ಸಂಪುಟ ವಿಸ್ತರಣೆ ಆಯ್ತು ಈಗ ಖಾತೆ ಕಿತ್ತಾಟ..!

In Congres Now Fight For Ministry

29-12-2018

 

ರಾಜ್ಯದಲ್ಲಿ ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದ ಕಾಂಗ್ರೆಸ್ ಪಾಲಿಗೆ ಸಂಕಷ್ಟ ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ. ಮೊನ್ನೆ ಮೊನ್ನೆಯಷ್ಟೇ ಹಗ್ಗದ ಮೇಲಿನ ನಡಿಗೆಯಂತೆ ಸಂಪುಟ ವಿಸ್ತರಣೆ ಮಾಡಿದ ಕಾಂಗ್ರೆಸ್ ಈಗ ರಮೇಶ್ ಜಾರಕಿಹೊಳಿ ಮನವೊಲಿಸಲು ಸರ್ಕಸ್ ನಡೆಸುತ್ತಿರುವ ಬೆನ್ನಲ್ಲೇ ಸಂಪುಟದಲ್ಲಿ ಖಾತೆ ಬದಲಾವಣೆಯ ಸಂಘರ್ಷ ಆರಂಭಗೊಂಡಿದೆ. ಸಿದ್ದರಾಮಯ್ಯ ಆಪ್ತರಾಗಿರುವ ಕೆ.ಜೆ.ಜಾರ್ಜ್ ಹಾಗೂ  ಪ್ರಭಾವಿ ಸಚಿವ ಕೃಷ್ಣ ಭೈರೆಗೌಡರ ಖಾತೆಗಳ ಮೇಲೆ ಕಣ್ಣಿಟ್ಟಿರು ಕಾಂಗ್ರೆಸ್ಸಿಗರೇ ಅವರಿಂದ ಖಾತೆಗಳನ್ನು ಕಿತ್ತುಕೊಳ್ಳಲು ಪ್ರಯತ್ನ ಆರಂಭಿಸಿದ್ದು, ಕಾಂಗ್ರೆಸ್ ವರಿಷ್ಠರ ಪಾಲಿಗೆ ಇದು ತಲೆನೋವಾಗಿ ಪರಿಣಮಿಸಿದೆ.

 

  ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂತ್ರಿಮಂಡಲದಲ್ಲೂ ಪ್ರಭಾವಿ ಖಾತೆ ಹೊಂದಿದ್ದು 5 ವರ್ಷಗಳ ಕಾಲ ಸಚಿವರಾಗಿದ್ದ ಕೃಷ್ಣಭೈರೆಗೌಡರಿಗೆ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲೂ ಗ್ರಾಮೀಣಾಭಿವೃದ್ಧಿಯಂತಹ  ಮಹತ್ವದ ಖಾತೆ ಸಿಕ್ಕಿರೋದು ಹಲವರ ಕಣ್ಣು ಕೆಂಪಗಾಗಿಸಿದೆ. ಭವಿಷ್ಯದ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಕೃಷ್ಣಭೈರೆಗೌಡರು ಸ್ವಚ್ಛ ಆಡಳಿತ ನೀಡುವ ಜೊತೆಗೆ ಉತ್ತಮ ಹೆಸರುಗಳಿಸಿಕೊಂಡು ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವುದು ಅನೇಕ ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿದೆ.   


   ಸಧ್ಯಕ್ಕೆ ಕೃಷ್ಣ ಭೈರೆಗೌಡರ ತೆಕ್ಕೆಯಲ್ಲಿ ಗ್ರಾಮೀಣಾಭಿವೃದ್ಧಿ ಖಾತೆ ಇದ್ದು ಅದರೊಂದಿಗೆ ಸಂಸದೀಯ ವ್ಯೆವಹಾರ ಮತ್ತು ಕಾನೂನು ಖಾತೆಯೂ ಇದೆ. ಈ ಸಂಸದೀಯ ವ್ಯೆವಹಾರ ಮತ್ತು ಕಾನೂನು ಖಾತೆ ಕೆಲಸಕ್ಕೆ ಬಾರದ ಮತ್ತು ಆದಾಯ ತರದ ಇಲಾಖೆಯಾಗಿದ್ದು  ಯಾರೂ ಕೂಡ ಪಡೆಯಲು ಸಿದ್ದರಿಲ್ಲ. ಅದಲ್ಲದೆ ಅದೊಂದು ತಲೆನೋವಿನ ಇಲಾಖೆ ಎಂಬ ಅಭಿಪ್ರಾಯವೂ ಇದೆ. ಅದನ್ನು ಅವರಿಗೆ ಕೃಷ್ಣ ಭೈರೆಗೌಡರ ಕೈಯಲ್ಲೇ ಉಳಿಸಿ ಅವರಿಂದ ಆರ್‍ಡಿಪಿಆರ್ ಇಲಾಖೆ ಪಡೆದುಕೊಳ್ಳುವ ಹುನ್ನಾರ ಆರಂಭವಾಗಿದೆ. ಹಾಗಿದ್ದು ಏನಾದರೂ ಉತ್ತಮ ಇಲಾಖೆಯನ್ನೇ ಕೊಡಬೇಕೆಂದಿದ್ದರೆ ಇನ್ನೊಂದು ಲಾಭವಿಲ್ಲದ ಇಲಾಖೆಯಾಗಿರುವ ಗೃಹ ಇಲಾಖೆಯನ್ನೇ ಕೊಡಬೇಕೆಂದು ಚಿಂತನೆ ನಡೆದಿದೆ.  ಬಹುತೇಕ ಸಿಎಂ ಮುಷ್ಠಿಯಲ್ಲೇ ಇರುವ ಗೃಹ ಇಲಾಖೆಯನ್ನು ಕೃಷ್ಣಭೈರೆಗೌಡರಿಗೆ ನೀಡಿದರೆ ಅವರ ಪ್ರಭಾವವನ್ನು ಬಹಳಷ್ಟು ಕಡಿಮೆ ಮಾಡಬಹುದೆಂಬ ಲೆಕ್ಕಾಚಾರವೂ ಇದೆ ಎಂಬ ಮಾಹಿತಿ ಸೂಪರ್ ಸುದ್ದಿಗೆ ಲಭ್ಯವಾಗಿದೆ. 

   ಇನ್ನು ಸಿದ್ದರಾಮಯ್ಯ ತಮ್ಮ ಆಪ್ತರಾಗಿದ್ದ ಕೆ.ಜೆ.ಜಾರ್ಜ್‍ರವರಿಗೆ ಶತಾಯ-ಗತಾಯ ಬೆಂಗಳೂರು ಅಭಿವೃದ್ಧಿ ಖಾತೆ ಕೊಡಿಸಲೇಬೇಕೆಂದು ಪಣ ತೊಟ್ಟಿದ್ದರು. ಆದರೆ ಅದು ಡಿಸಿಎಂ ಪರಮೇಶ್ವರ್ ಪಾಲಾಗಿ ಬಿಟ್ಟಿತ್ತು. ಇನ್ನು ಕೆ.ಜೆ.ಜಾರ್ಜ್ ಬಳಿ ಈಗ ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿಬಿಟಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಇರುವುದರಿಂದ ಕಾಂಗ್ರೆಸ್ ನಾಯಕರು ಜಾರ್ಜ್ ಮೇಲೆ ವಿಪರೀತ ಅಸಮಧಾನ ಹೊಂದಿದ್ದು, ಒಂದು ಖಾತೆಯನ್ನಾದರೂ ಕಿತ್ತುಕೊಳ್ಳೋಣ ಎಂಬ ಲೆಕ್ಕಾಚಾರದಲ್ಲಿ ಪ್ರಯತ್ನ ಆರಂಭಿಸಿದ್ದಾರೆ. 

 

ಇನ್ನು ಒಳಗೊಳಗೆ ಡಿ.ಕೆ.ಶಿವಕುಮಾರ್ ಮೇಲೆ ಉರಿ ಕಾರುತ್ತಿರುವ ಸಚಿವ ಎಂ.ಬಿ. ಪಾಟೀಲ್ ಕೊನೆಗೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದು ಆದರೆ ತಮಗೆ ಕೊಡಬೇಕೆಂದಿರುವ ಗೃಹ ಇಲಾಕೆ ಬಿಟ್ಟು ಡಿಕೆಶಿ ಬಳಿ ಇರುವ ಜಲಸಂಪನ್ಮೂಲ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. ಯಾವುದೇ ಆದಾಯ ತಂದುಕೊಡದ ಹಾಗೂ ತಲೆನೋವಾಗಿರುವ ಈ ಗೃಹ ಇಲಾಖೆ ಯಾರಿಗೂ ಬೇಡವಾಗಿದೆ. ಒಟ್ಟಿನಲ್ಲಿ ಸಂಪುಟ ವಿಸ್ತರಣೆ ಸಂಕಟ ಮುಗಿದರೂ ಖಾತೆ ಹಂಚಿಕೆ ಸಮಸ್ಯೆ ಸಧ್ಯಕ್ಕೆ ಮುಗಿಯುವ ಲಕ್ಷಣವೇ ಗೋಚರಿಸುತ್ತಿಲ್ಲ. 


ಸಂಬಂಧಿತ ಟ್ಯಾಗ್ಗಳು

#Congres # Fight #Karnataka # For ministry


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ