ಮಹಿಳೆಯರ ಮಾನ ತೆಗೆದ ಟಿವಿ!

 TV Shows Are Affecting Women

03-01-2019

ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎನ್ನುತ್ತದೆ ನಮ್ಮ ಸಂಸ್ಕøತಿ. ಆದರೆ ಕನ್ನಡದ ಮನೋರಂಜನಾ ಮಾಧ್ಯಮವನ್ನು ಆಳುತ್ತಿರುವ ಟಿವಿ ಶೋಗಳು, ಧಾರಾವಾಹಿಗಳು ಮಾತ್ರ ಮಹಿಳೆಯರನ್ನು ಅತ್ಯಂತ ಕೆಟ್ಟದಾಗಿ ಚಿತ್ರಿಸುತ್ತಿರುವುದು ದುರದೃಷ್ಟಕರ. ಕನ್ನಡ ಮನೋರಂಜನಾ ವಾಹಿನಿ ಇರಬಹುದು ಅಥವಾ ಸುದ್ದಿವಾಹಿನಿಗಳಿರಬಹುದು, ಎಲ್ಲವೂ ಮಹಿಳೆಯರನ್ನು ಅತ್ಯಂತ ಕೀಳಾಗಿ ಚಿತ್ರಿಸುತ್ತಿದ್ದು, ಮಹಿಳೆಯರನ್ನೇ ಕೇಂದ್ರಿಕೃತವಾಗಿಸಿಕೊಂಡು, ಶೋ -ಧಾರಾವಾಹಿ ಸಿದ್ಧಪಡಿಸಿ ಅದರಲ್ಲಿ ಮಹಿಳೆಯರಿಂದಲೇ ಅಭಿನಯ ಮಾಡಿಸಿ ಮಹಿಳೆಯರಿಗೆ ಅವಮಾನ ಮಾಡುವ ಕೆಲಸ ನಡೆಯುತ್ತಿದೆ. 

ಎಲ್ಲಾ ಧಾರಾವಾಹಿಗಳಲ್ಲೂ ಮಹಿಳೆಯರಿಗೆ ಕೆಲಸ ಇಲ್ಲ, ಅವರಿಗೆ ಚಾಡಿ ಹೇಳೋದು, ಮೇಕಪ್ ಮಾಡಿಕೊಳ್ಳೋದು, ಶಾಪಿಂಗ್ ಮಾಡೋದು, ಗಂಡನಿಗೆ ಮೋಸ ಮಾಡೋಡು, ಗಂಡನನ್ನು ವಯ್ಯಾರದಿಂದ ಒಲಿಸಿಕೊಳ್ಳೋದು, ಅತ್ತೆ-ಸೊಸೆಗೆ ಜಗಳ, ಮಕ್ಕಳನ್ನು ಶಿಕ್ಷಿಸೋದು, ಪಾರ್ಟಿಗಳಿಗೆ ಹೋಗಿ ಎಂಜಾಯ್ ಮಾಡೋದು ಇಷ್ಟೇ ಕೆಲಸ ಎಂಬಂತೆ ಬಿಂಬಿಸಲಾಗುತ್ತಿದೆ. ಬಡ ಹೆಂಗಸರು ಮಾತ್ರ ಅಡುಗೆ ಮಾಡೋದು, ಶ್ರೀಮಂತರ ಮನೆಯ ಹೆಂಗಸರಿಗೆ ಕೆಲಸವೇ ಇರೋದಿಲ್ಲ ಎಂಬಂತೆ ಚಿತ್ರಿಸಲಾಗುತ್ತಿದೆ.  ಯಾವುದೆ ಕತೆಗಳಲ್ಲೂ ಮಹಿಳೆಯನ್ನು ಸ್ವಾಭಿಮಾನಿಯಾಗಿ, ಶಿಕ್ಷಿತ ಮಹಿಳೆಯಾಗಿ, ಉದ್ಯಮದಲ್ಲಿ ಯಶಸ್ವಿಯಾಗಿರುವಂತ ಸಾಧಕಿಯಾಗಿ ತೋರಿಸಿ ಸಮಾಜವನ್ನು ಪ್ರೇರೇಪಿಸುವ ಪ್ರಯತ್ನಗಳು ನಡೆಯುತ್ತಿಲ್ಲ. 

ಇನ್ನು ಮಹಿಳೆಯರ ವ್ಯಕ್ತಿತ್ವವನ್ನು ಅಷ್ಟೇ ಕೀಳಾಗಿ ಸೆರೆಹಿಡಿಯುತ್ತಿರುವ ಧಾರಾವಾಹಿಗಳು, ಸ್ವಲ್ಪ ಜೋರಾಗಿದ್ದರೇ ಬಜಾರಿಯಂತೆ ಹಾಗೂ ಸ್ವಲ್ಪ ಮುಗ್ಧೆಯಾಗಿದ್ದರೇ ಆಕೆಯನ್ನು ಶತದಡ್ಡಿಯಂತೆ ಚಿತ್ರಿಸಿ ಜನಮಾನಸದ ಮೇಲೆ ಕೆಟ್ಟಪರಿಣಾಮ ಬೀರುವಂತೆ ಮಾಡುತ್ತಿದ್ದಾರೆ. ಹಳ್ಳಿಯಲ್ಲಿ ಹುಟ್ಟಿಬೆಳೆದವರಿಗೆ ಜಗತ್ತಿನ ಯಾವ ತಿಳುವಳಿಕೆಯೂ ಇಲ್ಲ ಎಂಬಂತೆ ಚಿತ್ರಿಸುವ ಈ ಧಾರಾವಾಹಿಗಳಿಂದ  ಹಳ್ಳಿಯ ಸುಶಿಕ್ಷಿತ ಹೆಣ್ಣುಮಕ್ಕಳು ಅವಮಾನ ಎದುರಿಸುವಂತ ಸ್ಥಿತಿ ಎದುರಾಗುತ್ತಿದೆ. ಸದಾ ಶ್ರೀಮಂತಿಕೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದು, ಅತಿಯಾದ ಮೇಕಪ್, ರಾತ್ರಿ ಮಲಗುವ ವೇಳೆಯಲ್ಲೂ ಮೇಕಪ್-ಆಭರಣ ಹಾಕಿ ರಥದಂತೆ ಹಾಸಿಗೆ ಏರುವಂತೆ ತೋರಿಸುತ್ತಿದ್ದಾರೆ. 

ಇದಲ್ಲದೇ, ಸಿನಿಮಾಗಳಂತೆ ಧಾರಾವಾಹಿಗಳಲ್ಲೂ ಕಿಸ್ಸಿಂಗ್, ಫಸ್ರ್ಟ್ ನೈಟ್, ಬಾತ್‍ರೂಂ ಸೀನ್‍ಗಳನ್ನು ತುರುಕುವ ಮೂಲಕ ಮನೆಯಲ್ಲಿ  ಕುಟುಂಬಸ್ಥರು ಕೂತು ನೋಡಲು ಮುಜುಗರ ಉಂಟಾಗುವಂತೆ ಮಾಡುತ್ತಿದ್ದಾರೆ. ಯಾವ ಧಾರವಾಹಿಯ ಕತೆಗಳಿಗೂ ಒಂದು ಲಾಜಿಕ್ ಆಗಲಿ, ಅಥವಾ ಗುಣಮಟ್ಟದ ಸಂಭಾಷಣೆಯಾಗಲಿ ಇರುವುದಿಲ್ಲ. ಮನಬಂದಂತೆ ಕತೆಗಳನ್ನು ಸಿದ್ಧಪಡಿಸುವ ಕತೆಗಾರರು ನೈತಿಕ ಅಂಶಗಳನ್ನು ಗಾಳಿಗೆ ತೂರಿ ಅನೈತಿಕ ಸಂಬಂಧ, ಎರಡನೇ ಮದುವೆ, ಮದುವೆಗೆ ಮೊದಲೇ ಗರ್ಭಿಣಿಯಾಗುವುದು, ಮಕ್ಕಳಾಗದೇ ಇರುವುದು ಈ ರೀತಿಯ ನಕಾರಾತ್ಮಕ ವಿಚಾರಗಳನ್ನು ಸಹಜ ಎಂಬಂತೆ ಧಾರಾವಾಹಿಯಲ್ಲಿ ಸೇರಿಸಿ ಸಮಾಜದ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡುತ್ತಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ಮಹಿಳೆಯರೆಂದರೆ ಅವರು ಪುರುಷರ ಅಧೀನ, ಅವರಿಗೆ ಸ್ವಂತ ಬುದ್ಧಿ ಇಲ್ಲ. ದೇವರ ಪೂಜೆ, ಜಾತಕ, ವ್ರತಾಚರಣೆ ಮೌಡ್ಯಗಳ ಆಚರಣೆಯಿಂದಲೆ ಎಲ್ಲವನ್ನು ಪಡೆದುಕೊಳ್ಳಬೇಕು ಎಂಬ ಭಾವನೆ ಮೂಡುವಂತೆ ಮಾಡುತ್ತಿದ್ದಾರೆ. 

ಹೆಣ್ಣುಮಕ್ಕಳಿಗಾಗಿಯೇ ಬಿತ್ತರವಾಗುವ ಈ ಧಾರಾವಾಹಿಗಳಲ್ಲಿ ಹೆಣ್ಣುಮಕ್ಕಳನ್ನೇ ಕೆಟ್ಟದಾಗಿ ಚಿತ್ರಿಸುತ್ತಿರೋದರಿಂದ ಇದು ಮಹಿಳೆಯರ ಮನಸ್ಸಿನ ಮೇಲೆ ದುಷ್ಪರಿಣಾಮ  ಬೀರುತ್ತಿದ್ದು, ಕೆಲ ಮನೆಗಳಲ್ಲಂತೂ ಈ ಧಾರಾವಾಹಿಗಳು ಕುಟುಂಬದಲ್ಲಿ ಬಿರುಕು ಮೂಡಿಸಿರುವ ಸಂಗತಿ ಕೂಡ ಬೆಳಕಿಗೆ ಬಂದಿದೆ. ಹೀಗಾಗಿ ಸಂಬಂಧಿಸಿದ ಸಂಸ್ಥೆಯೂ ತಕ್ಷಣ ಕನ್ನಡ ಮನೋರಂಜನಾ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸೀರಿಯಲ್‍ಗಳ ಕ್ವಾಲಿಟಿ ಚೆಕ್ಕಿಂಗ್ ಮಾಡಿ,  ಎಲ್ಲ ರಂಗದಲ್ಲೂ ಗಮನಾರ್ಹ ಸಾಧನೆ ಮಾಡಿರುವ ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆಯಾಗದಂತೆ ಕಾರ್ಯಕ್ರಮ ರೂಪಿಸಲು ನಿರ್ದೇಶನ ನೀಡುವ ಹಾಗೂ ಕಾನೂನು ಕ್ರಮಕೈಗೊಳ್ಳುವ ಅಗತ್ಯವಿದೆ ಅಂತಿದ್ದಾರೆ ಚಿಂತಕರು. 


ಸಂಬಂಧಿತ ಟ್ಯಾಗ್ಗಳು

#Tv shows #Affecting #In kannada #Women's Dignity


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಮಹಿಳೆಯ. ಸಾಧನೆಯನ್ನ ಬಿಂಬಿಸಿ
  • Prameela Kotyan
  • ಮನೆ ವಾರ್ತೆ