ನಾಯಕರೇ ಗೈರು ಹಾಜರಾಗಿರುವುದು ತಂತ್ರವೇ?

Is it a strategy for absentee leaders?

10-12-2018

ಬೆಳಗಾವಿ.ಡಿ.10: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಡಿಸೆಂಬರ್ 22ರ ಮುಹೂರ್ತ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ಹಾಜರಾತಿ ವಿಧಾನಮಂಡಲ ಅಧಿವೇಶನದಲ್ಲಿ ಎದ್ದು ಕಾಣುತ್ತಿದ್ದು, ನಾಯಕರೇ ಗೈರು ಹಾಜರಾಗಿರುವುದು ಶಾಸಕರಲ್ಲಿ ನಿರಾಸೆ ಮೂಡಿಸಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾರಗಳ ಕಾಲ ಮಲೇಷ್ಯಾ ಪ್ರವಾಸ ತೆರಳಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವೈಯಕ್ತಿಕ ನೆಪವೊಡ್ಡಿ ಅಧಿವೇಶನದಿಂದ ದೂರ ಉಳಿದಿದ್ದಾರೆ. ಮತ್ತೊಂದೆಡೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಆರೊಗ್ಯ ವಿಚಾರಿಸಲು ಚೆನ್ನೈಗೆ ತೆರಳಿದ್ದಾರೆ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಯಾರ ಬಳಿ ಲಾಬಿ ನಡೆಸಬೇಕೆಂದು ತಿಳಿಯದೇ ಸುಸ್ತಾಗಿದ್ದಾರೆ.

ಇನ್ನು ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಹಿರಿಯ ನಾಯಕರ ಪೈಕಿ ಶಾಮನೂರು ಶಿವಶಂಕರಪ್ಪ, ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ ಸೇರಿದಂತೆ ಇನ್ನಿತರ ಶಾಸಕರೂ ಮೊದಲನೇ ದಿನದ ಕಲಾಪದಲ್ಲಿ ಪಾಲ್ಗೊಂಡಿದ್ದರು. ಶಾಸಕರಾದ ಬಿ.ಸಿ.ಪಾಟೀಲ್, ಬಿ.ಕೆ.ಸಂಗಮೇಶ್ವರ್, ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ ಮತ್ತಿತರರು ಹಾಜರಿದ್ದರೆ, ಅಖಂಡ ಶ್ರೀನಿವಾಸಮೂರ್ತಿ, ಡಾ.ಸುಧಾಕರ್, ನಾಗೇಂದ್ರ, ಆನಂದ್ ಸಿಂಗ್ ಗೈರು ಹಾಜರಾಗಿದ್ದಾರೆ. ಮತ್ತೊಬ್ಬ ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿ ಹಿರಿಯ ಮುಖಂಡ ಎಂ.ಬಿ.ಪಾಟೀಲ್ ಅಧಿವೇಶನದಿಂದ ದೂರ ಉಳಿದಿರುವುದು ಗಮನಾರ್ಹ.

ಸಿದ್ದರಾಮಯ್ಯ ಮುಂದಿನ ಸೋಮವಾರದಿಂದ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದು, ಆ ವೇಳೆಗೆ ಶಾಸಕರ ಲಾಬಿ ತೀವ್ರಗೊಳ್ಳುವ ನಿರೀಕ್ಷೆ ಇದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಡಿ.22ಕ್ಕೆ ಆಗುತ್ತದೆ ಎಂಬ ವಿಶ್ವಾಸದಲ್ಲಿರುವ ಶಾಸಕರು ಮತ್ತೊಂದೆಡೆ ಧನುರ್ಮಾಸದ ಹಿನ್ನೆಲೆಯಲ್ಲಿ ವಿಸ್ತರಣೆ ಸಾಧ್ಯವಿಲ್ಲ ಎಂದೂ ಗೊಣಗುಡುತ್ತಿದ್ದಾರೆ. ಆದರೆ ಸಂಪುಟ ವಿಸ್ತರಣೆ ಆಗಿಯೇ ತೀರುತ್ತದೆ ಎಂದು ಯಾರೂ ಒಪ್ಪಿಕೊಳ್ಳುತ್ತಿಲ್ಲ. ಈ ನಡುವೆಯೇ ಪ್ರಮುಖ ನಾಯಕರು ಗೈರು ಹಾಜರಾಗಿರುವುದು ತಮ್ಮ ಮೇಲೆ ಉಂಟಾಗ ಬಹುದಾದ ಶಾಸಕರ ಒತ್ತಡದಿಂದ ತಪ್ಪಿಸಿಕೊಳ್ಳುವ ತಂತ್ರ ಎನ್ನಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

ನಾಯಕ ಸಿದ್ದರಾಮಯ್ಯ Belgaum Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ