ಖಡಕ್ ಐಪಿಎಸ್ ಆಫೀಸರ್ ಮಧುಕರ್ ಶೆಟ್ಟಿ ವಿಧಿವಶ

IPS Officer Madhukar Shetty dies in hospital

29-12-2018


ಎಚ್1ಎನ್1ನಿಂದ ಬಳಲಿ ಹೈದ್ರಾಬಾದ್‍ನ ಕಾಂಟಿನೆಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ(47) ವಿಧಿವಶರಾಗಿದ್ದಾರೆ. ಕಳೆದ ಒಂಧು ವಾರದಿಂದ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಧುಕರ್ ಶೆಟ್ಟಿ ನಿನ್ನೆ ಸಂಜೆ 8.15 ರ ವೇಳೆಯಲ್ಲಿ ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ, ಸಾರ್ವಜನಿಕರು ಸಂತಾಪ ಸೂಚಿಸಿದ್ದು, ಇಂದು ಸಂಜೆ ಮಂಗಳೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. 

ಎಚ್1ಎನ್1 ನಿಂದ ಬಳಲುತ್ತಿದ್ದ ಮಧುಕರ್ ಶೆಟ್ಟಿಯವರಿಗೆ ಶ್ವಾಸಕೋಶದ ಸೋಂಕು ಕೂಡ ಕಾಣಿಸಿಕೊಂಡಿತ್ತು. ಅಲ್ಲದೇ ಹೃದಯದ ಕವಾಟಗಳಿಗೆ ಹಾನಿಯಾಗಿದ್ದರಿಂದ ರಕ್ತಪರಿಚಲನೆಯ ಸಮಸ್ಯೆಯನ್ನು ಅವರು ಎದುರಿಸುತ್ತಿದ್ದರು.ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರನ್ನು ಕೃತಕ ಉಸಿರಾಟದಲ್ಲಿ ಇಡಲಾಗಿತ್ತು. ಬಳಿಕ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿದ್ದರೂ ಅವರು ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ವಿಮಾನದಲ್ಲಿ ಬೆಂಗಳೂರಿಗೆ ತರಲಾಗುತ್ತಿದ್ದು, ಮಧ್ಯಾಹ್ನ ಯಲಹಂಕದ ಎಪಿಟಿಎಸ್ ಕ್ಯಾಂಪಸ್‍ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಸಂಜೆ ಮಂಗಳೂರಿಗೆ ವಿಮಾನದಲ್ಲಿ ಕೊಂಡೊಯ್ದು ಅಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. 

ಕರ್ನಾಟಕದ ಉಡುಪಿ ಮೂಲದ ಮಧುಕರ್ ಶೆಟ್ಟಿ ರಾಜ್ಯದ ವಿವಿಧ ಭಾಗಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ತಮ್ಮ ಖಡಕ್ ಹಾಗೂ ಪ್ರಾಮಾಣಿಕ ಕಾರ್ಯವೈಖರಿಯಿಂದ ಮನೆಮಾತಾಗಿದ್ದರು. ಲೋಕಾಯುಕ್ತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಮಧುಕರ್ ಶೆಟ್ಟಿ, ಹಲವು ಪ್ರಮುಖ ರೇಡ್‍ಗಳನ್ನು ಸಂಘಟಿಸಿ ಭ್ರಷ್ಟರಿಗೆ ಆತಂಕ ಮೂಡಿಸಿದ್ದರು. 

ವರ್ಷದ ಹಿಂದೆ ರಾಜ್ಯಕ್ಕೆ ವಾಪಸ್ಸಾದ ಮಧುಕರ ಶೆಟ್ಟಿಯವರಿಗೆ ರಾಜ್ಯ ಸರ್ಕಾರ ಅಂತಹ ಒಳ್ಳೆಯ ಹುದ್ದೆಯನ್ನೇನು ನೀಡಿರಲಿಲ್ಲ. ಐಜಿಪಿಯಾಗಿ ಬಡ್ತಿ ಪಡೆದ ಬಳಿಕ ಕೆಲಕಾಲ ಪೊಲೀಸ್ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಕೆಲಸ ನಿರ್ವಹಿಸಿ ಬಳಿಕ ಕೇಂದ್ರದ ಸೇವೆಗೆ ತೆರಳಿದ್ದು, ಪ್ರಸ್ತುತ ಸರ್ದಾರ್ ವಲ್ಲಭಬಾಯ್  ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕರಾಗಿ ಕೆಲಸ  ನಿರ್ವಹಿಸುತ್ತಿದ್ದರು. 

 ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ್ ಅವರ ಪುತ್ರರಾಗಿರುವ ಮಧುಕರ್ ಶೆಟ್ಟಿ 1999 ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿ. ಐಪಿಎಸ್‍ಗೂ ಮುನ್ನ ಜೆಎನ್‍ಯು ಯೂನಿವರ್ಸಿಟಿಯಲ್ಲಿ ಮಧುಕರ್ ಶೆಟ್ಟಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು, ಐಪಿಎಸ್ ಅಧಿಕಾರಿಗಳು ಸಾರ್ವಜನಿಕರು ಕಂಬನಿ ಮಿಡಿದಿದ್ದು, ಅವರ ಕುಟುಂಬ ವರ್ಗಕ್ಕೆ ಈ ದುಃಖ ಸಹಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#IPS Dies in Hospital #Madhukar Shetty #karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ