ಕಾಂಗ್ರೆಸ್ ಕಿವಿಗೆ ಹೂವಿಟ್ಟ ಸಿಎಂ ಕುಮಾರಸ್ವಾಮಿ..!

 CM Kumaraswamy Masterplan

07-01-2019

ನಿಗಮ ಮಂಡಳಿ ಸ್ಥಾನ ಕೊಟ್ಟಾದರೂ ತಮ್ಮ ಶಾಸಕರನ್ನು ಸಮಧಾನಪಡಿಸುವ ಪ್ರಯತ್ನದಲ್ಲಿದ್ದ ಕಾಂಗ್ರೆಸ್‍ಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ಸಚಿವ ಸ್ಥಾನ ವಂಚಿತರ ಅಸಮಧಾನ ಎದುರಿಸಲಾಗದೆ ಸೋತಿರುವ ಕಾಂಗ್ರೆಸ್‍ಗೆ ಇದೀಗ ನಿಗಮ ಮಂಡಳಿ ವಂಚಿತರ ಆಕ್ರೋಶವನ್ನು ಎದುರಿಸುವ ಸ್ಥಿತಿ ಎದುರಾಗಿದ್ದು, ಕೈಪಾಳಯ ಕಂಗಾಲಾಗಿದೆ. ಕಾಂಗ್ರೆಸ್‍ನ್ನು ಉದ್ದೇಶ ಪೂರ್ವಕವಾಗಿ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದಂತಿರುವ ಕುಮಾರಸ್ವಾಮಿ, ನಿಗಮ ಮಂಡಳಿ ಅನುಮೋದನೆ ಪಟ್ಟಿಯಿಂದ ಶಾಸಕರಾದ ಹ್ಯಾರೀಸ್ ಮತ್ತು ಸೋಮಶೇಖರ್ ಕೈಬಿಡುವ ಮೂಲಕ ಕಾಂಗ್ರೆಸ್‍ಗೆ ಸಂಕಷ್ಟ ತಂದಿತ್ತಿದ್ದಾರೆ ಎನ್ನಲಾಗುತ್ತಿದೆ. 

ಕಾಂಗ್ರೆಸ್ ಸಿದ್ದಪಡಿಸಿದ್ದ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಗೆ ಸಹಿ ಹಾಕುವ ಮುನ್ನ ಸಿಎಂ ಕುಮಾರಸ್ವಾಮಿ ರಾಜಕೀಯದ ಚದುರಂಗದಾಟವಾಡಿದ್ದಾರೆ. ಹೌದು 14 ಸದಸ್ಯರ ನೇಮಕಕ್ಕೆ ಮಾತ್ರ ಅನುಮೋದನೆ ನೀಡಿರುವ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್, ಯಶ್ವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಕೈಬಿಡುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಅಸಮಧಾನಕ್ಕೆ ಕಾರಣವಾಗಿದ್ದಾರೆ. 

ಸಿದ್ಧರಾಮಯ್ಯ ಮಂತ್ರಿಮಂಡಳದಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಎಸ್.ಟಿ.ಸೋಮಶೇಖರ್, ಆಗ ಸಚಿವ ಸ್ಥಾನ ಸಿಗದ್ದಕ್ಕೆ ಸಿದ್ದರಾಮಯ್ಯ ವಿರುದ್ಧವೆ ತಿರುಗಿ ಬಿದ್ದಿದ್ದರು. ಹೀಗಿರುವಾಗ ಇದೀಗ ಸೋಮಶೇಖರ್‍ಗೆ ಮತ್ತೆ ನಿಗಮ ಮಂಡಳಿ ಸ್ಥಾನವೂ ಕೈತಪ್ಪಿರೋದು ಕಾಂಗ್ರೆಸ್ ಪಾಲಿಗೆ  ಕಂಟಕವಾಗುವ ಎಲ್ಲಾ ಸಾಧ್ಯತೆ ಇದೆ. ಈ ಮಧ್ಯೆ ಅಲ್ಪಸಂಖ್ಯಾತ ಮುಖಂಡರೂ ಆಗಿರುವ ಎನ್.ಎ.ಹ್ಯಾರೀಸ್‍ರನ್ನು ಹೊರಗಿಡಲಾಗಿರೋದು ಹಲವು ಅನುಮಾನ ಹುಟ್ಟುಹಾಕಿದೆ. ಇನ್ನು ಸುಧಾಕರ್  ಅಂತೂ ನಿಗಮ ಮಂಡಳಿ ನೇಮಕದಿಂದ ಕೈಬಿಟ್ಟಿರೋದಿಕ್ಕೆ ಈ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪಾಸಾಗದವರೆಲ್ಲ ಎರಡರೆಡು ಸಚಿವ ಸ್ಥಾನ ನಿಭಾಯಿಸುತ್ತಾರೆ. ನಮಗೆಲ್ಲ ಅವಕಾಶ ಸಿಗಲ್ಲ ಎಂದು ಬಹಿರಂಗವಾಗಿ ಕಿಡಿಕಾರಿದ್ದಾರೆ. 

ರಾಜಕೀಯ ಮೂಲಗಳ ಪ್ರಕಾರ, ಕುಮಾರಸ್ವಾಮಿ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‍ನಲ್ಲಿ ಒಡಕು ಮೂಡಿಸಿ ಮಜಾ ತೆಗೆದುಕೊಳ್ಳುವ ತಂತ್ರ ಹೆಣೆದಿದ್ದು, ಅದಕ್ಕಾಗಿಯೇ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗದಿದ್ದರೇ, ರೆಬೆಲ್ ಆಗಬಹುದಾದ ಶಾಸಕರನ್ನೆ ಹುಡುಕಿ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎನ್ನಲಾಗ್ತಿದೆ. 20 ಶಾಸಕರನ್ನು ವಿವಿಧ ಮಂಡಳಿಗೆ ನೇಮಕ ಮಾಡಿ ಕುಮಾರಸ್ವಾಮಿಯವರ ಸಹಿಗೆ ಕಳುಹಿಸಿದ್ದ ಕಾಂಗ್ರೆಸ್‍ಗೆ ಕುಮಾರಸ್ವಾಮಿಯವರ ಈ ನಡೆ ಶಾಕ್ ತಂದಿದೆ. ಕಾಂಗ್ರೆಸ್‍ನಲ್ಲಿ ಅದರಲ್ಲೂ ಸಿದ್ಧರಾಮಯ್ಯನವರ ಆಪ್ತರನ್ನೇ ಹುಡುಕಿ ಕುಮಾರಸ್ವಾಮಿ ಹೀಗೆ ನೇಮಕ ತಡೆಹಿಡಿದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಒಟ್ಟಿನಲ್ಲಿ ಸ್ಥಾನವಂಚಿತರಾಗಿ ಅತೃಪ್ತರಾಗಿರುವ ಶಾಸಕರು ಹಾಗೂ ಜೆಡಿಎಸ್‍ನ ಕುಮಾರಸ್ವಾಮಿ ನಡುವೆ ಕಾಂಗ್ರೆಸ್ ಸಿಲುಕಿಕೊಂಡು ಒದ್ದಾಡುತ್ತಿರೋದಂತು ಸತ್ಯ. 
 


ಸಂಬಂಧಿತ ಟ್ಯಾಗ್ಗಳು

#Kumarswamy #Congress #Troubling #MLA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ