ಮೊಟ್ಟಮೊದಲ ಆನೆ ಆಸ್ಪತ್ರೆ...

The first elephant hospital ...

19-11-2018

ಇಲ್ಲಿಯವರೆಗೂ ನಮ್ಮ ದೇಶದಲ್ಲಿ ಪಶುಕಿತ್ಸಾಲಯಗಳಲ್ಲೇ ಎಲ್ಲ ಪ್ರಾಣಿ ಮತ್ತು ಪಕ್ಷಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇದೀಗ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಚುರ್‌ಮುರಾ ಗ್ರಾಮದಲ್ಲಿ ದೇಶದ ಮೊಟ್ಟಮೊದಲ ಆನೆ ಆಸ್ಪತ್ರೆ ಆರಂಭವಾಗಿದೆ. ಇಲ್ಲಿ, ಗಾಯಗೊಂಡ ಆನೆಗಳು, ರೋಗಪೀಡಿತ ಆನೆಗಳು ಮತ್ತು ವಯಸ್ಸಾದ ಆನೆಗಳಿಗೆ ಚಿಕಿತ್ಸೆ ನೀಡುವ ಎಲ್ಲ ವ್ಯವಸ್ಥೆ ಇದೆ. ವೈರ್‌ಲೆಸ್ ಡಿಜಿಟಲ್ ಎಕ್ಸ್‌ರೇ, ಥರ್ಮಲ್ ಇಮೇಜಿಂಗ್, ಅಲ್ಟ್ರಾಸೋನೋಗ್ರಫಿ, ಅರಿವಳಿಕೆ ನೀಡುವ ಉಪಕರಣಗಳು ಮತ್ತು ಆನೆಗಳನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ಕೊಡುವ ಎಲ್ಲ ಸೌಲಭ್ಯಗಳೂ ಇಲ್ಲಿವೆ.

ಚಿಕಿತ್ಸೆ ನೀಡುವ ಸಲುವಾಗಿ ಆನೆಗಳನ್ನು ಕಟಕಟೆಯಲ್ಲಿ ನಿರ್ಬಂಧಿಸುವ ಮತ್ತು ಅಗತ್ಯಬಿದ್ದರೆ ಆನೆಗಳನ್ನು ನೆಲದಿಂದ ಮೇಲಕ್ಕೆ ಎತ್ತಿ, ಆರೈಕೆ ಮಾಡುವ ಮತ್ತು ಚಿಕಿತ್ಸೆಗಾಗಿ ಒಳಾಂಗಣದಲ್ಲೇ ಸಾಕಷ್ಟು ದಿನ ಇರಿಸಿಕೊಳ್ಳುವ ಎಲ್ಲ ಆಧುನಿಕ ಸೌಲಭ್ಯಗಳೂ ಈ ಆಸ್ಪತ್ರೆಯಲ್ಲಿವೆ.

ಯಮುನಾ ನದಿಯ ದಂಡೆಗೆ ಹತ್ತಿರದಲ್ಲೇ ಇರುವ ಈ ಆಸ್ಪತ್ರೆಯಲ್ಲಿ, ಆನೆಗಳಿಗೆ ಚಿಕಿತ್ಸೆ ನೀಡುವುದನ್ನು ನೋಡುವುದೇ ಒಂದು ಆಕರ್ಷಣೆಯಾಗಿದೆ. ಪ್ರತಿದಿನ ದೇಶ, ವಿದೇಶಗಳ ಪ್ರವಾಸಿಗರು ಇಲ್ಲಿಗೆ ಲಗ್ಗೆಯಿಡುತ್ತಿದ್ದಾರೆ. ಆನೆಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಅವುಗಳನ್ನು ನೋಡಲು ಒಂದು ವೀಕ್ಷಣಾ ಅಟ್ಟಣಿಗೆ ನಿರ್ಮಿಸಲಾಗಿದೆ. ಪಶುವೈದ್ಯಕೀಯ ವಿದ್ಯಾರ್ಥಿಗಳು ಇಲ್ಲಿ ಕುಳಿತು ಆನೆಗಳ ಚಿಕಿತ್ಸಾ ವಿಧಾನ ಮತ್ತು ಅವುಗಳ ವರ್ತನೆಯನ್ನು ಗಮನಿಸಬಹುದಾಗಿದೆ. ಸದ್ಯಕ್ಕೆ ಇಲ್ಲಿ 22 ಆನೆಗಳು ಚಿಕಿತ್ಸೆ ಪಡೆಯುತ್ತಿವೆ.

ಭಾರತದಲ್ಲಿ ಆನೆ ಅನ್ನುವುದು ಕೇವಲ ಪ್ರಾಣಿಯಲ್ಲ. ಅದು ಎಲ್ಲರಿಗಿಂತಲೂ ಮೊದಲು ಪೂಜಿಸಲ್ಪಡುವ ವಿಘ್ನನಿವಾರಕ ಗಣೇಶನ ಸ್ವರೂಪ. ಹೀಗಾಗಿ, ದೇಶದಲ್ಲಿ ಆನೆಗಳಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವೂ ಇದೆ. ಹೀಗಿದ್ದರೂ ಕೂಡ, ಆನೆಗಳ ವರ್ತನೆ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲದ ಮಾವುತರು ಆನೆಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಇದರಜೊತೆಗೆ ಅಕ್ರಮ ವಿದ್ಯುತ್ ಬೇಲಿಗಳು, ವಿಷಪ್ರಾಶನ, ರೈಲು, ವಾಹನಗಳ ಡಿಕ್ಕಿ ಮತ್ತು ದಂತ ಚೋರರ ಬಂದೂಕಿಗೂ ಆನೆಗಳು ಬಲಿಯಾಗುತ್ತಿವೆ. ಇವೆಲ್ಲ ಕಾರಣಗಳಿಂದಾಗಿ, ದೇಶದಲ್ಲಿ ದಿನದಿಂದ ದಿನಕ್ಕೆ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ