ಖಡಕ್ ಐಪಿಎಸ್ ಆಫೀಸರ್ ಮಧುಕರ್ ಶೆಟ್ಟಿಗೆ ಅನಾರೋಗ್ಯ!

Pray For IPS officer Madhukar Shetty!

28-12-2018

ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಆರೋಗ್ಯ ಗಂಭೀರವಾಗಿದ್ದು, ಹೈದ್ರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.   ಶಸ್ತ್ರಚಿಕಿತ್ಸೆಗಳ ಬಳಿಕ ಅವರನ್ನು 72 ಗಂಟೆಗಳ ಕಾಲ ಆಬ್ಸರ್ವೇಷನ್‍ನಲ್ಲಿ ಇಡಲಾಗಿದೆ. ವೈದ್ಯರ ತಂಡ ನಿಗಾವಹಿಸಿದೆ. 

ಕೆಲ ದಿನಗಳಿಂದ ಎಚ್1ಎನ್1 ನಿಂದ ಬಳಲುತ್ತಿದ್ದ ಮಧುಕರ್ ಶೆಟ್ಟಿಯವರಿಗೆ ಶ್ವಾಸಕೋಶದ ಸೋಂಕು ಕೂಡ ಕಾಣಿಸಿಕೊಂಡಿತ್ತು. ಅಲ್ಲದೆ ಹೃದಯದ ಕವಾಟಗಳಿಗೆ ಹಾನಿಯಾಗಿದ್ದರಿಂದ ರಕ್ತಪರಿಚಲನೆಯ ಸಮಸ್ಯೆಯನ್ನು ಅವರು ಎದುರಿಸುತ್ತಿದ್ದರು.ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರನ್ನು ಕೃತಕ ಉಸಿರಾಟದಲ್ಲಿ ಇಡಲಾಗಿತ್ತು.  ಇದೀಗ ಮತ್ತೊಂದು ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುವ ಭರವಸೆ ವೈದ್ಯರಿಂದ  ವ್ಯಕ್ತವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೂಡ ಮಧುಕರ ಶೆಟ್ಟಿಯವರ ಚಿಕಿತ್ಸೆಯ ಮಾಹಿತಿ ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿಯವರನ್ನು  ಚಿಕಿತ್ಸೆಯ ಮೇಲ್ವಿಚಾರಣೆಗಾಗಿ ನೇಮಿಸಲಾಗಿದ್ದು, ಅವರು ಹೈದ್ರಾಬಾದ್ ಆಸ್ಪತ್ರೆಗೆ ತೆರಳಿದ್ದಾರೆ. 

ಕರ್ನಾಟಕದ ಉಡುಪಿ ಮೂಲದ ಮಧುಕರ್ ಶೆಟ್ಟಿ ರಾಜ್ಯದ ವಿವಿಧ ಭಾಗಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ತಮ್ಮ ಖಡಕ್ ಹಾಗೂ ಪ್ರಾಮಾಣಿಕ ಕಾರ್ಯವೈಖರಿಯಿಂದ ಮನೆಮಾತಾಗಿದ್ದರು. ಲೋಕಾಯುಕ್ತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಮಧುಕರ್ ಶೆಟ್ಟಿ, ಹಲವು ಪ್ರಮುಖ ರೇಡ್‍ಗಳನ್ನು ಸಂಘಟಿಸಿ ಭ್ರಷ್ಟರಿಗೆ ಆತಂಕ ಮೂಡಿಸಿದ್ದರು. ಆದರೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಕಾರ್ಯವೈಖರಿಯಿಂದ ಬೇಸತ್ತ ಮಧುಕರ್ ಶೆಟ್ಟಿ ಓದಿನ ನೆಪದಲ್ಲಿ ಕರ್ನಾಟಕದಿಂದ ಕೆಲ ವರ್ಷ ದೂರವಿದ್ದರು. ಅವರು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿ ಟೀಕಿಸಿದ್ದರು. 

ವರ್ಷದ ಹಿಂದೆ ರಾಜ್ಯಕ್ಕೆ ವಾಪಸ್ಸಾದ ಮಧುಕರ ಶೆಟ್ಟಿಯವರಿಗೆ ರಾಜ್ಯ ಸರ್ಕಾರ ಅಂತಹ ಒಳ್ಳೆಯ ಹುದ್ದೆಯನ್ನೇನು ನೀಡಿರಲಿಲ್ಲ. ಐಜಿಪಿಯಾಗಿ ಬಡ್ತಿ ಪಡೆದ ಬಳಿಕ ಕೆಲಕಾಲ ಪೊಲೀಸ್ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಕೆಲಸ ನಿರ್ವಹಿಸಿ ಬಳಿಕ ಕೇಂದ್ರದ ಸೇವೆಗೆ ತೆರಳಿದ್ದು, ಪ್ರಸ್ತುತ ಸರ್ದಾರ್ ವಲ್ಲಭಬಾಯ್  ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕರಾಗಿ ಕೆಲಸ  ನಿರ್ವಹಿಸುತ್ತಿದ್ದಾರೆ. 

 ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ್ ಅವರ ಪುತ್ರರಾದ  ಮಧುಕರ್ ಶೆಟ್ಟಿ 1999 ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿ. ಐಪಿಎಸ್‍ಗೂ ಮುನ್ನ ಜೆಎನ್‍ಯು ಯೂನಿವರ್ಸಿಟಿಯಲ್ಲಿ ಮಧುಕರ್ ಶೆಟ್ಟಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಇದೀಗ ಅವರ ಅನಾರೋಗ್ಯದಿಂದ ಕುಟುಂಬವರ್ಗ ಹಾಗೂ ರಾಜ್ಯ ಪೊಲೀಸ್ ಇಲಾಕೆ ಆತಂಕಕ್ಕಿಡಾಗಿದ್ದು, ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

# IPS Officer # In Hospital #Madhukar Shetty #H1N1


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ