ಒಕ್ಕಲಿಗರ ವಾರ್ ನಲ್ಲಿ ಯಾರು ವಿಲನ್?

Who Is Villain In Okkliga War ?

27-12-2018

ಲೋಕಸಭಾ ಮಹಾಸಂಗ್ರಾಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಪಂಚ ರಾಜ್ಯದಲ್ಲಿ ಮುಖಭಂಗ ಅನುಭವಿಸಿರುವ ಬಿಜೆಪಿ ಸೋಲಿನ ವಿಮರ್ಶೆಯಲ್ಲಿ ತೊಡಗಿದೆ. ಆದರೆ ರಾಜ್ಯದಲ್ಲಿ  ಬಹುಮತ ಪಡೆದು ಅಧಿಕಾರ ಪಡೆಯುವಲ್ಲಿ ಸೋತ ಬಿಜೆಪಿಯಲ್ಲಿ ಮಾತ್ರ ಒಕ್ಕಲಿಗರ ಆಂತರಿಕ ಅಸಮಧಾನ ಕೊನೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಲೋಕಸಭೆಗೂ ಮುನ್ನ ಈ ಒಳಜಗಳ ಕೊನೆಯಾಗದಿದ್ದಲ್ಲಿ ಬಿಜೆಪಿಗೆ ನಷ್ಟ ಕಟ್ಟಿಟ್ಟ ಬುತ್ತಿ.

ರಾಜ್ಯ ಬಿಜೆಪಿಯ ಪ್ರಬಲ ಒಕ್ಕಲಿಗ ನಾಯಕರುಗಳಾದ ಆರ್.ಅಶೋಕ್, ಸಿ.ಟಿ.ರವಿ, ಸದಾನಂದ ಗೌಡರ ನಡುವೆ ಒಮ್ಮತ ಮೂಡುತ್ತಿಲ್ಲ. ಆರ್.ಅಶೋಕ ವಿರುದ್ಧವಂತೂ ದೂರುಗಳ ಮೇಲೆ ದೂರು ಸಲ್ಲಿಕೆಯಾಗುತ್ತಿದೆ.  ಆರ್.ಅಶೋಕ್ ಗೆ ಎಲ್ಲ ಹುದ್ದೆ ಸಿಕ್ಕಿದ್ದರೂ, ಪಕ್ಷಕ್ಕಾಗಿ ಅವರ ಕೊಡುಗೆ ಶೂನ್ಯ. ಪಕ್ಷಕ್ಕೆ ಅಗತ್ಯವಿರುವ ಆರ್ಥಿಕ ಸಹಾಯವನ್ನು ಕೂಡ ಅಶೋಕ್ ಒದಗಿಸುತ್ತಿಲ್ಲ. ಇನ್ನು ದೇವೆಗೌಡರ ಕುಟುಂಬದ ಜೊತೆಗೆ ಅವರು ಆತ್ಮೀಯವಾದ ಸಂಬಂಧ ಹೊಂದಿರುವುದು ಕೂಡ ಕಮಲ ಪಾಳಯದ ಕೆಂಗಣ್ಣಿಗೆ ಕಾರಣವಾಗಿದೆ. ಅವರ ಒಳ ಒಪ್ಪಂದದಿಂದ ಬಹಳ ಹಿಂದಿನಿಂದಲೂ ಸ್ವಾರ್ಥ ಸಾಧಿಸುತ್ತಾರೆಯೇ ವಿನಃ ತಮ್ಮ ಕೆಳಗೆ  ನಾಯಕತ್ವ ಬೆಳೆಸುವುದಿಲ್ಲ ಎಂಬ ಮಾತಿದೆ. 

ಇನ್ನು ಸಿ.ಟಿ.ರವಿ ಪಕ್ಷದ ಸಂಕಷ್ಟದ ಸಂದರ್ಭದಲ್ಲಿ ನೈತಿಕವಾಗಿ ಪಕ್ಷವನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡುವ ಮೂಲಕವಾದರೂ ಸ್ಪಂದಿಸುತ್ತಿದ್ದಾರೆ. ಆದರೆ ಆರ್.ಅಶೋಕ ಅಂತಹ ಸಂದರ್ಬದಲ್ಲೂ ಕೂಡ ಪಕ್ಷಕ್ಕೆ ಅಂಟಿಯೂ ಅಂಟದಂತೆ ವರ್ತಿಸುತ್ತಾರೆ ಎಂಬ ಆರೋಪವಿದೆ. ಕೇಂದ್ರ ಸಚಿವ ಅನಂತಕುಮಾರ್ ನಿಧನದಿಂದ ಈಗಾಗಲೆ ಬೆಂಗಳೂರು ಬಿಜೆಪಿ ಸೇರಿದಂತೆ ರಾಜ್ಯ ಬಿಜೆಪಿಗೆ ನಷ್ಟವಾಗಿದೆ. ಆದರೆ ಎಲ್ಲರನ್ನು ಮುನ್ನಡೆಸುವ  ಶಕ್ತಿ ಇದ್ದರೂ ಆರ್.ಅಶೋಕ್ ಮೌನವಾಗಿದ್ದಾರೆ. ಬಿಎಸ್‍ವೈ ಕೂಡ ಆರ್.ಅಶೋಕರನ್ನು ಸಾಧ್ಯವಾದಷ್ಟು ದೂರವಿಡೋ ಪ್ರಯತ್ನವನ್ನೇ ಮಾಡುತ್ತಿದ್ದಾರೆ.  

ಇನ್ನು ಡಿ.ವಿ.ಸದಾನಂದ ಗೌಡರು ಕೂಡ ಒಕ್ಕಲಿಗರನ್ನು ಪಕ್ಷದತ್ತ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಈ ಮೂರೂ ಒಕ್ಕಲಿಗ ನಾಯಕರು, ಒಬ್ಬರನ್ನು ಒಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡದ ಸ್ಥಿತಿ ಇದೆ. ಹೀಗಾಗಿ ಈ ನಾಯಕರು ಒಂದಾಗಿ ಒಕ್ಕಲಿಗ ಮತಗಳನ್ನು ಬಿಜೆಪಿಗೆ ಒಗ್ಗೂಡಿಸಿ ಕೊಡುತ್ತಾರೆ ಎಂಬ ಬಿಜೆಪಿ ವರಿಷ್ಠರ ಲೆಕ್ಕಾಚಾರ ತಲೆಕೆಳಗಾಗುತ್ತಿದೆ. ಇದು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮುಳುವಾಗುತ್ತಿದೆ. ಲೋಕಸಭಾ ಚುನಾವಣೆಗೆ ಮುನ್ನ ರಾಜ್ಯ ಬಿಜೆಪಿ ಎಚ್ಚೆತ್ತುಕೊಂಡಲ್ಲಿ  ಮುಂದಾಗಬಹುದಾದ ನಷ್ಟವನ್ನು ತಡೆಯಬಹುದು. ಇಲ್ಲವಾದರೆ ಒಕ್ಕಲಿಗರ ನಾಯಕರ ಒಳಜಗಳಕ್ಕೆ ಬಿಜೆಪಿ ಬಡವಾಗೋದು ಗ್ಯಾರಂಟಿ ಅನ್ನೋದು ಬಿಜೆಪಿ ಕಾರ್ಯಕರ್ತರ ಆತಂಕ. 


ಸಂಬಂಧಿತ ಟ್ಯಾಗ್ಗಳು

#State Bjp #Who is Villain #Okkaliga War #R.Ashok


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ