ಹಿಂದೂ ಹೃದಯ ಸಾಮ್ರಾಟನಾಗಿ ಮುಸ್ಲಿಂ ನಟ...!

 Muslim Actor as Hindu Heart Empire

27-12-2018

ಹಿಂದೂ ಹುಲಿ ಎಂದೇ ಬಿಂಬಿತವಾಗುವ ಶಿವಸೇನೆ ಸ್ಥಾಪಕ ಬಾಳಠಾಕ್ರೆ ಜೀವನ ಹಾಗೂ ಸಾಧನೆ ಆಧಾರಿತ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಬಾಳಠಾಕ್ರೆ ಪಾತ್ರವನ್ನು  ನವಾಜುದ್ಧಿನ ಸಿದ್ಧಿಕಿ  ನಿರ್ವಹಿಸಲಿದ್ದು, ಚಿತ್ರ ಹೊಸವರ್ಷದಲ್ಲಿ ಅಂದ್ರೆ ಜನವರಿ 25 ರಂದು ಹಿಂದಿ ಮತ್ತು ಮರಾಠಿಯಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ಶಿವಸೇನೆಯ ಸಂಜಯ ರಾವತ್ ಚಿತ್ರ ನಿರ್ಮಿಸಿದ್ದು, ಚಿತ್ರಕತೆಯನ್ನು ಅವರೇ ಸಿದ್ಧಪಡಿಸಿದ್ದಾರೆ. 

ಅಭಿಜಿತ್ ಪನ್ಸೆ ಚಿತ್ರ ನಿರ್ದೇಶಿಸಿದ್ದು, ಬಾಳಠಾಕ್ರೆ  ಹೇಗೆ ಮಹಾರಾಷ್ಟ್ರದ ಒಬ್ಬ ಬಲಿಷ್ಠ ನಾಯಕರಾಗಿ ಹೊರ ಹೊಮ್ಮಿದರು ಎಂಬುದನ್ನು ಈ ಸಿನಿಮಾ ವಿವರವಾಗಿ ದಾಖಲಿಸಿದೆ. ಈಗಾಗಲೆ ಮೂರು ನಿಮಿಷದ  ಟ್ರೇಲರ್  ಕೂಡ ಬಿಡುಗಡೆಯಾಗಿದ್ದು, ಮೆಚ್ಚುಗೆ ಗಳಿಸಿದೆ.  

ಅಚ್ಚರಿ ಎಂದರೆ, ತಮ್ಮ ನೇರವಾದ ವಾಗ್ದಾಳಿ ಹಾಗೂ ಹೋರಾಟಗಳಿಂದ  ಹಿಂದು-ಮುಸ್ಲಿಂ ದಂಗೆಗೆ  ಪರೋಕ್ಷವಾಗಿ ಕಾರಣರಾಗಿದ್ದ ಹಾಗು ಹಿಂದುತ್ವದ  ಕಿಚ್ಚು ಹಚ್ಚಿದ್ದ ಬಾಳಠಾಕ್ರೆಯವರ ಪಾತ್ರದಲ್ಲಿ  ಮುಸ್ಲಿಂ ನಟನೊಬ್ಬ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಠಾಕ್ರೆ ಕುಟುಂಬದ ಅನುಮೋದನೆ ಕೂಡ ದೊರೆತಿದೆ. 

ಇನ್ನು ಚಿತ್ರದಲ್ಲಿ ಬಳಸಲಾಗಿರುವ ಬಾಳ ಠಾಕ್ರೆಯವರ, ಬಾಬ್ರಿ ಮಸೀದಿ ಹಾಗೂ ದಕ್ಷಿಣ ಭಾರತೀಯರ ವಿರುದ್ಧದ ಕಟುವಾದ ಹೇಳಿಕೆಗಳನ್ನು ತೆಗೆಯಲು ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ಸೂಚಿಸಿದೆ. ಆದರೆ ಇದಕ್ಕೆ ಠಾಕ್ರೆಯವರ ಕುಟುಂಬ ಸದಸ್ಯರು ಅಸಮಧಾನ ವ್ಯಕ್ತಪಡಿಸಿದ್ದು,  ಆ ಸಂಭಾಷಣೆಗಳನ್ನು ತೆಗೆಯುವ ಅಗತ್ಯವಿಲ್ಲ. ಯಾಕೆಂದರೆ ಅದು ಅವರ ವ್ಯಕ್ತಿತ್ವದ ಭಾಗವೇ ಆಗಿತ್ತು ಎಂದಿದ್ದಾರೆ. 

ಚಿತ್ರ ನಿರ್ಮಿಸುತ್ತಿರುವ ಸಂಜಯ್ ರಾವತ್, ಒಂದೊಮ್ಮೆ ಯಾವುದೇ ಸಂಭಾಷಣೆಗಳು ಚಿತ್ರದ ಬಿಡುಗಡೆಗೆ ಅಡ್ಡಿಯಾಗುವಂತಿದ್ದರೆ ಅಂಥ ಸಂಭಾಷಣೆಗಳನ್ನು ಕೈಬಿಡಲು ತೊಂದರೆ ಇಲ್ಲ ಎಂದಿದ್ದಾರೆ. ಈ ಚಿತ್ರ ಸಾಕಷ್ಟು  ಕುತೂಹಲ  ಮೂಡಿಸಿದ್ದು,  ಮಹಾರಾಷ್ಟ್ರದಲ್ಲಿ ಯಶಸ್ವಿಯಾಗೋದರಲ್ಲಿ  ಸಂದೇಹವಿಲ್ಲ.  ಸಿದ್ಧಿಕಿಯವರನ್ನು ಬಾಳಠಾಕ್ರೆ ರೂಪದಲ್ಲಿ ಅವರ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಸಧ್ಯದ ಕುತೂಹಲ. 


ಸಂಬಂಧಿತ ಟ್ಯಾಗ್ಗಳು

# bal thackeray movie #Nawazuddin siddiqui # Muslim Actor #as Hindu Heart Empire


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ