2018 ರಲ್ಲೂ ಅನಕ್ಷರಸ್ಥ ಸಚಿವರು..!  

 The illiterate minister in 2018

28-12-2018

ಅನಕ್ಷರತೆ ಸಮರ್ಥ ವ್ಯಕ್ತಿತ್ವವನ್ನು ರೂಪಿಸಲಾರದು ಅನ್ನೋ ಮಾತಿದೆ. ಆದರೆ ಇಲ್ಲಿ ಅನಕ್ಷರತಸ್ಥರೆ ರಾಜ್ಯದ ಸಚಿವರಾಗಿ ಅಧಿಕಾರ ಸ್ವೀಕರಿಸಿ ಆಡಳಿತ ನಡೆಸಲು ಮುಂದಾಗಿದ್ದಾರೆ. ಬಿಜೆಪಿ ಮಣಿಸಿ ಅಧಿಕಾರ ಪಡೆದುಕೊಂಡ ಕಾಂಗ್ರೆಸ್‍ನ ಸಚಿವ ಸಂಪುಟದಲ್ಲಿ ಓದಲು,ಬರೆಯಲು ಬಾರದ ಶಾಸಕರೊಬ್ಬರು ಸಚಿವರಾಗುತ್ತಿದ್ದು, ದೇಶವೇ ಕುತೂಹಲದಿಂದ ಛತ್ತೀಸಗಡದತ್ತ ಮುಖಮಾಡಿದೆ.

ಛತ್ತೀಸಗಡ ಚುನಾವಣೆಯಲ್ಲಿ ಸತತ ಮೂರು ಅಧಿಕಾರ ಪಡೆದುಕೊಂಡಿದ್ದ ಬಿಜೆಪಿ ಮಣಿಸಿ ಕಾಂಗ್ರೆಸ್ ಗೆದ್ದಿದೆ. ಮಾತ್ರವಲ್ಲ ಕಾಂಗ್ರೆಸ್‍ನ ಭೂಪೇಶ್ ಬಾಘೇಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು ಇವರ ಸಚಿವ ಸಂಪುಟ ಮಂಗಳವಾರ ವಿಸ್ತರಣೆಗೊಂಡಿದ್ದು, ಓರ್ವ ಮಹಿಳಾ ಪ್ರತಿನಿಧಿ ಸೇರಿ ಒಟ್ಟು 9 ಶಾಸಕರೊಂದಿಗೆ ಸಂಪುಟ ವಿಸ್ತರಣೆಗೊಂಡಿದೆ. ಈ ಸಚಿವ ಸಂಪುಟದ ವಿಶೇಷತೆ ಎಂದರೇ, ಕೊಂಟಾ ವಿಧಾನಸಭಾ ಕ್ಷೇತ್ರದ ಶಾಸಕ ಕವಾಸಿ ಲಖ್ಮಾ. 

ರಾಜ್ಯಪಾಲೆ ಆನಂದಿ ಬೆನ್ ಬೋಧಿಸಿದ ಪ್ರಮಾಣವಚನವನ್ನು ಎಡಗೈನಲ್ಲಿ ಪ್ರಮಾಣ ಪತ್ರ ಇಟ್ಟುಕೊಂಡೆ ಪುನರುಚ್ಛಿಸಿದ ಕವಾಸಿ ಲಖ್ಮಾಗೆ ಒಂದಕ್ಷರವೂ ಓದಲು ಬರುವುದಿಲ್ಲ. ಬರೆಯಲು ಬರುವುದಿಲ್ಲ. ಹೀಗೆ ಒಂದಕ್ಷರವೂ ಬಾರದ  ಈ ಸಚಿವರು ಹೇಗೆ ಆಡಳಿತ ನಡೆಸುತ್ತಾರೆ ಅನ್ನೋದೆ ಜನರ ಕುತೂಹಲ. ಯಾಕೆಂದರೆ ವಿದ್ಯೆಯ ಮೊದಲ ಲಾಭವೇ ಉತ್ತಮ ನಿರ್ಧಾರ ಕೈಗೊಳ್ಳುವ ಶಕ್ತಿ. ಆದರೆ ವಿದ್ಯೆಯೇ ಇಲ್ಲದ ಈ ಸಚಿವರು ಅದ್ಹೇಗೆ ಆಡಳಿತ ನಡೆಸುತ್ತಾರೆ. ಅದ್ಹೇಗೆ ಕಾನೂನು, ಯೋಜನೆಗಳನ್ನು ರೂಪಿಸುತ್ತಾರೋ ದೇವರಿಗೇ ಗೊತ್ತು. ಲಖ್ಮಾ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅವರ ಅನಕ್ಷರತೆಯನ್ನು ಕಾರಣವಾಗಿಟ್ಟುಕೊಂಡು ಸಾಕಷ್ಟು ಟೀಕಿಸಲಾಗುತ್ತಿದೆ.


ಕೊಂಟಾ ಕ್ಷೇತ್ರದ ಬುಡಕಟ್ಟು ಸಮುದಾಯವನ್ನು ಪ್ರತಿನಿಧಿಸುವ ಕವಾಸಿ ಲಖ್ಮಾ, ಕಳೆದ ಐದು ಭಾರಿಯಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿ ವಿಜಯಶಾಲಿಗಳಾಗಿದ್ದಾರೆ. "ನಾನು ಬಡಕುಟುಂಬದಲ್ಲಿ ಜನಿಸಿದವನು. ಹೀಗಾಗಿ ನಾನು ಶಾಲೆಗೆ ಹೋಗಲಿಲ್ಲ ಮತ್ತು ವಿದ್ಯೆ ಕಲಿಯಲಿಲ್ಲ. ಆದರೆ ನನ್ನಂಥಹ ಸಾಮಾನ್ಯನಿಗೆ ಜನರ ಪಕ್ಷವಾಗಿ ಕಾಂಗ್ರೆಸ್ ಅವಕಾಶ ನೀಡಿದ್ದರಿಂದ ಚುನಾವಣೆಯಲ್ಲಿ ಗೆದ್ದು ನಾನು ಅಧಿಕಾರಕ್ಕೆ ಬಂದಿದ್ದೇನೆ. ನನಗಿರುವ ಸಾಮಾನ್ಯ ಜ್ಞಾನದಿಂದಲೆ ಆಡಳಿತ ನಡೆಸುತ್ತೇನೆ. ಕಳೆದ 20 ವರ್ಷದಿಂದ ನಾನು ನನ್ನ ಸಾಮಾನ್ಯ ಜ್ಞಾನದಿಂದಲೆ ಶಾಸಕನಾಗಿ ಆಡಳಿತ ನಡೆಸುತ್ತ ಬಂದಿದ್ದೇನೆ" ಎಂದು ಟೀಕಾಕಾರರಿಗೆ ಲಖ್ಮಾ ತಿರುಗೇಟು ನೀಡಿದ್ದಾರೆ. 

 

ರಾಜಕೀಯಕ್ಕೆ ಸಾಮಾನ್ಯ ಜ್ಞಾನಕ್ಕಿಂತ ಅಗತ್ಯವಾಗಿ ಬೇಕಾಗಿರುವುದು ಶಿಕ್ಷಣ. ಶಿಕ್ಷಣವೇ ಇಲ್ಲದೇ ಹೆಬ್ಬೆಟ್ಟು ಹಾಕುವ ಈ ಸಚಿವರು ಜನರ ಅನುಕಂಪ ಗಿಟ್ಟಿಸಬಹುದೇ ವಿನಃ ಒಳ್ಳೆಯ ಆಡಳಿತ ನೀಡುವುದು ಸಾಧ್ಯವಿಲ್ಲ. ಅನುಭವ ಮತ್ತು ಶಿಕ್ಷಣ ಬಳಕೆಯಾಗಬೇಕಾದ ಕಡೆಗಳಲ್ಲಿ ಅನುಕಂಪ ಬಳಕೆಯಾದರೇ ಜನರ ಗತಿಯೂ ಅನುಕಂಪಕ್ಕೆ ಯೋಗ್ಯವೇ ಆಗೋದರಲ್ಲಿ ಸಂಶಯವಿಲ್ಲ ಅಂತಿದ್ದಾರೆ ರಾಜಕೀಯ ವಿಶ್ಲೇಷಕರು. 


ಸಂಬಂಧಿತ ಟ್ಯಾಗ್ಗಳು

#2018 #Kawasi lakhma # Illiterate minister #Chhattisgarh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ