ಪಕ್ಷದ ವಿರುದ್ಧವೇ ತಿರುಗಿ ಬಿದ್ರಾ ಕೇಂದ್ರ ಸಚಿವರು?

Union Minister Turn Against Party ?

27-12-2018


ದೇಶ ರಾಜಕೀಯದ ದಿಕ್ಸೂಚಿ ಎಂದು ಬಣ್ಣಿಸಲ್ಪಡುತ್ತಿರುವ 2019 ರ ಲೋಕಸಭಾ ಮಹಾಸಂಗ್ರಾಮಕ್ಕೆ ದೇಶ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಕಮಲ ಪಾಳಯದಲ್ಲಿ ಭಿನ್ನಮತ ಭುಗಿಲೇಳುವ ಮುನ್ಸೂಚನೆ ದಟ್ಟವಾಗುತ್ತಿದೆ. ಬಿಜೆಪಿಯ ನಾಯಕರಾಗಿ ತ್ರಿಶಂಕು ಸ್ಥಿತಿಯಲ್ಲಿದ್ದ ಅರುಣ್ ಶೌರಿ, ಶತ್ರುಘ್ನ ಸಿನ್ಹಾ ಹಾಗೂ ಯಶ್ವಂತ ಸಿನ್ಹಾ ಪಕ್ಷವನ್ನು ಕಟುವಾಗಿ ಟೀಕಿಸುತ್ತಿದ್ದರು. ಈಗ ಈ ಸಾಲಿಗೆ ಕೇಂದ್ರ ಸಚಿವರು ಕೂಡ ಸೇರ್ಪಡೆಯಾಗಿದ್ದಾರೆ. ಇದು ನಿಜಕ್ಕೂ ಬಿಜೆಪಿಯ ಆಂತರಿಕ ಭಿನ್ನಮತ ಎಲ್ಲೇ ಮೀರುತ್ತಿದೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತಿದೆ. 

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಪಕ್ಷದ ಸಂಸದರನ್ನು, ಶಾಸಕರನ್ನು ಹಾಗೂ ರಾಷ್ಟ್ರೀಯ ನಾಯಕರನ್ನು ಟೀಕಿಸುವ ಮೂಲಕ ಪೂರ್ಣಪ್ರಮಾಣದ ಭಿನ್ನಾಭಿಪ್ರಾಯ ಪ್ರದರ್ಶಿಸಿದ್ದಾರೆ. ಶಾ ವಿರುದ್ಧ ಅತ್ಯಂತ ಮೊನಚಾಗಿ ಟೀಕಿಸುವ ಮೂಲಕ ತಮ್ಮ ಅಸಮಧಾನ ಹೊರಹಾಕಿದ್ದಾರೆ. ಮೋದಿಯನ್ನು ಹೊಗಳಿ ತಮ್ಮ ಸೀಟು ಭದ್ರಗೊಳಿಸಿಕೊಳ್ಳುತ್ತಿರುವವರು ಒಂದೆಡೆಯಾದರೆ ಸಚಿವರಾಗಿದ್ದು, ಪಕ್ಷವನ್ನು ಟೀಕಿಸುತ್ತಿರುವರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ ಎಂಬುದನ್ನು ದೃಡಪಡಿಸುತ್ತಿದ್ದಾರೆ ಎನ್ನುತ್ತಿದ್ದಾರೆ ರಾಜಕೀಯ ವಿಮರ್ಶಕರು. 

ಹೊಸದಿಲ್ಲಿಯಲ್ಲಿ ಗುಪ್ತಚರ ಇಲಾಕೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ನಾನೇನಾದರೂ ಒಂದು ಪಕ್ಷ ಅಧ್ಯಕ್ಷನಾಗಿದ್ದು, ನನ್ನ ಪಕ್ಷದ ಸಂಸದರು, ಶಾಸಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ಅದಕ್ಕೆ ನಾನೇ ಹೊಣೆ. ಯಾಕೆಂದರೆ ಅವರನ್ನು ಸರಿಯಾಗಿ ಕೆಲಸ ಮಾಡುವಂತೆ ಪ್ರೇರೇಪಿಸುವುದು ನನ್ನ ಕೆಲಸ 
ಎನ್ನುವ ಮೂಲಕ ಪರೋಕ್ಷವಾಗಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಸೋಲಿನ ಬಳಿಕವೂ ಪ್ರತಿಕ್ರಿಯೆ ನೀಡಿದ್ದ ನಿತಿನ್ ಗಡ್ಕರಿ, ಗೆಲುವಿಗೆ ಹಲವು ತಂದೆಯಂದಿರಿರುತ್ತಾರೆ. ಆದರೆ ಸೋಲು ಅನಾಥ ಶಿಶುವಾಗಿರುತ್ತದೆ ಎಂದು ಶಾ ವಿರುದ್ದ ಬೊಟ್ಟು ತೋರಿಸಿದ್ದರು.  

ಕಾರಣ ಎನೇ ಇರಲಿ. ಮುಂದಿನ ದಿನಗಳಲ್ಲಿ ಬಿಜೆಪಿಯ ಈ ಆಂತರಿಕ ಕಲಹ ಇನ್ನಷ್ಟು ರೋಚಕವಾಗಿ ಕಾಂಗ್ರೆಸ್‍ನ  ಕಣ್ಣಿಗೆ ತಂಪೆರೆಯುವುದರಲ್ಲಿ ಅನುಮಾನವಿಲ್ಲ. ಈ ಮಧ್ಯೆ ದಿನದಿಂದ ದಿನಕ್ಕೆ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ. ಇಷ್ಟು ದಿನಗಳ ಕಾಲ ತನ್ನ ಸಂಗಾತಿಗಳ ಹೆಗಲನ್ನು ಆಶ್ರಯಿಸಿದ್ದ ಕಾಂಗ್ರೆಸ್ ಈಗ ಸ್ವತಂತ್ರವಾಗಿ ಚುನಾವಣೆ ಎದುರಿಸಲು  ಸಿದ್ಧವಾಗಿರುವುದು ಬಿಜೆಪಿ ಪಾಳಯದ ಮತ್ತಷ್ಟು  ಆತಂಕಕ್ಕೆ ಕಾರಣವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Union Minister #Turn Against Party #Nitin Gadkari #Amith sha


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ