ಪ್ರಜಾತಂತ್ರ ಮರೆತರಾ ಸಿಎಂ?

26-12-2018
ತಮ್ಮ ಪಕ್ಷದ ಕಾರ್ಯಕರ್ತನ ಹತ್ಯೆಯ ಬಳಿಕ ಸಿಎಂ ಕುಮಾರಸ್ವಾಮಿ ನೀಡಿದ "ಎನಕೌಂಟರ್" ಹೇಳಿಕೆ ರಾಜ್ಯದಾದ್ಯಂತ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ.
ಸಂವಿಧಾನ ಬದ್ಧವಾಗಿ ಪ್ರಜಾಪ್ರಭುತ್ವವನ್ನು ಗೌರವಿಸುವ ಹಾಗೂ ಪಾಲಿಸುವ ಆಣೆ ಮಾಡಿ ಮುಖ್ಯಮಂತ್ರಿ ಕುರ್ಚಿ ಏರಿದ ಕುಮಾರಸ್ವಾಮಿಯವರಿಗೆ ಕನಿಷ್ಠ ಕಾರ್ಯಾಂಗದ ಜವಾಬ್ದಾರಿಯ ಅರಿವು ಇಲ್ಲವೇ ಪ್ರಜ್ಞಾವಂತ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಕುಮಾರಸ್ವಾಮಿಯವರಿಗೆ ಪ್ರಜಾತಂತ್ರದ ಅರಿವಿನ ಕೊರತೆ ಇದೆ ಎಂಬ ಟೀಕೆಯೂ ವ್ಯಕ್ತವಾಗಿದೆ.
ಜೆಡಿಎಸ್ ಕಾರ್ಯಕರ್ತ ಹಾಗೂ ತಮ್ಮ ಆತ್ಮೀಯ ಪ್ರಕಾಶ್ ಹತ್ಯೆಯ ವಿಚಾರ ತಿಳಿಯುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡುತ್ತಲೇ ಸಿಎಂ, ಪೊಲೀಸ್ ಅಧಿಕಾರಿಗೆ ದೂರವಾಣಿಯಲ್ಲಿ ಎನ್ಕೌಂಟರ್ ಮಾಡಿ ಎಂಬ ಆದೇಶ ನೀಡಿದ್ದರು. ಆದರೆಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗದ ಮುಖ್ಯಸ್ಥರಾಗಿರುವ ಸಿಎಂ ಕುಮಾರಸ್ವಾಮಿಗಾಗಲಿ, ಅಥವಾ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸ್ ಅಧಿಕಾರಿಗಳಾಗಲಿ ಆರೋಪಿಗಳ ಶಿಕ್ಷೆ ಪ್ರಮಾಣವನ್ನು ನಿರ್ಧರಿಸುವ ಹಕ್ಕಿಲ್ಲ. ಕೇವಲ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದಷ್ಟೇ ಇಲಾಖೆಯ ಕೆಲಸ.
ಮುಖ್ಯಮಂತ್ರಿಗಳಾಗಿ ಪ್ರಕರಣದ ಪಾರದರ್ಶಕ ತನಿಖೆಗೆ ಆದೇಶಿಸುವುದು ಹಾಗೂ ಅಗತ್ಯಬಿದ್ದರೇ ಹೆಚ್ಚಿನ ತನಿಖಾತಂಡವನ್ನು ರಚಿಸಲು ಮುಖ್ಯಮಂತ್ರಿಗಳು ಆದೇಶ ನೀಡಬಹುದು. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ವೈಯಕ್ತಿಕ ಕಾರಣಕ್ಕೆ ಹತ್ಯೆ ನಡೆದಿರುವ ಶಂಕೆ ಕೂಡ ವ್ಯಕ್ತವಾಗಿದ್ದು, ತನಿಖೆಯಿಂದ ಪ್ರಕರಣದ ಇನ್ನಷ್ಟು ಮುಖಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಹೀಗಿರುವಾಗಲೇ ಹಿಂದೆ ಮುಂದೇ ಯೋಚಿಸದೇ, ಸಿಎಂ ಕುಮಾರಸ್ವಾಮಿಯವರು ತಮ್ಮ ಹುದ್ದೆಯ ಘನತೆ ಮರೆತು ಈ ರೀತಿ ಹೇಳಿಕೆ ನೀಡಿರುವುದು ರಾಜಕೀಯ ಅಂಗಳದಲ್ಲೂ ಟೀಕೆಗೊಳಗಾಗಿದೆ. ಅಲ್ಲದೇ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹತ್ಯೆಗಳು ನಡೆದ ವೇಳೆ ಕುಮಾರಸ್ವಾಮಿಯವರು ಯಾಕೆ ತಮ್ಮ ಪ್ರತಿಕ್ರಿಯೆ ನೀಡಲಿಲ್ಲ ಎಂದು ಬಿಜೆಪಿ ಮುಖಂಡರು ಪ್ರಶ್ನಿಸುತ್ತಿದ್ದಾರೆ.
ಕುಮಾರಸ್ವಾಮಿಯವರು ಜೆಡಿಎಸ್ ಪಕ್ಷದ ಮುಖ್ಯಸ್ಥರು. ಅವರಿಗೆ ಪಕ್ಷದ ಕಾರ್ಯಕರ್ತರ ಬಗ್ಗೆ ಅಪಾರವಾದ ಕಾಳಜಿ, ಪ್ರೀತಿ ಇರಬಹುದು. ಆದರೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಒಂದು ರಾಜ್ಯದ ಮುಖ್ಯಮಂತ್ರಿ. ಹೀಗಾಗಿ ಎಲ್ಲ ಘಟನೆಯನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಸಮಚಿತ್ತದಿಂದ ವಿಶ್ಲೇಷಿಸಿ ಪ್ರತಿಕ್ರಿಯಿಸಿಬೇಕೆ ವಿನಃ ಒಂದು ಗುಂಪಿನ ನಾಯಕರಂತೆ ವರ್ತಿಸುವುದು ಶೋಭೆ ತರುವುದಿಲ್ಲ. ಅಲ್ಲ. ಅಲ್ಲದೇ ಕುಮಾರಸ್ವಾಮಿಯವರಿಗೆ ವೈಯಕ್ತಿಕ ಅಭಿಪ್ರಾಯ ಹಾಗೂ ಸಿಎಂ ಅಭಿಪ್ರಾಯ ಎಂಬ ಎರಡು ಆಯ್ಕೆಗಳಿಲ್ಲ. ಸಿಎಂ ಪದವಿ ಎನ್ನುವುದು 24 ಗಂಟೆಗಳ ಹುದ್ದೆ ಎಂಬುದನ್ನು ಅವರು ಮರೆಯಬಾರದು.ಕರ್ನಾಟಕದಂತಹ ಪ್ರಜ್ಞಾವಂತ ಮತದಾರರಿರುವ ನಾಡಿನ ಮುಖ್ಯಮಂತ್ರಿಗಳಾಗಿ, ಮಾಜಿ ಪ್ರಧಾನಿ ದೇವೆಗೌಡರ ಪುತ್ರರಾಗಿ ಸಿಎಂ ಕುಮಾರಸ್ವಾಮಿಯವರಿಗೇ ಪ್ರಜಾಪ್ರಭುತ್ವ ಅರ್ಥವಾಗದೇ ಇರೋದು ದುರಂತ ಅಂತಿದ್ದಾರೆ ಸಾಮಾನ್ಯ ಜನರು.
ಒಂದು ಕಮೆಂಟನ್ನು ಹಾಕಿ