ಮ್ಯಾಗಿಯಲ್ಲಿ ಸೀಸ... ಒಪ್ಪಿಕೊಂಡ ನೆಸ್ಲೆ !

Nesley Admits Lead In Maggi Noodles

03-01-2019

ಮ್ಯಾಗಿ ಪ್ರಿಯರಿಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ನೆಸ್ಲೆ ಕಂಪನಿ ತಮ್ಮ ಪ್ರಸಿದ್ಧ ಆಹಾರ ಉತ್ಪನ್ನವಾದ ಮ್ಯಾಗಿಯಲ್ಲಿ ಅಪಾಯಕಾರಿ ಸೀಸದ ಅಂಶ ಇರೋದನ್ನು ಒಪ್ಪಿಕೊಂಡಿದೆ. ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ವೇಳೆ ನೆಸ್ಲೆ ಪರ ವಕೀಲರು ಈ ಅಂಶವನ್ನು ಒಪ್ಪಿಕೊಂಡಿದ್ದು, ಆಹಾರವಾಗಿ ಬಳಸುತ್ತಿರುವ ಮ್ಯಾಗಿಯಲ್ಲಿ ಸೀಸದ ಅಂಶ ಇದೆ ಎಂಬುದು ಮತ್ತೊಮ್ಮೆ ಜಗಜ್ಜಾಹಿರಾದಂತಾಗಿದೆ. 

ಮ್ಯಾಗಿ ಆಹಾರಕ್ಕೆ ಯೋಗ್ಯವಲ್ಲ ಎಂಬ ಕಾರಣಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವೂ ಈ ಉತ್ಪನ್ನ ತಯಾರಕ ಸಂಸ್ಥೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಿದೆ. ಆ ಮೂಲಕ ಮತ್ತೊಮ್ಮೆ ಸರ್ಕಾರ ಹಾಗೂ ನೆಸ್ಲೆ ಕಂಪನಿಗಳ ನಡುವೆ ಗುದ್ದಾಟ ಆರಂಭಗೊಂಡಂತಾಗಿದೆ.
ಈ ಹಿಂದೆಯೂ ಮ್ಯಾಗಿಯಲ್ಲಿ ಅಪಾಯಕಾರಿ ಸೀಸದ ಅಂಶ ಇದೆ ಎಂಬ ಮಾತು ಕೇಳಿಬಂದಿತ್ತು. ಅಲ್ಲದೆ ಸರ್ಕಾರ ನಿರ್ದಿಷ್ಟ ವಿಧಾನದಲ್ಲಿ ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲೂ ಮ್ಯಾಗಿ ವಿಫಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮ್ಯಾಗಿಯನ್ನು ಬ್ಯಾನ್ ಮಾಡಲಾಗಿತ್ತು. ಉಳಿದ ಮ್ಯಾಗಿಯನ್ನು ನಾಶಪಡಿಸಲಾಗಿತ್ತು. ಅಲ್ಲದೆ 640 ಕೋಟಿ ರೂಪಾಯಿಗಳ ನಷ್ಟದ ಹೊಣೆ ಹೊರಿಸಿ ಪ್ರಕರಣವನ್ನು ದಾಖಲಿಸಲಾಗಿತ್ತು. 
ಮ್ಯಾಗಿಯಲ್ಲಿರುವ ಸೀಸದ  ಅಂಶ ಅತ್ಯಂತ ಅಪಾಯಕಾರಿಯಾಗಿದ್ದು, ಇದು ಸೇವಿಸಿದ ತಕ್ಷಣ ದುಷ್ಪರಿಣಾಮ ಬೀರದೇ ಇದ್ದರೂ, ಧೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದು ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಕಿಡ್ನಿ ಪೆಲ್ಯೂರ್, ನರಸಂಬಂಧಿ ಕಾಯಿಲೆ, ಲಕ್ವಾ, ಕ್ಯಾನ್ಸರ್‍ನಂತಹ ಮಾರಕ ಕಾಯಿಲೆಗಳೂ ಉಂಟಾಗುವ ಸಾಧ್ಯತೆ ಇರೋದರಿಂದ ಮ್ಯಾಗಿ ನಿಷೇಧಿಸಬೇಕೆಂಬ ಆಗ್ರಹ ವ್ಯಕ್ತವಾಗಿತ್ತು. 

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ನೆಸ್ಲೆ ಕಂಪನಿ ವಕೀಲರು ಮ್ಯಾಗಿಯಲ್ಲಿ ಸೀಸದ ಅಂಶ ಸ್ವಲ್ಪ ಪ್ರಮಾಣದಲ್ಲಿದ್ದು ಆರೋಗ್ಯಕ್ಕೆ ಧಕ್ಕೆಯಾಗುವ ಪ್ರಮಾಣದಲ್ಲಿ ಇಲ್ಲ ಎಂದರು, ಇದಕ್ಕೆ ಪ್ರತಿಯಾಗಿ ನ್ಯಾಯಮೂರ್ತಿಗಳು ಆಹಾರ ಪದಾರ್ಥದಲ್ಲಿ ಸೀಸದ ಪ್ರಮಾಣ ಸ್ವಲ್ಪವಾದರೂ ಯಾಕಿರಬೇಕೆಂದು ಪ್ರಶ್ನಿಸಿದ್ದಾರೆ. ಇನ್ನು  ಜನರ ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯದ ಜೊತೆ ಆಟವಾಡುತ್ತಿರುವ ಈ ನೆಸ್ಲೆ ಕಂಪನಿ ವಿರುದ್ಧ ಕಠಿಣ ಕ್ರಮಕೈಗೊಂಡು ಮ್ಯಾಗಿಯನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿಬಂದಿದೆ.  
 


ಸಂಬಂಧಿತ ಟ್ಯಾಗ್ಗಳು

#Supreme Court # Led #Setback to Nestle #Maggi Noodles


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ