ಸಾವಿನ ಮನೆಯಲ್ಲಿ ಟಿವಿ ಸಂಭ್ರಮ...!

 TV Celebration at Death House

01-01-2019

ಕರ್ನಾಟಕದಲ್ಲಿ ಪತ್ರಿಕೋದ್ಯಮ ಅತ್ಯಂತ ಪ್ರಬಲವಾಗಿ ಮಾಧ್ಯಮವಾಗಿ ಬೆಳೆದುಕೊಂಡು ಬಂದಿದೆ. ಪತ್ರಿಕೋದ್ಯಮದ ಹೊಸ ಆವಿಷ್ಕಾರದಂತೆ ಉದ್ಭವವಾದ ಟಿವಿ ಜರ್ನಲಿಸಂ ಹಾಗೂ ನ್ಯೂಸ್ ಚಾನೆಲ್‍ಗಳು ಇವತ್ತು ಪತ್ರಿಕೋದ್ಯಮವನ್ನು ಸಾರಾ-ಸಗಾಟಾಗಿ ನಡುಬೀದಿಯಲ್ಲಿ ಹರಾಜು ಹಾಕುತ್ತಿವೇ ಎಂದರೆ ತಪ್ಪಿಲ್ಲ. ನಾಯಿಕೊಡೆಗಳಂತೆ ಗಲ್ಲಿ-ಗಲ್ಲಿಯಲ್ಲಿ ತಲೆ ಎತ್ತಿ ನಿಂತಿರುವ ಈ ನ್ಯೂಸ್ ಚಾನೆಲ್‍ಗಳಿಗೆ ಗಣ್ಯರ ಸಾವೆಂದರೆ ಹಬ್ಬವಿದ್ದಂತೆ. ಇದಕ್ಕೆ ಕಾರಣ ಇವುಗಳ ಭವಿಷ್ಯ ನಿರ್ಧರಿಸುವ ಟಿಆರ್‍ಪಿ. ಹೌದು ಕೇವಲ ಬರುಬಹುದಾದ 2-3 ಅಂಕಿಯ ಟಿಆರ್‍ಪಿಗಾಗಿ ಹಗಲು-ರಾತ್ರಿ ಅಬ್ಬರಿಸಿ, ಬೊಬ್ಬಿರಿಯುವ ಈ ವಾಹಿನಿಗಳು ಸಾವಿನ ಮನೆಯಲ್ಲಿ ಅಂಕಿ-ಅಂಶ ಏರಿಸಿಕೊಳ್ಳುತ್ತವೆ. ಇದು ಕಹಿಯಾದರೂ ಸತ್ಯ. 

ಕರ್ನಾಟಕದಲ್ಲಿ ಅಥವಾ ದೇಶದಲ್ಲಿ, ಯಾವುದೇ ಕ್ಷೇತ್ರದ ಗಣ್ಯರ ನಿಧನವಾದರೂ ಸುದ್ದಿವಾಹಿಗಳು ಅವುಗಳ ವರದಿಗೆ ಹಬ್ಬದಂತೆ ಸಾವರಿಸಿಕೊಂಡು ಸಿದ್ಧವಾಗುತ್ತವೆ. ಗಣ್ಯರ ಸಾವಿನ ಸುದ್ದಿಯನ್ನು ಯಾರು ಮೊದಲು ಪ್ರಕಟಿಸುತ್ತಾರೆ ಎಂಬಲ್ಲಿಂದ ಆರಂಭವಾಗಿ, ಅವರ ಚಿತೆಗೆ ಎಷ್ಟು ಇಂಚು ಉದ್ದದ ಕಟ್ಟಿಗೆ ತುಂಡು ಜೋಡಿಸಲಾಗಿತ್ತು ಎನ್ನುವವರೆಗೆ, ಹುಟ್ಟಿನಿಂದ ಆರಂಭವಾಗಿ ಆ ವ್ಯಕ್ತಿ ಎಷ್ಟು ಸಿಗರೇಟು ಸೇದುತ್ತಿದ್ದ ಎಂಬಲ್ಲಿಯವರೆಗಿನ ಇಂಚಿಂಚು ಮಾಹಿತಿಯನ್ನು ಇಟ್ಟುಕೊಂಡು ಹಗಲು-ರಾತ್ರಿ ತೋರಿಸಿದ್ದನ್ನೇ ತೋರಿಸಿ, ಸತ್ತವರ ಸಂಬಂಧಿಕರಿಗೆ ಇಲ್ಲ-ಸಲ್ಲದ ಪ್ರಶ್ನೆಗಳನ್ನು ಕೇಳಿ ಹೇಸಿಗೆ ಹುಟ್ಟಿಸಿ ಬಿಡುತ್ತಾರೆ. ಹೀಗಾಗಿ ಯಾವುದಾದರೂ ಗಣ್ಯರು ತೀರಿಕೊಂಡ ಮರುವಾರ ಚಾನೆಲ್‍ಗಳ ಟಿಆರ್‍ಪಿ ಸುವರ್ಣ ಅಕ್ಷರಗಳಂತೆ ಹೊಳೆಯುತ್ತವೆ. 
ಎರಡಂಕಿ ದಾಟದವರು ಮೂರಂಕಿಯ ಟಿಆರ್‍ಪಿ ನೋಡಿದ್ರೆ,  ಒಂದಂಕಿಯವರು ಎರಡಕ್ಕೇರಿ ಸಂಭ್ರಮಿಸುತ್ತಾರೆ. ಇದಕ್ಕೆ ತಾಜಾ ಉದಾಹರಣೆ, ನಟ ಹಾಗೂ ಮಾಜಿ ಸಚಿವ ಅಂಬರೀಶ್ ನಿಧನ. ಇದ್ದಾಗ ಅಂಬರೀಶ್ ರೇಸ್‍ಕೋರ್ಸನಲ್ಲೆ ಇರುತ್ತಾರೆ ಮಂಡ್ಯಕ್ಕೆ ಹೋಗೋದೆ ಇಲ್ಲ ಎಂದು ಟೀಕಿಸುತ್ತಿದ್ದ ಮಾದ್ಯಮಗಳು ಅಂಬರೀಶ್ ನಿಧನರಾಗುತ್ತಿದ್ದಂತೆ ವಾಹಿನಿಯೊಂದು ನಾನೇ ಮೊದಲು ನಿಧನ ವಾರ್ತೆ ಪ್ರಕಟಿಸಿದ್ದು ಎಂದು ಬೆನ್ನು ತಟ್ಟಿಕೊಂಡಿತು. ಮತ್ತುಳಿದ ವಾಹಿನಿಗಳು ಅಂಬರೀಶ್‍ರನ್ನು ದೇವಮಾನವರಂತೆ ಬಿಂಬಿಸಿ ಎರಡೂ-ಮೂರು ದಿನಗಳ ಕಾಲ ಹೇಳಿದ್ದನ್ನೇ ಹೇಳಿ-ಹೇಳಿ ನೋಡಗರು ಬಲವಂತವಾಗಿ ಚಾನೆಲ್ ಬದಲಾಯಿಸುವಂತೆ ಪ್ರೇರೇಪಿಸಿದವು. 
ಅಂಬರೀಶ್ ನಿಧನಕ್ಕೂ ಮುನ್ನ ಮಂಡ್ಯ ಜಿಲ್ಲೆಯಲ್ಲಿ ಬಸ್‍ವೊಂದು ಕಾಲುವೆಗೆ ಬಿದ್ದು ಜಲಸಮಾಧಿಯಾಗಿದ್ದರು. ಆದರೆ ಅಂಬರೀಶ್ ನಿಧನದವರೆಗೂ ಆ ಸುದ್ದಿಯ ಹಿಂದೆ ಬಿದ್ದಿದ್ದ ವಾಹಿನಿಗಳು ನಟನ ನಿಧನದ ಬಳಿಕ ಸುದ್ದಿಯನ್ನೇ ಮರೆತೇ ಬಿಟ್ಟವು. ಟಿವಿ ಮಾಧ್ಯಮಗಳ ಈ ಕಾರ್ಯವೈಖರಿ ಬಹಿರಂಗ ಟೀಕೆಗೂ ಗುರಿಯಾಯ್ತು. ಅಂಬರೀಶ್ ನಿಧನ ಬಳಿಕ ಬಂದ ಟಿಆರ್‍ಪಿಯಲ್ಲಿ ವಾಹಿನಿಗಳ ಟಿಆರ್‍ಪಿ ಶೇಕಡಾ 100,124,132,144 ಪ್ರಮಾಣದಷ್ಟು ಹೆಚ್ಚಿಗೆಯಾಗಿತ್ತು. 

ಸಾವಿನ ವಿಚಾರದಲ್ಲಿ ಸಂಯಮ ವಹಿಸಬೇಕೆಂಬುದನ್ನು ವಾಹಿನಿಗಳು ಮರೆತೇ ಬಿಟ್ಟಿವೆ. ಹೀಗಾಗಿ ಯಾರಾದ್ರೂ ಅನಾರೋಗ್ಯಕ್ಕಿಡಾಗುತ್ತಿದ್ದಂತೆ ಅವರ ಪ್ರೊಪೈಲ್ ಸಂಗ್ರಹಿಸಿಟ್ಟು ಅವರ ಬಗ್ಗೆ ಪ್ರಸಾರ ಮಾಡಲಾಗಿದ್ದ ಹಳೆ ಎಪಿಸೋಡ್‍ಗಳನ್ನು ರಿಪೀಟ್ ಪ್ಲೇ ಗೆ ಸಿದ್ದಪಡಿಸಿ, ಅಕ್ಷರಷಃ ಸಾವಿನ ಸಿದ್ಧತೆಯನ್ನೇ ಮಾಡಿಕೊಳ್ಳುತ್ತವೆ. ಇದಕ್ಕೆ ಕಾರಣ ಜನರ ವೀಕ್ಷಣೆ. ಹೌದು ಇತ್ತೀಚಿನ ಜನರು ಟಿವಿಗಳ ಏಕತಾನತೆ ಹಾಗೂ ಪಕ್ಷಗಳ ಪರ ಬ್ಯಾಟಿಂಗ್ ಈ ರೀತಿಯ ವರ್ತನೆಯಿಂದ ಜನರು ನ್ಯೂಸ್‍ಚಾನೆಲ್‍ಗಳಿಂದ ವಿಮುಖರಾಗುತ್ತಿದ್ದಾರೆ. ಆದರೆ ಗಣ್ಯರು ತೀರಿಕೊಂಡಾದ ಸಹಜವಾದ ಕುತೂಹಲದಿಂದ ಅವರ ಬದುಕು, ಸಾಧನೆ, ಸಾವು, ಅಂತ್ಯಸಂಸ್ಕಾರದ ಕುರಿತು ತಿಳಿದುಕೊಳ್ಳಲು ಆಸಕ್ತಿ ವಹಿಸುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಳ್ಳುವ ಈ ಸುದ್ದಿ ವಾಹಿನಿಗಳು ಮೂರ್ನಾಲ್ಕು ದಿನಗಳ ಸಾವನ್ನೇ ವಿಜೃಂಭಿಸುವ ಅಘೋರಿಗಳಂತಾಡುತ್ತಾರೆ. ಹೀಗಾಗಿ ನಿಧಾನವಾಗಿ ನ್ಯೂಸ್ ಚಾನೆಲ್‍ಗಳು ಜನಮಾನಸದಿಂದ ದೂರ ಸರಿಯುತ್ತಿದ್ದು, ವೀಕ್ಷಕರ ಸಂಖ್ಯೆ ಕ್ಷೀಣಿಸುತ್ತಿದೆ. ಜನರು ಶಾಂತವಾಗಿ, ವಿಜೃಂಭಣೆಯಿಲ್ಲದೇ, ವಸ್ತುನಿಷ್ಠವಾದ ಮಾಹಿತಿ ನೀಡುವ ಮಾಧ್ಯಮಗಳತ್ತ ಮುಖಮಾಡುತ್ತಿದ್ದಾರೆ. ಇನ್ನಾದರೂ ವಾಹಿನಿಗಳು ಸಾವಿನ ದೂತರಂತೆ ವರ್ತಿಸದೆ ಸಂಯಮ ಮೆರೆಯಬೇಕು. 


ಸಂಬಂಧಿತ ಟ್ಯಾಗ್ಗಳು

# TV # at Death House #Celebration # For TRP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ