ಜೆಡಿಎಸ್ ಅಡಕತ್ತರಿಯಲ್ಲಿ ಕಾಂಗ್ರೆಸ್

 JDS Is Headache For Congress

05-01-2019

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮತ್ತು ಬಿಜೆಪಿ ನಡುವಿನ ಯುದ್ಧ ಎಂಬಂತಾಗಿರೋದರಿಂದ ಸಾಕಷ್ಟು ಕುತೂಹಲ ಮೂಡಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಿಯೂ ಅಧಿಕಾರ ಕಳೆದುಕೊಂಡ ಬಿಜೆಪಿ ಈ ಬಾರಿ ಯಾವುದೆ ತಪ್ಪುಗಳಿಗೆ ಅವಕಾಶವಿಲ್ಲದಂತೆ ಸರಿಯಾದ ಹೋಂವರ್ಕ್  ಜೊತೆ ಚುನಾವಣೆ ಎದುರಿಸಲು ಸಿದ್ಧವಾಗುತ್ತಿದೆ. ಆದರೆ ಕಾಂಗ್ರೆಸ್‍ಗೆ ಮಾತ್ರ ಈ ಚುನಾವಣೆಯಲ್ಲಿ ಮೈತ್ರಿಯೇ ತಲೆನೋವಾಗುವ ಎಲ್ಲ ಸಾಧ್ಯತೆ ಇದೆ. 

ಗಾಣಕ್ಕೆ ಸಿಕ್ಕಿದ ಕಬ್ಬಿನಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ  ಮೈತ್ರಿಯ ಸಿಹಿ ನಿಧಾನವಾಗಿ ಕರಗುತ್ತಿದೆ. ಈಗಾಗಲೇ ಸಚಿವ ಸಂಪುಟ ವಿಸ್ತರಣೆಯಲ್ಲಿ ಆದ  ಎಡವಟ್ಟುಗಳಿಂದ ಪಕ್ಷವನ್ನು ರಕ್ಷಿಸಿಕೊಳ್ಳಲು ಸರ್ಕಸ್ ನಡೆಸುತ್ತಿರುವ ಕಾಂಗ್ರೆಸ್‍ಗೆ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಜೆಡಿಎಸ್‍ನ ಸ್ಥಾನಗಳ ಬೇಡಿಕೆ. ರಾಜ್ಯದಲ್ಲಿ 28 ಎಂಪಿ ಸೀಟುಗಳಿದ್ದರೂ ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಾಂಗ್ರೆಸ್‍ನ ಗಟ್ಟಿನೆಲ. ಉಳಿದೆಲ್ಲವೂ ಬಿಜೆಪಿ ಪಾಲಾಗಿದೆ. ಈ ಮಧ್ಯೆ ಕೇವಲ 6 ಲೋಕಸಭಾ ಸ್ಥಾನಗಳಲ್ಲಿ ಚುನಾವಣೆ ಸ್ಪರ್ಧಿಸುವ ಕನಸಿನಲ್ಲಿದ್ದ ಜೆಡಿಎಸ್ ಇದೀಗ ನಿಧಾನವಾಗಿ ಸ್ಥಾನಗಳ ಲೆಕ್ಕ ಏರಿಸುತ್ತಿರೋದು ಕಾಂಗ್ರೆಸ್ ಪಾಳಯಕ್ಕೆ ಆತಂಕ ಹುಟ್ಟಿಸಿದೆ. 

ಮೂಲಗಳ  ಪ್ರಕಾರ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಒಮ್ಮೆ ಇದು ನಿಜವಾದಲ್ಲಿ ಕಾಂಗ್ರೆಸ್ ತನ್ನ ಹಲವು ಸ್ಥಾನಗಳನ್ನು ಕಳೆದುಕೊಳ್ಳುವುದು ನಿಶ್ಚಿತ. ಇದರಿಂದ ರಾಜ್ಯದಲ್ಲೂ ಕಾಂಗ್ರೆಸ್ ಪ್ರಾಬಲ್ಯ ಕಡಿಮೆಯಾಗುವುದಲ್ಲದೆ ಕಾಂಗ್ರೆಸ್ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಮುಖಂಡರು, ಕಾರ್ಯಕರ್ತರ ಅಸಮಧಾನ, ವಿರೋಧವನ್ನು ಎದುರಿಸುವಂತಾಗಲಿದೆ. ಹೀಗಾಗಿ ಈಗ ಕಾಂಗ್ರೆಸ್ ತಲೆಕೆಡಿಸಿಕೊಂಡಿದ್ದು, ಮೈತ್ರಿ ಮಾತುಕತೆಯನ್ನೇ ಮುಂದೂಡುತ್ತಾ ಸಾಗುವ ಪ್ರಯತ್ನ ಮಾಡುತ್ತಿದೆ ಎನ್ನಲಾಗುತ್ತಿದೆ. 
ಬಿಜೆಪಿ ಈಗಾಗಲೇ ತನ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಇದು ಬೂತ್ ಮಟ್ಟದ ಕಾರ್ಯಕರ್ತರಲ್ಲೂ ಚುನಾವಣೆ ಸಿದ್ಧತೆಯ ಉತ್ಸಾಹವನ್ನು ಹೆಚ್ಚಿಸಿದೆ. ಆದರೆ ಕಾಂಗ್ರೆಸ್‍ನಲ್ಲಿ ಯಾವ ಯಾವ ಕ್ಷೇತ್ರಗಳು ತಮ್ಮವೆಂಬ ಮಾಹಿತಿ ಇಲ್ಲವಾಗಿದ್ದು, ಇನ್ನು ಗೊಂದಲವಿದೆ. ಮೈತ್ರಿ ಮಾತುಕತೆ ಬಳಿಕ ಪಕ್ಷದಲ್ಲಿ ಉಂಟಾಗುವ ಒಡಕು ನಿರ್ವಹಿಸುವುದು ಕಾಂಗ್ರೆಸ್‍ಗೆ ಸವಾಲಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಕಾಂಗ್ರೆಸ್‍ಗೆ ಜೆಡಿಎಸ್ ಬಿಸಿತುಪ್ಪವಾಗಿದೆ ಅಂತಾರೆ  ರಾಜಕೀಯ ವಿಶ್ಲೇಷಕರು. 


ಸಂಬಂಧಿತ ಟ್ಯಾಗ್ಗಳು

# JDS #For #Headache #Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ