ರಮೇಶ್ ಜಾರಕಿಹೊಳಿ ಮೇಲೆ ಬ್ರಹ್ಮಾಸ್ತ್ರಕ್ಕೆ ಮುಂದಾದ ಖಾಸಗಿ ಸುದ್ದಿವಾಹಿನಿ

05-01-2019
ರಾಜ್ಯದಲ್ಲಿ ಸುದ್ದಿ ವಾಹಿನಿಗಳ ವರ್ತನೆ ಎಲ್ಲೇಮೀರಿದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಹೀಗಿರುವಾಗಲೇ ನಾಡಿನ ನಂಬರ್ ಒನ್ ಸುದ್ದಿ ವಾಹಿನಿ ಎಂಬ ಖ್ಯಾತಿ ಪಡೆದ ಸುದ್ದಿಸಂಸ್ಥೆಯೊಂದು ಸಚಿವ ಸ್ಥಾನ ಕಳೆದುಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೇಲೆ ಮುಗಿಬಿದ್ದಿದೆ. ಕೋಪದಲ್ಲಿ ರಮೇಶ್ ಜಾರಕಿಹೊಳಿ ಹೇಳಿದ ಮಾತಿಗೆ ಅವರನ್ನು ಬಹಿಷ್ಕರಿಸಲು ಮುಂದಾದ ವಾಹಿನಿ, ತಮ್ಮನ್ನು ಹೀನಾಯವಾಗಿ ನಿಂದಿಸಿದ ಎಚ್.ಡಿ.ಕುಮಾರಸ್ವಾಮಿಯವರನ್ನು ಮಾತ್ರ ಯಾಕೆ ಬಹಿಷ್ಕರಿಸುತ್ತಿಲ್ಲ ಎಂಬ ಪ್ರಶ್ನೆ ಜನಸಾಮಾನ್ಯರದ್ದು.
ಸಚಿವ ಸಂಪುಟ ವಿಸ್ತರಣೆಯಾದಾಗಿನಿಂದ ಸಚಿವ ಸ್ಥಾನ ಕಳೆದುಕೊಂಡ ಶಾಸಕ ರಮೇಶ್ ಜಾರಕಿಹೊಳಿ ನಾಪತ್ತೆಯಾಗಿದ್ದರು. ಬಿಜೆಪಿಯೊಂದಿಗೆ ಸರ್ಕಾರ ನಿರ್ಮಿಸುವ ಉದ್ದೇಶದಿಂದ ರಮೇಶ್ ನಾಪತ್ತೆಯಾಗಿದ್ದು, ಅಜ್ಞಾತ ಸ್ಥಳದಲ್ಲಿ ಸರ್ಕಾರ ರಚನೆಯ ಕಸರತ್ತುಗಳು ನಡೆಯುತ್ತಿವೆ ಎಂಬ ಊಹಾಪೋಹಗಳು ಗರಿಗೆದರಿದ್ದವು. ಆದರೆ ಇದ್ಯಾವುದು ನಿಜವಾಗಲಿಲ್ಲ. ಕೆಲ ದಿನಗಳಲ್ಲೆ ರಮೇಶ್ ಜಾರಕಿಹೊಳಿ ತಮ್ಮ ಕ್ಷೇತ್ರಕ್ಕೆ ವಾಪಸ್ಸಾದರು. ಈ ವೇಳೆ ಮನೆ ಬಳಿ ಕಾಣಿಸಿಕೊಂಡ ಮಾಧ್ಯಮದವರನ್ನು ಕಂಡು ಸಿಟ್ಟಾದ ರಮೇಶ್, ನಿಮ್ಮನ್ನೆಲ್ಲ ಒದಿಬೇಕು ಎಂದು ಬೈಯ್ದಿದ್ದರು. ನಿಮ್ಮಿಂದಲೆ ಆಗಿದ್ದು ಎಂದು ಕೋಪವ್ಯಕ್ತಪಡಿಸಿ ಸ್ಥಳದಿಂದ ಒಳನಡೆದಿದ್ದರು.
ಇದನ್ನೇ ತಲೆಗೆ ಚಿಟ್ಟುಹಿಡಿಯುವಷ್ಟು ಸಲ ಪ್ರಸಾರ ಮಾಡಿದ ವಾಹಿನಿ, ಅದೇನೋ ಮಹಾಪರಾಧ ನಡೆದು ಹೋಯಿತು ಎಂಬಂತೆ ಕಿರುಚಾಡಿ, ಕೂಗಾಡಿ ಸುದ್ದಿ ಪ್ರಸಾರ ಮಾಡಿತು. ಅಷ್ಟೇ ಅಲ್ಲ, ರಮೇಶ್ ಜಾರಕಿಹೊಳಿ ಬೈಯ್ದಿದ್ದ ಸಾಮಾನ್ಯ ಬೈಗುಳದ ಶಬ್ದಗಳಿಗೆ ಬೀಪ್ ಬೀಪ್ ಟ್ಯೂನ್ ಹಾಕುವ ಮೂಲಕ ಜನಸಾಮಾನ್ಯರಲ್ಲಿ ರಮೇಶ್ ಜಾರಕಿಹೊಳಿ ಏನೋ ಅಪರಾಧ ಮಾಡಿದ್ದಾರೆ ಎಂಬ ಭಾವನೆ ಬರುವಂತೆ ಪ್ರಚೋದಿಸಿತು. ಅಷ್ಟೆ ಅಲ್ಲ ರಮೇಶ್ ಜಾರಕಿಹೊಳಿಯವರು ಕ್ಷಮೆ ಕೇಳುವ ತನಕ ತಮ್ಮ ವಾಹಿನಿಯಲ್ಲಿ ಅವರ ಯಾವುದೇ ಸುದ್ದಿ ಪ್ರಸಾರ ಮಾಡುವುದಿಲ್ಲ ಎಂದು ಪ್ರಕಟಿಸಿತು.
ಇದನ್ನು ನೋಡಿದ ಜನರು ವಾಹಿನಿಗೆ ಕೇಳ್ತಿರೋದು ರಮೇಶ್ ಜಾರಕಿಹೊಳಿಗಿಂತ ಕೆಟ್ಟದಾಗಿ ನಿಮ್ಮನ್ನು ನಿಂದಿಸಿದ ಎಚ್.ಡಿ.ಕುಮಾರಸ್ವಾಮಿಯರನ್ನೇ ನೀವು ದಿನದ 24 ಗಂಟೆಯೂ ತೋರಿಸ್ತಿದ್ದೀರಾ ಅಂದಮೇಲೆ ರಮೇಶ್ ಜಾರಕಿಹೊಳಿ ಮೇಲೆ ಯಾಕೆ ಈ ಕೋಪ ಎಂದು. ಈ ಹಿಂದೆ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ, ಈ ವಾಹಿನಿಯ ನಿರೂಪಕರ ಪ್ರಶ್ನೆಗೆ ಸಿಟ್ಟಾಗಿ ವಾಚಾಮಗೋಚರವಾಗಿ ನಿಂದಿಸಿ ಎದ್ದು ಹೋಗಿದ್ದರು. ಆದರೆ ಕೆಲವು ಕಾಲ ಇದನ್ನು ಹೈಲೈಟ್ ಮಾಡಿಕೊಂಡಿದ್ದ ವಾಹಿನಿ ಬಳಿಕ ಅದೇನಾಯ್ತೋ ಗೊತ್ತಿಲ್ಲ, ಹಳೆ ಘಟನೆಗಳನ್ನೆಲ್ಲ ಮರೆತು ಅವರ ಎಲ್ಲಾ ಸುದ್ದಿಗಳನ್ನು ಪ್ರಸಾರ ಮಾಡುತ್ತ ಹಾಯಾಗಿದೆ. ಆದರೆ ರಮೇಶ್ ಜಾರಕಿಹೊಳಿಯಂತಹ ಎಮ್ಎಲ್ಎ ಮೇಲೆ ಮಾತ್ರ ಬ್ರಹ್ಮಾಸ್ತ್ರ ಬೀಸುತ್ತಿದೆ. ಇಂತಹ ತಾರತಮ್ಯದ ಉದ್ದೇಶವೇನು ಅಂತ ಪ್ರಶ್ನಿಸ್ತಿದ್ದಾರೆ ಸಾರ್ವಜನಿಕರು.
ಒಂದು ಕಮೆಂಟನ್ನು ಹಾಕಿ