮಾಡಿದ ಮೀಟೂ ಅಭಿಯಾನದ ವೇಳೆ ನಟಿ ಶೃತಿ ಹರಿಹರನ್ ಹಿರಿಯ ನಟ ಅರ್ಜುನ್ ಸರ್ಜಾ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದಾಗಲೂ ಅಂಬರೀಶ್ ಮಧ್ಯಪ್ರವೇಶಿಸಿ ಸಂಧಾನಕ್ಕೆ ಯತ್ನಿಸಿದ್ದರು. ಆದರೆ ಇಬ್ಬರು ಸಂಧಾನಕ್ಕೆ ಸಿದ್ಧರಿರದ ಕಾರಣ ಸಂಧಾನ ಸಭೆ ವಿಫಲವಾಗಿತ್ತು.ನಟರ ವೈಯಕ್ತಿಕ ಸಮಸ್ಯೆಗಳು, ಕನ್ನಡ ಚಿತ್ರರಂಗದ ಸಮಸ್ಯೆ, ಡಬ್ಬಿಂಗ್ ಕೂಗು, ಪರಭಾಷೆ ಸಿನಿಮಾನಗಳ ಹಾವಳಿ ಹೀಗೆ ಸಮಸ್ಯೆ ಯಾವುದೇ ಇದ್ದರೂ ಅಲ್ಲಿ ಹಿರಿಯಣ್ಣನಾಗಿ ನಿಲ್ಲುವ ಅಂಬರೀಶ್ ತಮ್ಮ ದಶಕಗಳ ಚಿತ್ರರಂಗದ ಅನುಭವ ಬಳಸಿ ಎಲ್ಲವನ್ನು ಪರಿಹರಿಸಿ ಕಳುಹಿಸುತ್ತಿದ್ದರು. ಸರ್ಕಾರಗಳ ಜೊತೆ ಮಾತುಕತೆ, ಚಳುವಳಿ, ಪ್ರತಿಭಟನೆಗಳ ವೇಳೆಯೂ ಅಂಬರೀಶ್ ಮುಂಚೂಣಿಯಲ್ಲಿರುತ್ತಿದ್ದರು. 


 ಅಂಬರೀಶ್‍ಗಿದ್ದ ಸಿನಿಮಾರಂಗದ ಅನುಭವ, ರಾಜಕೀಯ ಅನುಭವ, ಸಮಸ್ಯೆಗಳನ್ನು ಬಗೆಹರಿಸಲು ನೆರವಾಗುತ್ತಿತ್ತು. ಅಲ್ಲದೆ ಅವರ ಗಡುಸಾದ ಮಾತಿನ ಶೈಲಿಗೆ ಯಾವ ನಟರು ಎದುರು ನಿಂತು ವಾದಿಸುವ ದಾಷ್ಟ್ರ್ಯ ತೋರುತ್ತಿರಲಿಲ್ಲ. ಆದರೆ ಇದೀಗ ಅಂಬರೀಶ್ ಇಲ್ಲದೆ ಸ್ಯಾಂಡಲವುಡ್ ಅನಾಥವಾದಂತಾಗಿದ್ದು ಅಂಬರೀಶ್  ನಂತರ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಚಿತ್ರರಂಗದ ಹಿರಿತಲೆಗಳ ಪೈಕಿ ಬಹುತೇಕ ಎಲ್ಲರೂ ಅದಾಗಲೇ ಇಹಲೋಕದ ಪಯಣ ಮುಗಿಸಿದ್ದಾರೆ. ಹೀಗಾಗಿ ಚಂದನವನದಲ್ಲಿ ಈಗ ಅಂಬರೀಶ್ ಸ್ಥಾನದಲ್ಲಿ ನಿಂತು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಉತ್ತರದ ಹುಡುಕಾಟ ಆರಂಭವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Sandalwood #Successor # Ambarish #Question


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ