ಕಾಂಗ್ರೆಸ್‍ಗೆ ಆಕ್ಸಿಡೆಂಟ್ ಶಾಕ್...!

 Accidental shock to Congress ...!

01-01-2019

ಲೋಕಸಭಾ ಚುನಾವಣೆಗೆ ಪಕ್ಷಗಳು ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಬಾಲಿವುಡ್‍ನಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿರುವ ಚಿತ್ರವೊಂದು ಕಾಂಗ್ರೆಸ್‍ನ  ನಿದ್ದೆಗೆಡಿಸಿದೆ. "ದ್ ಅಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್" ಎಂಬ ಚಿತ್ರ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ್ದು, ಚಿತ್ರದ ಟ್ರೇಲರ್ ಕಾಂಗ್ರೆಸ್ ಪಕ್ಷವನ್ನು ಅವಹೇಳನಕ್ಕೆ ಗುರಿ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. 

ಈ ದೇಶವನ್ನು 10 ವರ್ಷಗಳ ಕಾಲ ಆಳಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಮೇಲೆ ಯಾರ ಹಿಡಿತವಿತ್ತು. ಯಾರು ಅವರನ್ನು ನಿಯಂತ್ರಿಸುತ್ತಿದ್ದರು. ಅವರ ಮೇಲಿದ್ದ ಒತ್ತಡಗಳೇನು? ಎಂಬ ಅಂಶಗಳನ್ನು ಬಿಚ್ಚಿಡುವ ಚಿತ್ರವೇ "ದ್ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್". ಇದೀಗ ಈ ಸಿನಿಮಾ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾದ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಬರೆದ  ಪುಸ್ತಕ ಆಧರಿಸಿ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಚಿತ್ರವನ್ನು ವಿಜಯ್ ರತ್ನಾಕರ್ ಗುಟ್ಟೆ ನಿರ್ದೇಶಿಸಿದ್ದು,  ಸಂಜಯ್ ಬಾರು ಪುಸ್ತಕ ಆಧರಿಸಿ ಮಯಂಕ್ ತೇವಾರಿ ಚಿತ್ರಕತೆ ಸಿದ್ಧಪಡಿಸಿದ್ದಾರೆ. ಮನಮೋಹನ್ ಸಿಂಗ್ ಪಾತ್ರದಲ್ಲಿ  ಹಿರಿಯ ನಟ ಅನುಪಮ ಖೇರ್ ಕಾಣಿಸಿಕೊಂಡಿದ್ದು, ಮಾಧ್ಯಮ ಸಲಹೆಗಾರ ಸಂಜಯ್ ಬಾರು ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದಾರೆ. 

"ದ್ ಆಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್ ಚಿತ್ರ ಸಾಕ್ಷ್ಯಚಿತ್ರದ ರೀತಿ ಮೂಡಿ ಬರುವ ಸಾಧ್ಯತೆ ಇದ್ದು, ಸಾಕ್ಷ್ಯಚಿತ್ರದಂತೆ ಸಿದ್ಧವಾದಲ್ಲಿ ಯಶಸ್ವಿಯಾಗೋದು ಕಷ್ಟ ಎನ್ನಲಾಗುತ್ತಿದೆ. ಇನ್ನು ಈ ಚಿತ್ರದಲ್ಲಿ ಮನಮೋಹನ್ ಸಿಂಗ್ ಪಾತ್ರವನ್ನು ಅತ್ಯಂತ ಅಸಹಾಯಕರಂತೆ ಚಿತ್ರಿಸಲಾಗಿದ್ದು, ಅನುಪಮ ಖೇರ್ ಅಕ್ಷರಷಃ ಕಾರ್ಟೂನನಂತೆ ಪಾತ್ರ ನಿರ್ವಹಿಸಿ ಮನಮೋಹನ್ ಸಿಂಗ್ ಎದುರಿಸಿದ ಸಂದಿಗ್ಧಗಳನ್ನು ಪ್ರೇಕ್ಷಕರ ಮುಂದೆ ಇಡುವ ಪ್ರಯತ್ನ ಮಾಡಿದ್ದಾರೆ. ಇನ್ನು ಚುನಾವಣೆಯ ಎದುರಿನಲ್ಲಿ ಈ ಚಿತ್ರವನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಅವಮಾನ ಮಾಡುವ ಉದ್ದೇಶದಿಂದಲೆ ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. 

ಆದರೆ ಈ ಹಿಂದೆಯೂ ಕೂಡ ಹಲವು ಚುನಾವಣೆ ವೇಳೆ ಇಂತಹ ಚಿತ್ರಗಳು ತೆರೆಯ ಮೇಲೆ ಬಂದಿದ್ದರೂ ಯಾವುದೆ ಪಕ್ಷಗಳ ಮೇಲಾಗಲಿ ಮತದಾರರ ಮೇಲಾಗಲಿ ಪ್ರಭಾವ ಬೀರುವಲ್ಲಿ ಸಫಲವಾಗಿಲ್ಲ. ಆದರೂ ತಕ್ಕಮಟ್ಟಿಗೆ ಇಮೇಜ್ ಬದಲಾಯಿಸುವ ಪ್ರಯತ್ನ ನಡೆಯುತ್ತದೆ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ. ಆದರೆ ಕಾಂಗ್ರೆಸ್ ಬಲಿಷ್ಠ ಶಕ್ತಿಯಾಗಿರುವ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರ ಅಭಿಮಾನಿಗಳ ಮೇಲೆ ಈ ಚಿತ್ರ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ. ಅಥವಾ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಈ ಚಿತ್ರ ನೋಡಿ ಪಕ್ಷವನ್ನು ದ್ವೇಷಿಸುವುದಾಗಲಿ, ಪಕ್ಷವನ್ನು ಬಿಟ್ಟು  ಹೊರಬರೋದಿಲ್ಲ. ಆದರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಜಿಯವರನ್ನು ಕಿಂಗ್ ಮೇಕರ್‍ಗಳಾಗಿ ತೋರಿಸಿರುವುದು ಬಿಜೆಪಿಗರಿಗೆ ಟೀಕಾಸ್ತ್ರ ಒದಗಿಸಿದಂತಾಗಿದೆ. ಇನ್ನು ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಬಿಜೆಪಿ ಪ್ರೇರಿತ ಪ್ರಯತ್ನ ಎಂದು ವ್ಯಾಖ್ಯಾನಿಸಿದ್ದಾರೆ. ಚಿತ್ರ ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆಗೊಳಗಾಗಲಿದ್ದು, ಬಿಡುಗಡೆಗೆ ವಿರೋಧ ವ್ಯಕ್ತವಾಗುವ ಎಲ್ಲ ಸಾಧ್ಯತೆಗಳಿವೆ. 


ಸಂಬಂಧಿತ ಟ್ಯಾಗ್ಗಳು

# Accidental # To Congress # shock #Movie


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ