ಕಾಂಗ್ರೆಸ್ "ಕೈ" ಮುರಿಯಲು ಸಂಚು..!

Plan To Break Congress "hand"

04-01-2019

ಒಂದೆಡೆ ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ ಮಾಡಿ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದ ಅಹ್ಮದ್ ಪಟೇಲ್‍ಗೆ ಕಷ್ಟ ಎದುರಾಗಿದ್ದರೆ, ಇತ್ತ ಕರ್ನಾಟಕ ಕಾಂಗ್ರೆಸ್‍ನ  ಅಂತಃಶಕ್ತಿ ಎಂದೇ ಬಿಂಬಿತವಾಗುವ ಡಿ.ಕೆ.ಶಿವಕುಮಾರ್ ಗೂ ಸಂಕಷ್ಟಗಳು ಮುಗಿಯುವ ಲಕ್ಷಣವೇ ಇಲ್ಲ. ಕಳೆದ ವರ್ಷವಷ್ಟೆ ಐಟಿ ದಾಳಿಗೆ ಒಳಗಾಗಿ ಚೇತರಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್ ಗೆ ಮತ್ತೆ ಐಟಿ ಅಧಿಕಾರಿಗಳ ಕಾಟ ಆರಂಭವಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ತಾಯಿಗೂ ನೋಟಿಸ್ ಕಳುಹಿಸಿದ್ದಾರೆ. 

ಆ ಮೂಲಕ ಎಲ್ಲೋ ಒಂದು ಕಡೆ ಮತ್ತೆ ಕೇಂದ್ರ ಸರ್ಕಾರ ಡಿ.ಕೆ.ಶಿವಕುಮಾರ್ ಅವರನ್ನು ಬೆದರಿಸುವ ತಂತ್ರಕ್ಕೆ ಮುಂಧಾಗಿದ್ಯಾ ಅನ್ನೋ  ಅನುಮಾನವೂ ಕಾಡ್ತಿದೆ. ಯಾರು ಒಪ್ಪಿಕೊಳ್ಳಲಿ ಬಿಡಲಿ, ಕರ್ನಾಟಕ ಕಾಂಗ್ರೆಸ್ ಗೆ  ಡಿ.ಕೆ.ಶಿವಕುಮಾರ್ ಶಕ್ತಿ  ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಗುಜರಾತ ರಾಜ್ಯಸಭಾ ಚುನಾವಣೆ ವೇಳೆಯೂ ಈ ಅಂಶವನ್ನು ಡಿ.ಕೆ.ಶಿ ಸಾಬೀತುಪಡಿಸಿದ್ದಾರೆ. ಇದೀಗ ಡಿ.ಕೆ.ಶಿಯವರ ಶಕ್ತಿ ಪ್ರದರ್ಶನದಿಂದ ಗೆದ್ದಿದ್ದ ಅಹ್ಮದ್ ಪಟೇಲ್‍ಗೂ ನ್ಯಾಯಲಯದಿಂದ ಸಂಕಷ್ಟ ಎದುರಾಗಿರುವುದು ಮಾತ್ರವಲ್ಲದೆ  ಕರ್ನಾಟಕದಲ್ಲಿ ಐಟಿ ಅಧಿಕಾರಿಗಳನ್ನು ಬಳಸಿಕೊಂಡು ಡಿ.ಕೆ.ಶಿ ಹುಟ್ಟಡಗಿಸುವ ಪ್ರಯತ್ನವೂ ಆರಂಭವಾಗಿದೆ. ಈ ಹಿಂದೆ ರಾಜ್ಯದ ವಿಧಾನಸಭಾ ಚುನಾವಣೆ ವೇಳೆಯಲ್ಲೂ ಡಿ.ಕೆ.ಶಿಯನ್ನು ಹೆದರಿಸಿ ಹಿಮ್ಮೆಟ್ಟಿಸುವ ಪ್ರಯತ್ನವಾಗಿತ್ತು. ಈಗ ನಡೆಯುತ್ತಿರುವ ಪ್ರಯತ್ನವೂ ಲೋಕಸಭಾ ಚುನಾವಣೆಯ ಸಿದ್ಧತೆ ಎನ್ನಲಾಗುತ್ತಿದೆ. 

ಆದರೆ ರಾಜ್ಯದಲ್ಲಿ ಬಿಜೆಪಿ ಈ ಬಾರಿ ಕಾಂಗ್ರೆಸ್  ಮತ್ತು ಜೆಡಿಎಸ್ ಮೈತ್ರಿಯ ವಿರುದ್ಧ ಚುನಾವಣೆ ಎದುರಿಸಬೇಕಾಗಿರೋದರಿಂದ ಸಹಜವಾಗಿಯೇ ಸಂಕಷ್ಟದಲ್ಲಿದೆ. ಅಲ್ಲದೆ, ರಾಜ್ಯ ಬಿಜೆಪಿಯಲ್ಲಿ ಒಕ್ಕಲಿಗರ ಮತವನ್ನು ಸೆಳೆಯುವಂತಹ ನಾಯಕತ್ವದ ಕೊರತೆಯೂ ಇರೋದರಿಂದ ಡಿಕೆಶಿಯನ್ನು ಬೆದರಿಸುವ ತಂತ್ರ ಬಿಜೆಪಿಗೇ ತಿರುಮಂತ್ರವಾಗುವ  ಎಲ್ಲಾ ಸಾಧ್ಯತೆಗಳೂ ಇವೆ. ಹೀಗಾಗಿ ಅಲ್ಪಸ್ವಲ್ಪವಾದರೂ ಒಕ್ಕಲಿಗರ ಮತಗಳನ್ನು ಸೆಳೆಯುವ ಆಸೆ ಕಮಲಪಾಳಯಕ್ಕೆ ಇದ್ದರೆ, ಡಿಕೆಶಿಯನ್ನು ಬೆದರಿಸುವ ತಂತ್ರ ಕೈಬಿಡೋದು ಒಳ್ಳೆಯದು ಅಂತಿದ್ದಾರೆ ರಾಜಕೀಯ ವಿಶ್ಲೇಷಕರು.

ಇಷ್ಟೇ ಅಲ್ಲ, ಕೇಂದ್ರ ಸರ್ಕಾರಕ್ಕೆ  ರಾಜ್ಯ ಬಿಜೆಪಿ  ನಾಯಕರು  ಇಲ್ಲಿನ ರಾಜಕೀಯ ಲೆಕ್ಕಾಚಾರಗಳನ್ನು ತಿಳಿ ಹೇಳುವ ಮೂಲಕ ಒಕ್ಕಲಿಗರ ಮತಗಳನ್ನು ಪಡೆಯುವ ನಿಟಿನಲ್ಲಿ ಡಿಕೆಶಿ ಪ್ರಕರಣವನ್ನು ಸೂಕ್ಷ್ಮವಾಗಿ ಹ್ಯಾಂಡಲ್ ಮಾಡುವಂತೆ ಪ್ರೇರೆಪಿಸುವ ಕೆಲಸ ಮಾಡಬೇಕಿದೆ. ಒಂದೊಮ್ಮೆ ಹೀಗೆಯೆ ಒಕ್ಕಲಿಗರ ಮುಖಂಡರಾಗಿ ಗುರುತಿಸಿಕೊಂಡಿರುವ ಡಿಕೆಶಿಯನ್ನು ಕೇಂದ್ರ ಸರ್ಕಾರ  ಕಾಡುತ್ತಲೇ ಇದ್ದರೆ, ರಾಜ್ಯದ ಒಕ್ಕಲಿಗ ಮತದಾರರು ಒಗ್ಗಟ್ಟಾಗಿ ಬಿಜೆಪಿಗೆ ಪಾಠ ಕಲಿಸೋದು ನಿಶ್ಚಿತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ರಾಜಕೀಯ ಮುತ್ಪದ್ಧಿಗಳು ಚಿಂತನೆ ನಡೆಸಬೇಕಿದ್ದು, ಕಾಂಗ್ರೆಸ್ ಕೈ ಮುರಿಯಲು ಹೋಗಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. 


ಸಂಬಂಧಿತ ಟ್ಯಾಗ್ಗಳು

# D.K.Shivkumar #Bjp #Income Tax #Okkaliga


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ