ಚಳಿ ಅಬ್ಬರಕ್ಕೆ ನಲುಗಿದ ರಾಜ್ಯ..!

 Increased Cold In The State

03-01-2019

ಹೊಸ ವರ್ಷದ ಸಂಭ್ರಮದಲ್ಲಿರುವ ಬೆಂಗಳೂರು ಸೇರಿದಂತೆ ರಾಜ್ಯದ ಜನತೆಗೆ ಚಳಿರಾಯ ಸಖತ್ ಶಾಕ್ ನೀಡಿದ್ದು, ಬಾಧಿಸುತ್ತಿರುವ ಚಳಿಯಲ್ಲಿ ನಗರ ಅಕ್ಷರಷಃ ನಲುಗಿ ಹೋಗಿದೆ. ಸಿಲಿಕಾನ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಕಳೆದ 7 ವರ್ಷಗಳಲ್ಲೇ ಅತಿ ಕಡಿಮೆ ಎಂದರೇ 12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಕಳೆದ 7 ವರ್ಷಗಳಲ್ಲಿ ಜನವರಿ ತಿಂಗಳಿನಲ್ಲಿ ದಾಖಲಾದ ಅತಿ ಕಡಿಮೆ ಉಷ್ಣಾಂಶವಾಗಿದೆ. ಇನ್ನು ಈ ಪ್ರಮಾಣ 10 ಡಿಗ್ರಿ ಸೆಲ್ಸಿಯಸ್‍ಗೂ ಕಮ್ಮಿ ದಾಖಲಾಗುವ ಸಾಧ್ಯತೆ ಇದ್ದು, ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಸಿದೆ. 

ಕಳೆದ ಎರಡು-ಮೂರು ದಿನದಿಂದಲೂ ಬೆಂಗಳೂರು ಸೇರಿ ರಾಜ್ಯದಾದ್ಯಂತ ಚಳಿಯ ಅಬ್ಬರ ಹೆಚ್ಚಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ವಿಪರೀತ ಚಳಿ ಬೀಳುತ್ತಿದೆ. ಸಂಜೆ 5 ಗಂಟೆಯಾಗುತ್ತಿದ್ದಂತೆ ಮತ್ತೆ ಚಳಿ ಆರಂಭವಾಗಿ ಜನರನ್ನು ಕಂಗಲಾಗಿಸುತ್ತಿದೆ. ಇನ್ನು ಒಂದೆರಡು ದಿನಗಳ ಕಾಲ ರಾಜ್ಯದಲ್ಲಿ ಚಳಿಗಾಳಿ ಮುಂದುವರಿಯಲಿದ್ದು, ಉಷ್ಣಾಂಶ ಕಡಿಮೆಯಾಗಲಿದೆ. ಹೀಗಾಗಿ ಜನರು ಸ್ವೆಟರ್ ಸೇರಿದಂತೆ ಚಳಿಯಿಂದ ರಕ್ಷಣೆ  ಪಡೆಯುವ ಉಡುಪುಗಳನ್ನು ಧರಿಸಿ ಆರೋಗ್ಯ 
ಕಾಪಾಡಿಕೊಳ್ಳುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 

ದೇಶದಾದ್ಯಂತವೂ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಇನ್ನಷ್ಟು ಹೆಚ್ಚಲಿದೆ ಎನ್ನಲಾಗುತ್ತಿದೆ. ರಾಜ್ಯದ ಉತ್ತರಕನ್ನಡ, ಶಿವಮೊಗ್ಗ,ಕೊಡಗು,ಮೈಸೂರು,ಮಂಡ್ಯ,ಬೆಂಗಳೂರು ಗ್ರಾಮಾಂತರ ಭಾಗದಲ್ಲೂ ಶೀತದ ಪ್ರಮಾಣ ವಿಪರೀತ ಹೆಚ್ಚಾಗಿದೆ. ಜನರು ಬಿಸಿಲಿಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಇದರಿಂದ ವೃದ್ಧರು, ಮಕ್ಕಳು ಸೇರಿದಂತೆ ಜನರ ಆರೋಗ್ಯದಲ್ಲಿ ವ್ಯೆತ್ಯಾಸಗಳಾಗಿದ್ದು, ಉಸಿರಾಟದ ತೊಂದರೆ, ಅಸ್ತಮಾ, ಮಂಡಿನೋವು, ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 
ಬೆಂಗಳೂರಿನಲ್ಲಿ, ಗರಿಷ್ಠ ಉಷ್ಣಾಂಶ 27.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಸಿಯಸ್, ಕೆಐಎಎಲ್‍ನಲ್ಲಿ ಗರಿಷ್ಠ 27.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 11.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮಧ್ಯಪ್ರದೇಶದ ಖಜುರಾಹೋದಲ್ಲಿ ದೇಶದ ಅತಿ ಕಡಿಮೆ ಉಷ್ಣಾಂಶ 3.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 

ಹವಾಮಾನ ತಜ್ಞರ ಪ್ರಕಾರ ಜನವರಿ 14 ರ ಮಕರ ಸಂಕ್ರಮಣದವರೆಗೂ ಚಳಿ ಇರಲಿದ್ದು, ಬಳಿಕ  ಕಡಿಮೆಯಾಗಲಿದೆ. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗಿನ ವೇಳೆ ದಟ್ಟ ಮಂಜುಮುಸುಕುತ್ತಿದ್ದು, ಇದರಿಂದ ವಿಮಾನಗಳ ಹಾರಾಟದಲ್ಲೂ ತಕ್ಕಮಟ್ಟಿನ ವ್ಯೆತ್ಯಯ ಉಂಟಾಗುತ್ತಿದೆ. ಒಟ್ಟಿನಲ್ಲಿ ಹಿಂದೆಂದೂ ಕಂಡರಿಯದ ಚಳಿ ಬಾಧೆಗೆ ಜನರು ನಡುಗಿ ಹೋಗಿದ್ದು, ದೇಹದ ಉಷ್ಣತೆ ಕಾಪಾಡಿಕೊಳ್ಳಲು ಬಿಸಿ ಪದಾರ್ಥಗಳ ಮೊರೆ ಹೋಗುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

# Cold # 12 degree #Karnataka # Temperature


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ