ಬೆಂಗಳೂರು ಸೆಂಟ್ರಲ್‍ನಿಂದ ರೈ ಕಣಕ್ಕೆ, ಬಿಜೆಪಿ ಸಂಕಷ್ಟಕ್ಕೆ..!

 Prakash Rai from the Bangalore Central constituency ?

07-01-2019

"#ಜಸ್ಟ್ ಆಸ್ಕಿಂಗ್" ಮೂಲಕ ಮೋದಿ ವಿರುದ್ಧ ಟೀಕಿಸಿ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿ ಸದಾ ಕಾಂಗ್ರೆಸ್ ವಕ್ತಾರರಂತೆ ವರ್ತಿಸುತ್ತ ಬಂದಿದ್ದ ಬಹುಭಾಷಾ ನಟ ಪ್ರಕಾಶ್ ರೈ ಕೊನೆಗೂ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಹೌದು ಇತ್ತೀಚಿಗಷ್ಟೇ ರಾಜಕೀಯ ಪ್ರವೇಶಿಸುವುದಾಗಿ  ಪ್ರಕಟಿಸಿದ್ದ ಪ್ರಕಾಶ್ ರೈ, ಇದೀಗ ಬಿಜೆಪಿಯ ಭದ್ರಕೋಟೆಯಾಗಿರುವ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರಕ್ಕೆ ಲಗ್ಗೆ ಇಡಲು ಮುಂದಾಗಿದ್ದು, ಈ ಬಗ್ಗೆ ಟ್ವಿಟರ್‍ನಲ್ಲಿ ಮಾಹಿತಿ ನೀಡಿದ್ದಾರೆ. ರಚನೆಯಾದಾಗಿನಿಂದಲೂ ಬಿಜೆಪಿಯ ತೆಕ್ಕೆಯಲ್ಲೆ ಇದ್ದ ಬೆಂಗಳೂರು ಸೆಂಟ್ರಲ್ ಕ್ಷೇತ್ರಕ್ಕೆ ಈಗ ರೈ ಪ್ರವೇಶ ಮತ್ತಷ್ಟು ರಾಜಕೀಯ ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ. 

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ 2009 ರಲ್ಲಿ ರಚನೆಯಾಯಿತು. 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಸೆಂಟ್ರಲ್ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಸಂಸದ ಪಿ.ಸಿ.ಮೋಹನ ಗೆದ್ದಿದ್ದಾರೆ. ಇದೀಗ ಈ ಕ್ಷೇತ್ರವನ್ನು ಪ್ರಕಾಶ್ ರೈ ಆಯ್ಕೆ ಮಾಡಿಕೊಂಡಿರೋದರಿಂದ ಪಿ.ಸಿ.ಮೋಹನ್‍ಗೆ ಈ ಬಾರಿ ಎಲೆಕ್ಷನ್ ಕಬ್ಬಿಣದ ಕಡಲೆಯಾಗುವ ಎಲ್ಲ ಸಾಧ್ಯತೆ ಇದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರ ದೇಶದ ಗಮನ ಸೆಳೆಯೋದರಲ್ಲಿ ಅನುಮಾನವಿಲ್ಲ. 

ಪಿ.ಸಿ.ಮೋಹನ್ ಎರಡು ಬಾರಿ ಸಂಸದರಾಗಿದ್ದರೂ ಕೂಡ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಿಲ್ಲ. ಯಾವುದೆ ಹೋರಾಟಗಳು, ಕಾರ್ಯಕ್ರಮಗಳಲ್ಲೂ ಅವರು ಕಾಣಿಸಿಕೊಂಡಿದ್ದೆ ಅಪರೂಪ. ಹೀಗಿದ್ದರೂ  ಕೂಡ ಸುಲಭವಾಗಿ ಯಾವುದೇ ಪ್ರಬಲ ವಿರೋದವಿಲ್ಲದೇ ಎರಡು ಬಾರಿ ಗೆದ್ದುಬಂದಿರುವ ಪಿ.ಸಿ.ಮೋಹನ್ ಪಕ್ಷಕ್ಕೆ ಆರ್ಥಿಕ ಶಕ್ತಿಯಾಗಿ ನಿಂತಿರೋದರಿಂದಲೇ ಬಿಜೆಪಿ ಅವರನ್ನು ಬೇಷರತ್ತಾಗಿ ಪೋಷಿಸುತ್ತ ಬಂದಿದೆ ಅನ್ನೋದರಲ್ಲಿ ಅನುಮಾನವಿಲ್ಲ. ಈ ಬಾರಿಯೂ ಅವರೆ ಕಣಕ್ಕಿಳಿಯೋದು ಬಹುತೇಕ ಖಚಿತ. ಇದನ್ನೆಲ್ಲ ಅಧ್ಯಯನ ಮಾಡಿಕೊಂಡೆ ಪ್ರಕಾಶ್ ರೈ, ಈ ಕ್ಷೇತ್ರವನ್ನು ತಮ್ಮ ರಾಜಕೀಯ ಭವಿಷ್ಯದ ಅದೃಷ್ಟ ಪರೀಕ್ಷೆಗೆ ಆಯ್ಕೆಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಯಾಕೆಂದ್ರೆ ರೈ ತೀಕ್ಷ್ಣವಾದ ಭಾಷಣಗಳು ಜನರನ್ನು ಸೆಳೆಯಬಹುದು ಎಂಬುದು ಅವರ ನಂಬಿಕೆ. 

ರಾಜಕೀಯ ಚಿತ್ರಣವನ್ನು ಗಮನಿಸೋದಾದರೇ, ಈ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಬಳಿ ಪ್ರಬಲ ಅಭ್ಯರ್ಥಿಗಳಿಲ್ಲ. ಕೆಲಸ ಮಾಡಲಿ ಬಿಡಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪಿ.ಸಿ.ಮೋಹನ್ ಬಗ್ಗೆ  ಜನರಿಗೆ ಕೊಂಚ ಒಲವಿರೋದರಿಂದ ಕಾಂಗ್ರೆಸ್‍ಗೆ ಗೆಲುವು ಕೂಡ ಸುಲಭವಲ್ಲ. ಇಂಥ ವೇಳೆಯಲ್ಲಿ ಕಟುಟೀಕೆಗಳ ಮೂಲಕವೇ ದೇಶದ ಗಮನ ಸೆಳೆದ ಪ್ರಕಾಶ್ ರೈ, ಈ ಕ್ಷೇತ್ರದಲ್ಲಿ ಕಣಕ್ಕಿಳಿಯೋದು ಬಿಜೆಪಿ ಪಾಲಿಗೆ ಕಷ್ಟ ತರಲಿದೆ. ಚುನಾವಣೆ ಗೆಲ್ಲೋದಿಕ್ಕೆ ಪಿ.ಸಿ.ಮೋಹನ್‍ಗೆ ಇನ್ನಷ್ಟು ಪರಿಶ್ರಮ ಅನಿವಾರ್ಯವಾಗಲಿದೆ. 
ಆದರೆ ಕಾಂಗ್ರೆಸ್ ಒಂದೊಮ್ಮೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ರೈಗೆ ಅಘೋಷಿತ ಬೆಂಬಲ ನೀಡಿದಲ್ಲಿ, ಅವರ ಹಾದಿ ಸುಗಮವಾಗಲಿದೆ. ಸಧ್ಯ ಪ್ರಕಾಶ್ ರೈ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದರೂ ಅವರು ಕಾಂಗ್ರೆಸ್‍ನ ಒಂದು ಭಾಗ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಕಾಂಗ್ರೆಸ್ ಹೋದರೆ ಒಂದು ಕ್ಯಾಂಡಿಡೇಟ್, ಬಂದ್ರೆ ಒಂದು ಎಂಪಿ ಎಂದು ಸುಮ್ಮನಾಗುವ ಸಾಧ್ಯತೆ ಇದೆ. 
ಒಟ್ಟಿನಲ್ಲಿ ದೇಶ ಮಟ್ಟದಲ್ಲೂ ಬಿಜೆಪಿಗೆ ತಲೆನೋವಾಗಿದ್ದ ಪ್ರಕಾಶ್ ರೈ ಈಗ ರಾಜ್ಯ ಬಿಜೆಪಿಗೂ ತಲೆನೋವಾಗಿದ್ದು, ಬಿಜೆಪಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಒಂದೆಡೆಯಾದರೆ ರೈ ಕಾಟ ಇನ್ನೊಂದೆಡೆ ಎಂಬಂತಾಗಿದೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಮೂರು ಲೋಕಸಭಾ ಕ್ಷೇತ್ರಗಳನ್ನು ತಮ್ಮದಾಗಿಯೇ ಉಳಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುವ ದಿನಗಳು ಸನ್ನಿಹಿತವಾಗಿದ್ದು, ಪ್ರಕಾಶ್ ಮತ್ತು ಬಿಜೆಪಿ ನಡುವಿನ ಫೈಟ್‍ಗೆ ಮತದಾರ ಹೇಗೆ ಸ್ಪಂದಿಸುತ್ತಾರೆ ಕಾದುನೋಡಬೇಕಿದೆ. 
 


ಸಂಬಂಧಿತ ಟ್ಯಾಗ್ಗಳು

# Prakash Rai #Bjp # Bangalore Central #constituency ?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Plz send all ur infn
  • ರವೀಶ
  • ಪೊಲೀಸ್