ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ...!

 Siddaganga Swamiji  health Recovery

01-01-2019

ಕಳೆದ ಎರಡು ದಿನಗಳಿಂದ ಶ್ವಾಸಕೋಶದ ಸೋಂಕಿನಿಂದ ಅನಾರೋಗ್ಯಕ್ಕೆ ಈಡಾಗಿದ್ದ ತುಮಕೂರು ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇಂದು ಮುಂಜಾನೆ ಮತ್ತೊಮ್ಮೆ ರಕ್ತ ಪರೀಕ್ಷೆ ನಡೆದಿದ್ದು, ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದು ಅವರ ಚಿಕಿತ್ಸೆಯ ನೇತೃತ್ವ ವಹಿಸಿರುವ ವೈದ್ಯಾಧಿಕಾರಿ ಡಾ.ಪರಮೇಶ್ ಹೇಳಿದ್ದಾರೆ. 

ನಿನ್ನೆ ಶ್ರೀಗಳು ಆಹಾರ ಸ್ವೀಕರಿಸಿರಲಿಲ್ಲ. ಆದರೆ ಇಂದು ಬಾಯಿ ಮೂಲಕ ಶ್ರೀಗಳು ದ್ರವಾಹಾರ ಸೇವಿಸಿದ್ದು, ಚಿಕ್ಕದಾಗಿ ಇಷ್ಟಲಿಂಗ ಪೂಜೆ ಕೂಡ ನೆರವೇರಿಸಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಿಶಕ್ತಿಯಿಂದ ಬಳಲುತ್ತಿದ್ದ ಶ್ರೀಗಳು ಚೇತರಿಸಿಕೊಂಡಿದ್ದು, ಒಂದು ವಾರದಲ್ಲಿ ಆರೋಗ್ಯ ಸಂಪೂರ್ಣ ಸುಧಾರಿಸುವ ವಿಶ್ವಾಸ ವ್ಯಕ್ತವಾಗಿದೆ. ರೇಲಾ ಆಸ್ಪತ್ರೆಯಿಂದಲೂ ವೈದ್ಯರ ತಂಡ ಆಗಮಿಸಿದ್ದು, ಶ್ರೀಗಳ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದೆ. ಶ್ರೀಗಳ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಅದನ್ನು ಎರಡು ದಿನಕ್ಕೊಮ್ಮೆ ತೆಗೆಯಲಾಗುತ್ತಿದೆ. ಇದರಿಂದ ಶ್ವಾಸಕೋಶದ ಸೋಂಕು ಉಂಟಾಗಿದ್ದು, ಆಂಟ್ಯಿಬಯಾಟಿಕ್ ನೀಡಲಾಗುತ್ತಿದ್ದು, ಪಲ್ಸ್ ರೇಟ್ ಸೇರಿದಂತೆ ಉಳಿದೆಲ್ಲ ಆರೋಗ್ಯ ಸ್ಥಿತಿಗಳು ನಾರ್ಮಲ್ ಆಗಿದೆ ಎಂದು ವೈದ್ಯರ ತಂಡ ಮಾಹಿತಿ ನೀಡಿದೆ. 

ಇನ್ನು ಸ್ವಾಮೀಜಿಗಳ ಅನಾರೋಗ್ಯದ ಸುದ್ದಿ ತಿಳಿದು ಪೇಜಾವರ ಶ್ರೀಗಳು ಮಠಕ್ಕೆ ಭೇಟಿ ನೀಡಿದ್ದು, ಶ್ರೀಗಳನ್ನು ನೋಡಿ ಹಿಂತಿರುಗಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪೇಜಾವರಶ್ರೀಗಳು, ವೈದ್ಯರು ಯಾವುದೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ನಾನು ಅವರನ್ನು ನೋಡಿ ಬಂದಿದ್ದೇನೆ ಎಂದರು.
ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಠಕ್ಕೆ ಭೇಟಿ ನೀಡಿದ್ದು, ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಶ್ರೀಗಳು ದ್ರವಾಹಾರ ಸೇವಿಸಿದ್ದಾರೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡ ಮಠಕ್ಕೆ ಭೇಟಿ ನೀಡಿದ್ದು, ಶ್ರೀಗಳ ಆರೋಗ್ಯದ ಕುರಿತ ಮಾಹಿತಿ ಪಡೆದುಕೊಂಡಿದ್ದಾರೆ. 
ಇನ್ನು ಮಾಧ್ಯಮಗಳ ಊಹಾಪೋಹಗಳಿಗೆ ಕಿವಿಗೊಡಬೇಡಿ. ಶ್ರೀಗಳು ಆರೋಗ್ಯವಾಗಿದ್ದಾರೆ. ನಾಳೆಯಿಂದ ನಾವೇ ಬೆಳಿಗ್ಗೆ ಮತ್ತು ಮಧ್ಯಾಹ್ನ ಶ್ರೀಗಳ ಆರೋಗ್ಯದ ಮಾಹಿತಿಯನ್ನು ಮಾಧ್ಯಮಗಳಿಗೆ  ನೀಡುತ್ತೇವೆ. ಭಕ್ತರು ಆತಂಕಿತರಾಗಿ ಮಠದತ್ತ ಬರುವುದು ಬೇಡ. ಶ್ರೀಗಳು ಒಂದು ವಾರದಲ್ಲಿ ಸಂಪೂರ್ಣ ಚೇತರಿಸಿಕೊಳ್ಳುತ್ತಾರೆ ಎಂದು ಕಿರಿಯ ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Siddaganga Swamiji #Recovery #Health #Doctor Said


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ