ಮಹಿಳೆಯರಿಂದ ಶಬರಿಮಲೈ ಅಪವಿತ್ರ...!

Shabarimale Unholy Because off Womans

02-01-2019

ಪೊಲೀಸರ ಬಿಗಿ ಭದ್ರತೆಯಲ್ಲಿ ಇಬ್ಬರು 50 ವರ್ಷದೊಳಗಿನ ಇಬ್ಬರು ಮಹಿಳೆಯರು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೈಯ ಪ್ರವೇಶಿಸಿರುವುದರಿಂದ ದೇವಾಲಯ ಅಪವಿತ್ರವಾಗಿದೆ ಎಂದಿರುವ ಆಡಳಿತ ಮಂಡಳಿ ದೇವಾಲಯವನ್ನು ಶುದ್ಧೀಕರಣ ಕಾರ್ಯಕ್ಕಾಗಿ ಮುಚ್ಚಿದೆ. ಇಂದು ಬೆಳಗಿನ ಜಾವ 3.45 ರ ವೇಳೆಗೆ ಬಿಂದು ಮತ್ತು ಕನಕದುರ್ಗಾ ಎಂಬ 40 ವಯಸ್ಸಿನ ಮಹಿಳೆಯರು  ಓಡುತ್ತಾ ಹೋಗಿ ದೇವಾಲಯವನ್ನು ಪ್ರವೇಶಿಸಿದ್ದಾರೆ. ಹೀಗೆ ದೇವಾಲಯ ಪ್ರವೇಶಿಸುತ್ತಿರುವ ಮಹಿಳೆಯರಿಗೆ ಪೊಲೀಸರು ಭದ್ರತೆ ನೀಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಈ ವಿಡಿಯೋ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ದೇವಾಲಯದ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತ್ತು. ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಮಹಿಳೆಯರು ದೇವಾಲಯ ಪ್ರವೇಶಿಸಿದ್ದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಇದರ ವಿರುದ್ಧ ದೇಶದ ಎಲ್ಲೆಡೆ ಆಕ್ರೋಶ  ವ್ಯಕ್ತವಾಗಿದೆ. ಈ ಮಧ್ಯೆ ಮಹಿಳೆಯರು ಹಿಂಭಾಗಿಲಿನ ಮೂಲಕ ದೇವಾಲಯ ಪ್ರವೇಶಿಸಿದ್ದು, ಇದನ್ನು ಅಮಂಗಳಕರ ಎಂದು ವ್ಯಾಖ್ಯಾನಿಸಲಾಗುತ್ತಿದೆ. 

ಮಹಿಳೆಯರಾದ ಕನಕದುರ್ಗಾ ಹಾಗೂ ಬಿಂದು ಈ ಹಿಂದೆ ಡಿಸೆಂಬರ್ 18 ರಂದು  ದೇವಾಲಯ ಪ್ರವೇಶಿಸಲು ಯತ್ನಿಸಿದ್ದರು.  ಆದರೆ ಜನರ ವಿರೋಧದಿಂದ ಇದು ಸಾಧ್ಯವಾಗಿರಲಿಲ್ಲ. ಆದರೆ ಈಗ ಪೊಲೀಸರ  ನೆರವಿನೊಂದಿಗೆ ಮಹಿಳೆಯರು ದೇವಾಲಯ ಪ್ರವೇಶಿಸಿದ್ದು, ತಲೆತಲಾಂತರದಿಂದ ನಡೆಸಿಕೊಂಡು ಬಂದಿದ್ದ ಸಂಪ್ರದಾಯವನ್ನು ಮುರಿಯುವುದರ ಜೊತೆ 800 ವರ್ಷಗಳ ಇತಿಹಾಸವನ್ನು ಮುರಿದಂತಾಗಿದೆ. 

 ಶಬರಿಮಲೈ ದೇವಾಲಯದ ನಿಯಮಗಳ ಪ್ರಕಾರ 10 ರಿಂದ 50 ವರ್ಷದ ಮಹಿಳೆಯರು ದೇವಾಲಯಕ್ಕೆ ಬರುವಂತಿಲ್ಲ. ಆದರೆ ದೇವಾಲಯದ ಈ ನಿಯಮವನ್ನು ಪ್ರಶ್ನಿಸಿ ಕೆಲ ಮಹಿಳೆಯರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುದೀರ್ಘ ಕಾಲ ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಐವರು  ನ್ಯಾಯಮೂರ್ತಿಗಳ ಪೀಠ, ಸಪ್ಟೆಂಬರ್ 28 ರಂದು  ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆರವುಗೊಳಿಸಿ ಆದೇಶ ಹೊರಡಿಸಿತ್ತು. 
ಇದೀಗ ಈ ಮಹಿಳೆಯರು ದೇಗುಲ ಪ್ರವೇಶಿಸುತ್ತಿದ್ದಂತೆ ದೇವಾಲಯವನ್ನು ಶುದ್ಧಿಕರಣಕ್ಕಾಗಿ ಮುಚ್ಚಲಾಗಿದೆ. ಇನ್ನೊಂದೆಡೆ ದೇವಸ್ಥಾನ ಪ್ರವೇಶಿಸಿದ ಮಹಿಳೆಯರ ಮನೆಗಳಿಗೆ ಸಾಕಷ್ಟು ಭದ್ರತೆ ನೀಡಲಾಗಿದ್ದರೂ ಅವರ ಮನೆಗಳ ಮೇಲೆ ಆಕ್ರೋಶಿತ ಭಕ್ತರು ಕಲ್ಲಿನ ದಾಳಿ ನಡೆಸಿದ್ದಾರೆ. ಒಟ್ಟಾರೆ ಶಬರಿಮಲೈಗೆ ಮಹಿಳೆಯರ ಪ್ರವೇಶದಿಂದ ಕೇರಳದಲ್ಲಿ ಒಂದು ರೀತಿಯ ಉದ್ವಿಘ್ನತೆ ಮನೆ ಮಾಡಿದೆ. 


ಸಂಬಂಧಿತ ಟ್ಯಾಗ್ಗಳು

#shabrimale #Womans entered #ayyappa temple #closed


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ