ಪ್ರಜ್ವಲ್ ರೇವಣ್ಣಗೆ ಆಯ್ತು...ನಿಖಿಲ್ ಗೆ ಯಾವಾಗ?

Prajwal Revanna Now Nikhil Kumarswami When?

01-01-2019

ಯಾರು ಒಪ್ಪಿಕೊಂಡರೂ ಬಿಟ್ಟರೂ ಮಾಜಿ ಪ್ರಧಾನಿ ದೇವೆಗೌಡ್ರದ್ದು ಕುಟುಂಬ ರಾಜಕಾರಣ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇದುವರೆಗೂ ಜೆಡಿಎಸ್‍ನಲ್ಲಿ ಸಿಕ್ಕಿದ ಸ್ಥಾನಮಾನ ಹಾಗೂ ವಿಧಾನಸೌಧ, ಸಚಿವ ಸಂಪುಟದಲ್ಲಿ ದೇವೆಗೌಡರ ಕುಟುಂಬದವರಿಗೆ ಸಿಕ್ಕಿದ ಸ್ಥಾನಗಳೇ ಈ ಮಾತಿಗೆ ಸಾಕ್ಷಿ ಒದಗಿಸುತ್ತವೆ. ಇದೀಗ ಗೌಡ್ರ ಕುಟುಂಬ ರಾಜಕಾರಣದ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. ಅದುವೆ ದೊಡ್ಡಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ. ಎಲ್ಲ ಅಂದುಕೊಂಡಂತೆ ಆದರೆ ಪ್ರಜ್ವಲ್ ರೇವಣ್ಣ, ದೇವೆಗೌಡರ ಜೊತೆಗೆ ಲೋಕಸಭೆ ಮೆಟ್ಟಿಲೇರಬಹುದು. ಹೀಗಿರುವಾಗಲೇ ಜೆಡಿಎಸ್‍ನಲ್ಲಿ ಪ್ರಜ್ವಲ್ ರೇವಣ್ಣಗೆ  ನೆಲೆ ಆಯ್ತು  ಆದರೆ ನಿಖಿಲ್‍ಗೆ ಯಾವಾಗ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. 

ದೇವೆಗೌಡರ ಕುಟುಂಬದಲ್ಲಿ ಎಲ್ಲರೂ ರಾಜಕಾರಣಿಗಳೆ. ಕುಮಾರಸ್ವಾಮಿ ಸಿಎಂ, ಅವರ ಸಚಿವ ಸಂಪುಟದಲ್ಲಿ ಸಹೋದರ ರೇವಣ್ಣ ಸಚಿವರು. ನಮ್ಮ ಮನೆಯಿಂದ ಇಬ್ಬರೇ ಕಣಕ್ಕಿಳಿಯೋದು ಎನ್ನುತ್ತಲೆ ದೊಡ್ಡಗೌಡ್ರು ಅನಿತಾ ಕುಮಾರಸ್ವಾಮಿಯವರನ್ನು ರಾಮನಗರದಿಂದ ಕಣಕ್ಕಿಳಿಸಿ ಎಮ್‍ಎಲ್‍ಎ ಮಾಡಿದರು. ಇದೀಗ ಗೌಡ್ರ ಮನೆಯ ಮೂರನೆ ತಲೆಮಾರಿನ ರಾಜಕೀಯ ಪ್ರವೇಶವೂ ಸನ್ನಿಹಿತವಾಗಿದೆ. ಸಚಿವ ರೇವಣ್ಣ ಪುತ್ರ ಹಾಸನದಿಂದ ಲೋಕಸಭಾ ಚುನಾವಣೆಗೆ ನಿಲ್ಲೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಪ್ರಜ್ವಲ್‍ಗೆ ಹಾಸನ ಕ್ಷೇತ್ರ ಸಿಗುತ್ತಿದ್ದಂತೆ ನಿಖಿಲ್ ಕುಮಾರಸ್ವಾಮಿಗೆ ಯಾವ ಕ್ಷೇತ್ರ ಎಂಬ ಚರ್ಚೆ ಆರಂಭವಾಗಿದೆ. 

ನಿಖಿಲ್ ಕುಮಾರಸ್ವಾಮಿ, ಸಿಎಂ ಕುಮಾರಸ್ವಾಮಿಯವರ ಏಕೈಕ ಪುತ್ರ. ತಂದೆಯ ರಾಜಕೀಯ ನಡೆಗಳಲ್ಲಿ ಸದಾ ಜೊತೆ ನಿಂತಿರುವ ನಿಖಿಲ್ ಕುಮಾರಸ್ವಾಮಿ ಸಧ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಬಹುನೀರಿಕ್ಷಿತ ಚಿತ್ರ ಜಾಗ್ವಾರ್ ಕನ್ನಡದಲ್ಲಿ ಅಂತಹ ಮೋಡಿಯನ್ನೇನು ಮಾಡಲಿಲ್ಲ.  ಇನ್ನೊಂದು ಚಿತ್ರ ಸೀತಾರಾಮ ಕಲ್ಯಾಣ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ ಇಂದಲ್ಲ ನಾಳೆ ನಿಖಿಲ್ ಕುಮಾರಸ್ವಾಮಿ ಚಿತ್ರರಂಗ ತೊರೆದು ರಾಜಕೀಯ ಪ್ರವೇಶ ಮಾಡೊದು ಕೂಡ ನಿಶ್ಚಿತ. ಹೀಗಾಗಿ ನಿಖಿಲ್‍ಗಾಗಿ ದೇವೆಗೌಡರು ಯಾವ ಕ್ಷೇತ್ರ ನೀಡಬಹುದು. ನಿಖಿಲ್ ರಾಜಕೀಯ ಪ್ರವೇಶಕ್ಕೆ ದೇವೆಗೌಡರು ಹೇಗೆ ಸ್ಪಂದಿಸಬಹುದೆಂಬ ಚರ್ಚೆಗಳು ಆರಂಭವಾಗಿದೆ. 

ಇಬ್ಬರು ಗಂಡು ಮಕ್ಕಳಾದ ಎಚ್.ಡಿ.ರೇವಣ್ಣ ಹಾಗೂ ಎಚ್.ಡಿ.ಕುಮಾರಸ್ವಾಮಿಗೆ ರಾಜಕೀಯ ನೆಲೆ ಕಲ್ಪಿಸಿದ ದೇವೆಗೌಡರು, ಮೊಮ್ಮಕ್ಕಳಿಗೂ ರಾಜಕೀಯ ನೆಲೆ ಒದಗಿಸೋದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲಿ ಈಗಾಗಲೆ ಪ್ರಜ್ವಲ್‍ಗೆ ಸ್ಥಳದ ಆಯ್ಕೆಯಾಗಿದೆ. ಸೋಲಿನ ಸಾಧ್ಯತೆಯೇ ಇಲ್ಲದ ಜೆಡಿಎಸ್ ಗಟ್ಟಿನೆಲವನ್ನು ಮೊಮ್ಮಗನಿಗಾಗಿ ಗೌಡರು ಕಾಯ್ದಿರಿಸಿದ್ದಾರೆ. ಇನ್ನುಳಿದವನು ನಿಖಿಲ್ ಮಾತ್ರ. ದೇವೆಗೌಡರಿಗೆ ಇನ್ನು ಹಲವು ಮೊಮ್ಮಕ್ಕಳಿದ್ದರೂ ಅವರ್ಯಾರು ರಾಜಕೀಯ ಕ್ಷೇತ್ರದತ್ತ ಇನ್ನೂ ಮುಖಮಾಡಿಲ್ಲ. 
ಹೀಗಾಗಿ ಈಗ ನಿಖಿಲ್ ಕುಮಾರ್ ಸ್ವಾಮಿಗೆ ದೇವೆಗೌಡರು ರಾಜಕೀಯ ಭವಿಷ್ಯ ಬರೆಯಬೇಕಿದ್ದು, ಮಂಡ್ಯದಿಂದ ನಿಖಿಲ್ ಮುಂದಿನ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯುತ್ತಾರೆ ಎನ್ನಲಾಗಿದೆ. ಆದರೆ ಮೂಲಗಳ ಪ್ರಕಾರ ಈ ಲೋಕಸಭಾ ಚುನಾವಣೆಯಲ್ಲಿಯೇ ಇಬ್ಬರೂ ಮೊಮ್ಮಕ್ಕಳನ್ನು  ಕಣಕ್ಕಿಳಿಸಲು ದೇವೆಗೌಡರು ಸಿದ್ಧತೆ ನಡೆಸಿದ್ದು, ಯಾವ ಕ್ಷೇತ್ರದಲ್ಲಿ ಎಂಬುದು  ಕಾಂಗ್ರೆಸ್  ಜೊತೆಗಿನ ಮೈತ್ರಿ ಮಾತುಕತೆಯ ಬಳಿಕ ಖಚಿತವಾಗಲಿದೆ. ಒಟ್ಟಿನಲ್ಲಿ ಈಗ ನಿಖಿಲ್ ಪಟ್ಟಾಭಿಷೇಕದ ಮಾತುಗಳು ಕೇಳಿಬಂದಿದ್ದು, ಪ್ರಜ್ವಲ್‍ಗಾಗಿ ತಮ್ಮ ಸ್ವಕ್ಷೇತ್ರವನ್ನೇ ಬಿಟ್ಟು ಕೊಡುವ ಮೂಲಕ ವಂಶ ಪ್ರೇಮ ಮೆರೆದ ದೇವೆಗೌಡರ ನಿಖಿಲ್‍ಗೆ ಯಾವಾಗ ಮತ್ತು ಯಾವ ಪಟ್ಟ ಕಟ್ತಾರೆ ಅನ್ನೋದು ಸಧ್ಯದ ಕುತೂಹಲ. 


ಸಂಬಂಧಿತ ಟ್ಯಾಗ್ಗಳು

#Prajwal Revanna #Nikhil Kumarswami #Hasan Mp Candidate #When?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ