ಸಿದ್ದು ಬೇಳೆ-ಕಾಂಗ್ರೆಸ್ ಬೆಂಕಿ, ಕೈಪಾಳಯಕ್ಕೆ ಪೀಕಲಾಟ!

Because Off Siddu Congres Facing Problem

26-12-2018

ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರ ಪಾಲಿಗೆ ತಲೆನೋವಾಗಿ ಪರಿಣಮಿಸಿರೋದು ಏನೂ ಹೊಸದಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಸಿದ್ಧರಾಮಯ್ಯನವರು ತಮ್ಮ ಸಿಡುಕುತನ ಹಾಗೂ ಹಟಮಾರಿ ಧೋರಣೆಯಿಂದಲೇ ಪಕ್ಷದ ಹಿರಿಯರಿಗೆ ಮುಜುಗರ ತಂದಿದ್ದರು. ಈಗಲೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೈಪಾಳಯಕ್ಕೆ ಬಿಸಿತುಪ್ಪವಾಗಿದ್ದಾರೆ. ಸಚಿವ ಸಂಪುಟದ ವಿಸ್ತರಣೆ ವೇಳೆಯಂತೂ ಸಿದ್ದು ಪಕ್ಷದ ಹಿತಾಸಕ್ತಿಯನ್ನು ಕಡೆಗಣಿಸಿ, ಕಾಂಗ್ರೆಸ್ಸಿಗರ ಅಸಮಧಾನದ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ ಅನ್ನೋ ಮಾತು ಕೇಳಿಬಂದಿದೆ. 

 ಸಮ್ಮಿಶ್ರ ಸರ್ಕಾರ ರಚನೆಯ ಬಳಿಕ ಮೊದಲ ಸಚಿವ ಸಂಪುಟದಲ್ಲಿ ಹಿರಿಯ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಲಾಗಿತ್ತು. ಆದರೆ ಸಚಿವ ಸಂಪುಟ ವಿಸ್ತರಣೆಯೆಂಬ ಆಕಾಶದ ನಕ್ಷತ್ರ ತೋರಿಸಿದ್ದ ಹೈಕಮಾಂಡ ಮಾತು ನಂಬಿ ಬಹುತೇಕರು ಸುಮ್ಮನಾಗಿದ್ದರು. ಹೀಗಿರುವಾಗ ಮೊನ್ನೆ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ಸಿದ್ಧರಾಮಯ್ಯ ತಮ್ಮ ಎಲ್ಲ ರಾಜಕೀಯ ತಂತ್ರಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಾಳಯಕ್ಕೆ ತಮ್ಮ ಅಸಲಿ ಆಟ  ತೋರಿಸಿದ್ದಾರೆ. 

 ಕಾಂಗ್ರೆಸ್ ನ ಮೂಲಗಳು ನೀಡುತ್ತಿರುವ ಮಾಹಿತಿ ಪ್ರಕಾರ ಕೈಪಾಳಯದಲ್ಲಿ ಸಿದ್ಧರಾಮಯ್ಯನವರಿಂದಲೇ ಒಂದಷ್ಟು ಅಸಮಧಾನಗಳು ಸೃಷ್ಟಿಯಾಗುತ್ತಿದೆ. ಎಲ್ಲರೊಂದಿಉಢಾಪೆಯಿಂದಲೆ ವರ್ತಿಸುವ ಸಿದ್ಧರಾಮಯ್ಯ, ಸಂದರ್ಭ ಯಾವುದೇ ಇದ್ದರೂ, ತಮ್ಮ ಆಪ್ತರಿಗೆ ಮಣೆ ಹಾಕಲು ಹವಣಿಸುವುದು ಮೂಲ ಕಾಂಗ್ರೆಸ್ಸಿಗರಿಗೆ ಹಾಗೂ ಪಕ್ಷಕ್ಕಾಗಿ ದುಡಿದ ಕೈನಾಯಕರಿಗೆ ಕಿರಿಕಿರಿ ಉಂಟು ಮಾಡಿದೆ. 
    ತಮ್ಮ ಆಪ್ತ ವಲಯದ  ಕೆ.ಜೆ.ಜಾರ್ಜ, ಸತೀಶ್ ಜಾರಕಿಹೊಳಿ, ಎಂ.ಟಿ.ಬಿ.ನಾಗರಾಜ್ ಮುಂತಾದವರಿಗೆ ಅನುಕೂಲ ಮಾಡಲು ಸದಾ ಸಿದ್ಧರಾಗಿರುವ ಸಿದ್ದರಾಮಯ್ಯ,  ಕೆಲವೊಮ್ಮೆ ನೇರವಾಗಿಯೇ ಪಕ್ಷಕ್ಕೆ  ಮುಜುಗರ ತಂದಿಟ್ಟಿರುವ ನಿದರ್ಶನಗಳು ಅನೇಕ. ಪಕ್ಷ ಏನೇ ಆಗಲಿ. ಯಾರು ಎಲ್ಲಿಗಾದರೂ ಹೋಗಲಿ, ಆದರೆ ತಮಗೆ ಬೇಕಾದವರಿಗೆ ಅವರಿಗೆ ಬೇಕಾದ್ದು ಸಿಕ್ಕೇ ಸಿಗಬೇಕು ಎಂಬ ಧೋರಣೆ ಸಿದ್ದರಾಮಯ್ಯನವರದ್ದು.

ಸಚಿವ ಸಂಪುಟ ವಿಸ್ತರಣೆಯ ವೇಳೆಯಲ್ಲಿ ಸಿದ್ಧು ಬಹಿರಂಗವಾಗಿ ತಮ್ಮ ಆಶಯಗಳನ್ನು ಈಡೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್‍ಗೆ ಸೆಡ್ಡು ಹೊಡೆದಂತೆ ನಿಂತುಬಿಟ್ಟರು. ರಮೇಶ್ ಜಾರಕಿಹೊಳಿಯವರನ್ನು ಸಂಪುಟದಿಂದ ಕೈ ಬಿಡೋದು ಕಾಂಗ್ರೆಸ್‍ಗೆ ಮುಳುವಾಗುವ ಸಾಧ್ಯತೆ ಇದ್ದರೂ ಕೂಡ  ಸಿದ್ದು ರಮೇಶ್ ಕೈಬಿಟ್ಟು ಸತೀಶ್ ಸೇರಿಸಿಕೊಳ್ಳುವ ಮೂಲಕ ಸರ್ಕಾರವನ್ನೇ ಅಪಾಯಕ್ಕೆ ಒಡ್ಡಿದರು ಅಂದ್ರೂ ತಪ್ಪಿಲ್ಲ. ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡಿದ್ರೂ ಕೂಡ ಅಸಮಧಾನ ಅಲ್ಲಿಗೆ ತಣ್ಣಗಾಗಿದೆ ಎಂದುಕೊಂಡ್ರೆ ಅದು ಸಿದ್ದರಾಮಯ್ಯನವರ ಭ್ರಮೆ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.  


ಸಂಬಂಧಿತ ಟ್ಯಾಗ್ಗಳು

#Siddaramayya #Careless #Congres #Cabinet Expansion


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ