ಕೊಡೋ ನಾಕಾಣೆಗೂ ಆಣೆ 

 swear for Retail Money

29-12-2018

ರಾಜ್ಯದ  ಮುಖ್ಯಮಂತ್ರಿಯಾಗಿರೋ ಎಚ್.ಡಿ.ಕುಮಾರಸ್ವಾಮಿಯವರು  ಉತ್ತಮ ಆಡಳಿತದಿಂದ ಸುದ್ದಿಯಾಗಿದ್ದಕ್ಕಿಂತ ತಮ್ಮ ಬೇಜವ್ದಾರಿ ಮಾತುಗಳಿಂದ ಸುದ್ದಿಯಾಗಿದ್ದೆ ಜಾಸ್ತಿ. ಇದೀಗ ಮತ್ತೊಮ್ಮೆ ಕರ್ನಾಟಕದಲ್ಲಿ ಆಣೆ-ಪ್ರಮಾಣಗಳ ರಾಜಕೀಯಕ್ಕೆ ಕುಮಾರಸ್ವಾಮಿ ಮರುಜೀವ ನೀಡಿದ್ದಾರೆ. ಚುನಾವಣೆ ಜನರಿಗೆ ನೀಡಿದ್ದ ಸಾಲಮನ್ನಾ ಭರವಸೆಯನ್ನು ಈಡೇರಿಸುವುದಕ್ಕಾಗಿ ಆಣೆಪ್ರಮಾಣಕ್ಕೆ ಜೋತು ಬಿದ್ದಿರುವ  ಕುಮಾರಸ್ವಾಮಿ ರೈತರ ಸಾಲಮನ್ನಾ ಪ್ರಮಾಣಪತ್ರ ವಿತರಣೆ  ವೇಳೆ ತಮ್ಮ ಸುಪುತ್ರನ ಮೇಲೆ ಆಣೆ ಮಾಡಿ ತಮ್ಮ ಪುತ್ರಪ್ರೇಮ ಮೆರೆದಿದ್ದಾರೆ.  
ಈಗಾಗಲೆ ಸಾಲ ಮನ್ನಾ ಘೋಷಣೆ ಮಾಡಿರುವ ಕುಮಾರಸ್ವಾಮಿ ಅದನ್ನೆ ನೂರಾರು ಬಾರಿ ಭಾವನಾತ್ಮಕವಾಗಿ ಪುನರುಚ್ಛಿಸುತ್ತಲೆ ಇದ್ದಾರೆ. ಈ ನಿನ್ನೆ  ಕಲಾಭವನದಲ್ಲಿ ರೈತರಿಗೆ ಸಾಂಕೇತಿಕವಾಗಿ ಋಣಮುಕ್ತ ಪತ್ರ ವಿತರಿಸಲು ಬಂದಿದ್ದ ಸಿಎಂ, ರೈತರನ್ನು ಉದ್ದೇಶಿಸಿ ಮಾತನಾಡುತ್ತಲೆ " ನನ್ನ ಮಗನ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾನು ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ" ಎಂದರು. 

ಸಿಎಂ ಕುಮಾರಸ್ವಾಮಿಯವರ ಈ ನುಡಿಗಳು ಮತ್ತೊಮ್ಮೆ ಆಣೆ-ಪ್ರಮಾಣದ ಚರ್ಚೆಯನ್ನು ಹುಟ್ಟುಹಾಕಿದೆ. ಅಷ್ಟೇ ಅಲ್ಲ, ಆಡಳಿತಾತ್ಮಕ ಹಾಗೂ ರಾಜಕೀಯದ ವಿಚಾರವಾಗಿರುವ ರೈತರ ಸಾಲಮನ್ನಾ ಘೋಷಣೆಗೂ ಕುಮಾರಸ್ವಾಮಿಯವರ ಪುತ್ರನಿಗೂ ಏನು ಸಂಬಂಧ. ಕುಮಾರಸ್ವಾಮಿ ಯಾಕೆ ಹೀಗೆ  ಮಾತನಾಡುತ್ತಾರೆ. ಇದರಲ್ಲಿ ಆಣೆ ಮಾಡುವ ಪ್ರಶ್ನೆ ಏನಿದೆ ಎಂಬುದು ಜನಸಾಮಾನ್ಯ ಪ್ರಶ್ನೆ.

ಈ ಹಿಂದೆ 2011 ರಲ್ಲಿ ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಯಡಿಯೂರಪ್ಪನವರು ಲೆಹರ್ ಸಿಂಗ್ ಮೂಲಕ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಯಡಿಯೂರಪ್ಪ ನಾನು ಅಂತಹ ಕೆಲಸವನ್ನೇನು ಮಾಡಿಲ್ಲ. ಬೇಕಿದ್ದರೆ ಬನ್ನಿ ಧರ್ಮಸ್ಥಳದ ಮಂಜುನಾಥನ ಸನ್ನಿಧಾನದಲ್ಲಿ ಪ್ರಮಾಣ ಮಾಡೋಣ ಎಂದಿದ್ದರು. ಕೊನೆಗೆ ಈ ಆಣೆ ಪ್ರಮಾಣದ ಪರ್ವ ದೆಹಲಿ ಅಂಗಳವನ್ನು ತಲುಪಿತ್ತು. ಅಲ್ಲದೆ ಕೊನೆಗೂ ಯಾರು ಆಣೆ ಪ್ರಮಾಣ ಮಾಡಲು ತೆರಳಿರಲಿಲ್ಲ. 

ಇದೀಗ ಮತ್ತೊಮ್ಮೆ ಆಣೆ-ಪುರಾಣಗಳ ರಾಜಕೀಯಕ್ಕೆ ಕುಮಾರಸ್ವಾಮಿ ಮುನ್ನುಡಿ ಬರೆದಿದ್ದಾರೆ. ಬಿಜೆಪಿ ಪ್ರಕಾರ  ಸಾಲಮನ್ನಾ ಕುಮಾರಸ್ವಾಮಿಯವರು ಚುನಾವಣೆಗೆ ಬಳಸಿಕೊಂಡ ಕಣ್ಕಟ್ಟು ಅಷ್ಟೆ. ಕೇವಲ ಕಣ್ಣೊರೆಸುವ ತಂತ್ರ ಎಂದಿದೆ. ಇದಕ್ಕೆ ಉತ್ತರ ನೀಡುವ ಭರದಲ್ಲಿ ಸಿಎಂ ಈ ರೀತಿ ಹೇಳಿದ್ದಾರೆ. ಇನ್ನು ಈಗಾಗಲೆ ಇಂತಹ ಹಲವಾರು ಎಡಬಿಡಂಗಿ ಹೇಳಿಕೆಗಳನ್ನು ನೀಡಿ ಬಳಿಕ ಅದನ್ನು ತಿಪ್ಪೆಸಾರಿಸಿ ಸರಿಪಡಿಸುವಲ್ಲಿ ನಿಷ್ಠಾತರಾಗಿರುವ ಕುಮಾರಸ್ವಾಮಿ ಸಧ್ಯದಲ್ಲೆ ಇದಕ್ಕೂ ಒಂದು ತಿದ್ದುಪಡಿ ಮಾಡಿ ನಾನು ಭಾವುಕನಾಗಿ ಹೀಗೆ ಹೇಳಿದೆ  ಅಂದ್ರೂ ಅಚ್ಚರಿ ಏನಿಲ್ಲ ಅಂತಿದ್ದಾರೆ ಜನರು. 


ಸಂಬಂಧಿತ ಟ್ಯಾಗ್ಗಳು

# CM kumarswamy # swear #Nikhil kumarswamy #Retail Money


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ